ADVERTISEMENT

ಜೆರೋಸಾ ಶಾಲೆ ಪ್ರಕರಣ| ತನಿಖೆಗೆ ಐಎಎಸ್ ಅಧಿಕಾರಿ ನೇಮಕ: ಸಚಿವ ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 8:22 IST
Last Updated 17 ಫೆಬ್ರುವರಿ 2024, 8:22 IST
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ   

ಮಂಗಳೂರು: ನಗರದ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಧರ್ಮ ನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಹಾಗೂ ಅದರ ನಂತರದ ಬೆಳವಣಿಗೆಗಳ ಕುರಿತು ತನಿಖೆ ನಡೆಸಲು ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಶಿಕ್ಷಣ‌ ಇಲಾಖೆ ಕಲಬುರಗಿಯ ಹೆಚ್ಚುವರಿ ಆಯುಕ್ತರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಈ ಸಂಬಂಧ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಶೀಘ್ರ ವರದಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಎಂದರು.

'ಶಿಕ್ಷಕಿ ಪಾಠ ಮಾಡುವಾಗ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಶಾಸಕರು, ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು. ಅವರ ನಡವಳಿಕೆಯಿಂದ ಬೇಸರವಾಗಿದೆ. ಘಟನೆ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಶಾಸಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿಯವರು ಹೇಳಿದಾಕ್ಷಣ ಪ್ರಕರಣ ಹಿಂಪಡೆಯಲಾಗದು. ತನಿಖೆ ನಡೆಯುತ್ತಿದ್ದು, ತಪ್ಪು ಎಸಗಿದ್ದು ದೃಢಪಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ' ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಶಿಕ್ಷಕಿಗೆ ಸಿಆರ್‌ಐ ಬೆಂಬಲ

ಮಂಗಳೂರು: ಕಾನ್ಫರೆನ್ಸ್ ಆಫ್ ರಿಲೀಜಿಯಸ್ ಇಂಡಿಯಾ (ಸಿಆರ್‌ಐ) ಮಂಗಳೂರು ಘಟಕದ ಅಡಿಯಲ್ಲಿ ಬರುವ ಎಲ್ಲ ಕಥೋಲಿಕ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಸ್ಟರ್‌ಗಳು ಸೇರಿದಂತೆ 300ಕ್ಕೂ ಹೆಚ್ಚು ಜನರು ಸೇಂಟ್ ಜೆರೋಸಾ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕಿಯ ಜೊತೆಗಿರುವುದಾಗಿ ಹೇಳಿದ್ದಾರೆ.

ಶನಿವಾರ ಇಲ್ಲಿನ ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ಸಭಾಭವನದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಆರ್‌ಐ ಮಂಗಳೂರು ಘಟಕದ ಅಧ್ಯಕ್ಷೆ ಸಿಸ್ಟರ್ ಸೆವರಿನ್ ಅವರು, ‘ಶಾಲೆಯ ಇಂಗ್ಲಿಷ್ ಶಿಕ್ಷಕಿ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದೆ. ಶಿಕ್ಷಕಿ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರು ಜನಪ್ರತಿನಿಧಿಯಾಗಿ, ದ್ವೇಷದ ವಾತಾವರಣ ಸೃಷ್ಟಿಸಿದ್ದು ಖಂಡನೀಯ’ ಎಂದರು.

‘ವಿನಾಕಾರಣ ಆರೋಪದಿಂದ ನೊಂದಿರುವ ಶಾಲೆಯ ಶಿಕ್ಷಕಿ, ಮಕ್ಕಳು, ಶಾಲೆಯ ಆಡಳಿತ ಮಂಡಳಿ ಜೊತೆ ಸಿಆರ್‌ಐ ನಿಲ್ಲುತ್ತದೆ. ನ್ಯಾಯದ ಪರ ನಿಂತ ಶಾಲೆಯ ಬದ್ಧತೆಯನ್ನು ಬೆಂಬಲಿಸುತ್ತದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆದು, ಸತ್ಯಾಂಶ ಹೊರಬರಬೇಕು. ಈ ಕುರಿತು ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದರು.

‘ಸಮಾಜದ ಉದ್ಧಾರಕ್ಕಾಗಿ ಕೆಲಸ ಮಾಡುವ ನಮಗೆ ಸಮಾಜವೇ ಕುಟುಂಬವಿದ್ದಂತೆ. ಜೊತೆಗಿರುವ ಸಮಾಜವೇ ನಮ್ಮ ಬೆನ್ನಿಗೆ ಚೂರಿ ಚುಚ್ಚಿದ್ದು ತುಂಬಾ ನೋವುಂಟು ಮಾಡಿದೆ. ತಪ್ಪುದಾರಿಗೆಳೆಯುವ ಸಂದೇಶವನ್ನು ಸಾಮಾಜಿಕ ಮಾಧ್ಯಮದ ಮೂಲಕ ಹರಿಯಬಿಡುವುದರಿಂದ ಪ್ರಕರಣ ಆರಂಭವಾಯಿತು. ಜೆರೋಸಾ ಶಾಲೆಯ ಇಂಗ್ಲಿಷ್ ಶಿಕ್ಷಕಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಬಂದಾಗ, ವಿಚಾರಣೆ ನಡೆಸುವುದಾಗಿ ಮುಖ್ಯ ಶಿಕ್ಷಕಿ ಪೋಷಕರಿಗೆ ಭರವಸೆ ನೀಡಿದರೂ ಫೆ.12ರಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು’ ಎಂದು ತಿಳಿಸಿದರು.

ಸಿಆರ್‌ಐ ಕಾರ್ಯದರ್ಶಿ ನಾನ್ಸಿ, ಪ್ರಮುಖರಾದ ಮೆಲ್ವಿನ್ ಪಿಂಟೊ, ಜೆ.ಬಿ. ಸಲ್ಡಾನ, ರಾಯ್ ಕ್ಯಾಸ್ತಲಿನೊ, ಸಂದೀಪ್ ಪೌಲ್, ವಿನೋದ್ ಮಸ್ಕರೇನಸ್ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.