ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಅಡಿಯಲ್ಲಿ 2023–24ನೇ ಸಾಲಿನಲ್ಲಿ ರಾಜ್ಯದ ವಿವಿಧೆಡೆಗಳ ಒಟ್ಟು 193 ಕೆರೆಗಳ ಪುನಶ್ಚೇತನ ಕಾರ್ಯ ನಡೆಸಲಾಗಿದೆ ಎಂದು ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್. ತಿಳಿಸಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ 2016ರಲ್ಲಿ ಪ್ರಾರಂಭವಾಗಿರುವ ಕಾರ್ಯಕ್ರಮದಡಿ ಈವರೆಗೆ 760 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದ್ದು, ಅವುಗಳಲ್ಲಿ 315 ಕೆರೆಗಳು ಬರಗಾಲದಲ್ಲಿಯೂ ಜಲದಿಂದ ನಳನಳಿಸುತ್ತಿದ್ದವು. ಈ ವರ್ಷ ₹13.44 ಕೋಟಿ ವೆಚ್ಚದಲ್ಲಿ ನಡೆಸಿದ 193 ಕೆರೆಗಳ ಅಭಿವೃದ್ಧಿ ಕಾರ್ಯದಲ್ಲಿ ಎಂಟು ಎಂಜಿನಿಯರ್‌ಗಳು, 125 ನೋಡಲ್ ಅಧಿಕಾರಿಗಳು, ಕೆರೆ ಸಮಿತಿಗಳ 965ಕ್ಕೂ ಹೆಚ್ಚು ಪದಾಧಿಕಾರಿಗಳು ಜಲಯೋಧರಾಗಿ ದುಡಿದಿದ್ದಾರೆ. ಹೂಳು ಸಾಗಣೆಗೆ ರೈತರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆದ ಕಾರ್ಯದಿಂದಾಗಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಕೆರೆಗಳ ದುರಸ್ತಿಗೆ 522 ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳು, 4,212ಕ್ಕೂ ಹೆಚ್ಚು ಟ್ರ್ಯಾಕ್ಟರ್, ಟಿಪ್ಪರ್‌ಗಳನ್ನು ಬಳಕೆ ಮಾಡಲಾಗಿದೆ. ಬಂಟ್ವಾಳದ ಕಲ್ಕುಟ ಕೆರೆ, ರಾಮನಗರದ ಚಿಕ್ಕಲಾಚಮ್ಮರವರು ತಮ್ಮ ಸ್ವಂತ ಜಮೀನನ್ನು ದಾನ ಮಾಡಿ ನಿರ್ಮಿಸಿ ಕೊಟ್ಟ ಚಿಕ್ಕಲಾಚಮ್ಮನ ಕೆರೆ, ಔಷಧೀಯ ಗುಣಹೊಂದಿರುವ ಹನೂರು ಉಗೇನಿಯಾ ದೊಡ್ಡ ಕೆರೆ,
ಕೆ.ಆರ್.ಪೇಟೆಯ ಬಿಲ್ಲರಾಮನಹಳ್ಳಿ ಕೆರೆ, ಭದ್ರಾವತಿಯ ರಂಗನಾಥಪುರ ಪುನಶ್ಚೇತನಗೊಂಡಿರುವ ಪ್ರಮುಖ ಕೆರೆಗಳು. ಇವುಗಳನ್ನು ಮುಂದಿನ ನಿರ್ವಹಣೆಗಾಗಿ ಕೆರೆ ಸಮಿತಿ, ಗ್ರಾಮ ಪಂಚಾಯಿತಿಗಳಿಗೆ ವಹಿಸಿಕೊಡಲಾಗುತ್ತದೆ. ಕೆರೆ ಸುತ್ತ ಮಳೆಗಾಲದಲ್ಲಿ ಗಿಡ ನಾಟಿ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಪುನಶ್ಚೇತನಗೊಂಡ ಒಟ್ಟು ಕೆರೆಗಳು;760
ಪುನಶ್ಚೇತನಗೊಂಡ ಕೆರೆಗಳ ವಿಸ್ತೀರ್ಣ;6131 ಎಕರೆ
ತೆಗೆದ ಹೂಳಿನ ಪ್ರಮಾಣ;203 ಲಕ್ಷ ಕ್ಯು.ಮೀ
ಹೆಚ್ಚಳವಾಗಿರುವ ನೀರಿನ ಸಂಗ್ರಹಣಾ ಸಾಮರ್ಥ್ಯ;2318 ಕೋಟಿ ಲೀಟರ್
ಪ್ರಯೋಜನವಾಗಿರುವ ಕೃಷಿಭೂಮಿ;2.20 ಲಕ್ಷ ಎಕರೆ
ಪ್ರಯೋಜನ ಪಡೆದ ಕುಟುಂಬಗಳು;3.60 ಲಕ್ಷ
ಸಂಸ್ಥೆಯಿಂದ ನೀಡಿದ ಅನುದಾನ;₹58.14 ಕೋಟಿ
ಹೂಳು ಸಾಗಾಟದ ಮೌಲ್ಯ (ಸ್ಥಳೀಯರಿಂದ);₹51.11 ಕೋಟಿ
ಒತ್ತುವರಿ ತೆರವುಗೊಳಿಸಿದ ಪ್ರದೇಶ; 305 ಎಕರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.