ADVERTISEMENT

ಸಂಬಂಧಗಳ ದೂರ ಮಾಡಿದ ತಂತ್ರಜ್ಞಾನ: ಎಸ್. ನರೇಂದ್ರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 4:30 IST
Last Updated 9 ನವೆಂಬರ್ 2024, 4:30 IST
<div class="paragraphs"><p>ಸಮಾವೇಶದಲ್ಲಿ ನಟ ದೇವದಾಸ್ ಕಾಪಿಕಾಡ್,‌ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಹಾಗೂ ನಿರ್ದೇಶಕ ಶಿವಧ್ವಜ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು &nbsp;&nbsp;&nbsp;</p></div>

ಸಮಾವೇಶದಲ್ಲಿ ನಟ ದೇವದಾಸ್ ಕಾಪಿಕಾಡ್,‌ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಹಾಗೂ ನಿರ್ದೇಶಕ ಶಿವಧ್ವಜ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು    

   

ಪ್ರಜಾವಾಣಿ ಚಿತ್ರ

ಮಂಗಳೂರು: ‘ಸ್ಮಾರ್ಟ್ ಫೋನ್‌ಗಳು ಒಳಗೊಂಡಂತೆ ತಂತ್ರಜ್ಞಾನದ ಸ್ಫೋಟವು ಜಗತ್ತನ್ನು ಹತ್ತಿರ ಮಾಡಿದಂತೆ ಭಾಸವಾದರೂ ವಾಸ್ತವದಲ್ಲಿ ಸಂಬಂಧಗಳು ಈಚೆಗೆ ದೂರವಾಗಿವೆ ಎಂಬುದನ್ನು ಅಧ್ಯಯನಗಳ ವರದಿಗಳು ದೃಢಪಡಿಸಿವೆ’ ಎಂದು ಭಾರತದ ನಾಲ್ವರು ಮಾಜಿ ಪ್ರಧಾನಮಂತ್ರಿಗಳಿಗೆ ಮುಖ್ಯ ಸಾರ್ವಜನಿಕ ಸಂರ್ಕಾಧಿಕಾರಿಯಾಗಿದ್ದ ಎಸ್. ನರೇಂದ್ರ ಅಭಿಪ್ರಾಯಪಟ್ಟರು.

ADVERTISEMENT

ನಗರದಲ್ಲಿ ಶುಕ್ರವಾರ ನಡೆದ ಪಬ್ಲಿಕ್ ರಿಲೇಷನ್ ಆಫ್ ಇಂಡಿಯಾದ ಜಾಗತಿಕ ಮಟ್ಟದ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ‘ಸ್ಮಾರ್ಟ್ ಫೋನ್‌ ಕೇವಲ ಸಂಪರ್ಕ ಮಾಧ್ಯಮವಾಗಿ ಉಳಿದಿಲ್ಲ. ಅದು, ಜೇಬಿನಲ್ಲಿರುವ ವ್ಯಾವಹಾರಿಕ ಸಾಧನವಾಗಿ ಪರಿವರ್ತನೆಗೊಂಡಿದೆ. ಸ್ಮಾರ್ಟ್ ಫೋನ್ ಮತ್ತು ಕಂಪ್ಯೂಟರ್‌ ಗಳನ್ನು ಸ್ವಿಚ್ ಆಫ್ ಮಾಡಿಟ್ಟರೂ ನಮ್ಮ ಮೇಲೆ ಇನ್ನೊಬ್ಬರು ನಿಗಾ ಇಡಲು ಸಾಧ್ಯ. ತಂತ್ರಜ್ಞಾನ ಈ ಮಟ್ಟಕ್ಕೆ ಬೆಳೆದಿದ್ದರೂ ಕುಟುಂಬದಲ್ಲಿ ವೈಯಕ್ತಿಕ ಸಂಬಂಧಗಳು ಕುಸಿಯುತ್ತಿವೆ’ ಎಂದರು.

‘ಅಧ್ಯಯನವೊಂದರ ಪ್ರಕಾರ ಕೆಲವು ವರ್ಷಗಳ ಹಿಂದೆ ಮನೆಯ ಹಿರಿಯರಿಗೆ ಕುಟುಂಬದ ಸದಸ್ಯರ ಜೊತೆ ಪ್ರತಿ ದಿನ ಸರಾಸರಿ 16 ಸಾವಿರ ಪದಗಳನ್ನು ಆಡುವ ಅವಕಾಶ ಲಭಿಸುತ್ತಿತ್ತು. ಆದರೆ ಈಚೆಗೆ ಅದು 5 ಸಾವಿರ ಪದಗಳಿಗೆ ಕುಸಿದಿದೆ. ತಂತ್ರಜ್ಞಾನವು ಈಚೆಗೆ ಮನುಷ್ಯನನ್ನು ತನ್ನ ದಾಸನನ್ನಾಗಿ ಮಾಡಿ, ಸಮಯ ಹಾಳುಮಾಡಲು ಪ್ರೇರೇಪಿಸುತ್ತಿದೆ. ಡಿಜಿಟಲ್ ಜಗತ್ತು ಮಾನವಕುಲವನ್ನೇ ಅಲುಗಾಡಿಸುತ್ತಿದೆ. ಇಂಥ ಪರಿಸ್ಥಿತಿಯಿಂದ ಬಿಡುಗಡೆ ಬೇಕಾಗಿದೆ’ ಎಂದು ಅವರು ಹೇಳಿದರು.

ಸಮ್ಮೇಳನ ಉದ್ಘಾಟಿಸಿದ ಎಡಿ ಫ್ಯಾಕ್ಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮದನ್ ಬೇಲ್, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಿದ್ದು ವೇಗವಾಗಿ ಸಾಗುತ್ತಿದೆ. ಇಂಥ ಸಂದರ್ಭದಲ್ಲಿ ಮಾಧ್ಯಮ ಸಂವಹನವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದರು.

ಮೇಯರ್ ಮನೋಜ್ ಕುಮಾರ್ ಕೋಡಿಕಲ್, ನಿವೃತ್ತ ಐಎಎಸ್ ಅಧಿಕಾರಿ ಚಕ್ರವರ್ತಿ ಮೋಹನ್, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವೇಣುಗೋಪಾಲ್, ಪೋಷಕ ಎಂ.ಬಿ. ಜಯರಾಮ್, ಸಮ್ಮೇಳನದ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಪಬ್ಲಿಕ್ ರಿಲೇಷನ್ ಆಫ್ ಇಂಡಿಯಾದ ಅಧ್ಯಕ್ಷೆ ಗೀತಾ ಶಂಕರ್, ವೈಸಿಸಿ ಮುಖ್ಯಸ್ಥೆ ಚಿನ್ಮಯಿ ಪ್ರವೀಣ್ ಇದ್ದರು. ನಿಖಿಲ್ ನಿರೂಪಿಸಿದರು.

ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್, ನಟ ದೇವದಾಸ್ ಕಾಪಿಕಾಡ್,‌ ನಿರ್ದೇಶಕ ಶಿವಧ್ವಜ ಶೆಟ್ಟಿ,  ಗಾಯಕ ರಮೇಶ್ಚಂದ್ರ, ಪತ್ರಕರ್ತ ಬಾಲಸುಬ್ರಹ್ಮಣ್ಯ ಅವರನ್ನು ಸನ್ಮಾನಿಸ ಲಾಯಿತು. ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ ಅವರ ‘ನಿಮ ಗಾಗಿಯೇ ಆಯ್ದು ಪೋಣಿಸಿದ ನುಡಿ ಮುತ್ತುಗಳು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.