ಉಳ್ಳಾಲ: ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆ.26ರಂದು ತಲಪಾಡಿಯ ವಿಶ್ವಾಸ್ ಆಡಿಟೋರಿಯಂನಲ್ಲಿ ಗಡಿನಾಡ ಕನ್ನಡ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಹೇಳಿದರು.
ತಲಪಾಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು. ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಶಿಕ್ಷಣ ಮತ್ತು ಗಡಿನಾಡಿನ ಸಮಸ್ಯೆಗಳ ವಿಚಾರ ಮಂಡನೆ, ಬಹುಬಾಷಾ ಕವಿಗೋಷ್ಠಿ ನಡೆಯಲಿದೆ ಎಂದರು.
ಕಾರ್ಯಕ್ರಮವನ್ನು ಕರ್ನಾಟಕ ವಿಧಾನನಸಭೆಯ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭಾಗವಹಿಸುವರು. ಪ್ರಾಧ್ಯಾಪಕ ಟಿ.ಎ.ಎನ್.ಖಂಡಿಗೆ ಗಡಿನಾಡಿನ ಸಾಹಿತ್ಯ ಪರಂಪರೆ ಕುರಿತು ಉಪನ್ಯಾಸ ನೀಡಲಿದ್ದಾರೆ. ವಾಣಿಶ್ರೀ ಕಾಸರಗೋಡು ನೇತೃತ್ವದದಲ್ಲಿ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಬಹುಭಾಷಾ ಕವಿಗೋಷ್ಠಿಯಲ್ಲಿ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಲಿದ್ದು, ಕನ್ನಡದಲ್ಲಿ ಪ್ರಭಾಕರ ಕಲ್ಲೂರಾಯ, ಮಹಮ್ಮದ್ ಸಿಂಸಾರುಲ್ ಹಕ್ ಪುತ್ತೂರು, ತುಳುವಿನಲ್ಲಿ ರಾಜಶ್ರೀ ರೈ ಪೆರ್ಲ, ಬ್ಯಾರಿ ಭಾಷೆಯಲ್ಲಿ ಮನ್ಸೂರ್ ಮೂಲ್ಕಿ, ಕೊಂಕಣಿಯಲ್ಲಿ ಥಾಮಸ್ ಡಿಸೋಜ ಎಂ.ಎಸ್.ಸೀತಂಗೋಳಿ, ಮಲಯಾಳಂನಲ್ಲಿ ರಾಘವನ್ ಬೆಳ್ಳಿಪ್ಪಾಡಿ, ಹವ್ಯಕ ಭಾಷೆಯಲ್ಲಿ ನರಸಿಂಹ ಭಟ್ ಏತಡ್ಕ, ಮರಾಠಿ, ಚಿತ್ಪಾವನ ಭಾಷೆಯಲ್ಲಿ ವಿಘ್ನೇಶ್ ಭಿಡೆ, ಕರಾಡ ಭಾಷೆಯಲ್ಲಿ ಸಂಧ್ಯಾಗೀತ, ಉರ್ದುವಿನಲ್ಲಿ ಮೊಹಮ್ಮದ್ ಅಜಿಮ್ ಮನಿಮುಂಡ ಕವತ ವಾಚಿಸಲಿದ್ದಾರೆ. ಸಂವಾದ ಗೋಷ್ಠಿಯಲ್ಲಿ ಪಿ.ಎನ್.ಮೂಡಿತ್ತಾಯ ಕಾಸರಗೋಡು, ಸಂವಾದಕರಾಗಿ ಆಯೀಶಾ ಎ.ಎ.ಪೆರ್ಲ, ಡಾ.ಎಂ.ಅಣ್ಣಯ್ಯ ಕುಲಾಲ್, ಡಾ.ಯಶುಕುಮಾರ್, ಸಂಯೋಜಕರಾಗಿ ವೀರೇಶ್ವರ್ ಭಟ್ ಕರ್ಮಕರ್ ಭಾಗವಹಿಸಲಿದ್ದಾರೆ ಎಂದರು.
ಗೌರವಾಧ್ಯಕ್ಷ ಅರಿಬೈಲು ಗೋಪಾಲ ಶೆಟ್ಟಿ ಮಾತನಾಡಿ, ಸಮಾರೋಪದ ಸಮಾರಂಭದಲ್ಲಿ ರಮಾನಂದ ಬನಾರಿ, ಮಲಾರು ಜಯರಾಮ ರೈ, ಬಿ.ಎಸ್.ಹಸನಬ್ಬ ಅಮ್ಮೆಂಬಳ, ಪ್ರಮೀಳಾ ಮಾಧವ, ಪುರುಷೋತ್ತಮ ಪೆರ್ಲ ಅವರನ್ನು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್ ಸನ್ಮಾನಿಸಲಿದ್ದಾರೆ ಎಂದರು.
ಗಡಿಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಮನ್ವಯಕಾರ ಸುಬ್ಬಯ್ಯ ಕಟ್ಟೆ, ಜಿ.ವೀರೇಶ್ವರ್ ಭಟ್ ಕರ್ಮರ್ಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.