ADVERTISEMENT

ತಲಪಾಡಿ ಗ್ರಾ.ಪಂ: ಬಿಜೆಪಿ ಬೆಂಬಲಿತರ ಬಲದಿಂದ ಎಸ್‌ಡಿಪಿಐಗೆ ಅಧ್ಯಕ್ಷ ಸ್ಥಾನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 10:45 IST
Last Updated 10 ಆಗಸ್ಟ್ 2023, 10:45 IST
   

ಉಳ್ಳಾಲ(ದಕ್ಷಿಣ ಕನ್ನಡ): ತಲಪಾಡಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಎಸ್‌ಡಿಪಿಐ ಬೆಂಬಲಿತ ಟಿ.ಇಸ್ಮಾಯಿಲ್‌ ಅಧ್ಯಕ್ಷರಾಗಿ, ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಬಿಜೆಪಿ ಬೆಂಬಲಿತರು ಎಸ್‌ಡಿಪಿಐ ಬೆಂಬಲಿತ ಸದಸ್ಯರನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸತ್ಯರಾಜ್‌ ಪರಾಭವಗೊಂಡರು.

ಪಂಚಾಯಿತಿಯಲ್ಲಿ ಒಟ್ಟು 24 ಸದಸ್ಯರ ಪೈಕಿ 13 ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ, ಒಬ್ಬರು ಕಾಂಗ್ರೆಸ್‌ ಹಾಗೂ 10 ಎಸ್‌ಡಿಪಿಐ ಬೆಂಬಲಿತರು ಇದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ವೈಭವ್ ವೈ. ಶೆಟ್ಟಿ ಮತ್ತು ಎಸ್‌ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರು ಹಾಜರಾಗಿದ್ದರು. ‌

ADVERTISEMENT

ಟಿ ಇಸ್ಮಾಯಿಲ್‌ ಮತ್ತು ಸತ್ಯರಾಜ್‌ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇತ್ತು. ಇಬ್ಬರೂ ಸಮನಾದ ಮತಗಳನ್ನು ಪಡೆದಿದ್ದರು. ನಂತರ ಚುನಾವಣಾಧಿಕಾರಿ ಆದೇಶದಂತೆ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಟಿ.ಇಸ್ಮಾಯಿಲ್‌ ಗೆಲುವು ಸಾಧಿಸಿದರು. ಬಿಜೆಪಿ ಬೆಂಬಲಿತರ ಸಂಖ್ಯೆ ಹೆಚ್ಚಿದ್ದರೂ, ಅವರಲ್ಲಿ ಇಬ್ಬರು ಎಸ್‌ಡಿಪಿಐ ಬೆಂಬಲಿತರಿಗೆ ಪರವಾಗಿ ಮತಚಲಾಯಿಸಿದ ಕಾರಣ ಸಮಬಲ ಬಂದಿತ್ತು. ಸತ್ಯರಾಜ್‌ ಅವರು ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಹೂ ಹಾರಗಳನ್ನು ತಂದಿದ್ದರು.

ಚುನಾವಣಾಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.