ನೆಲ್ಯಾಡಿ (ಉಪ್ಪಿನಂಗಡಿ): ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸುವ ವೇಳೆ ವೈದ್ಯಾಧಿಕಾರಿಯೊಬ್ಬರು ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಗೋಳಿತ್ತೊಟ್ಟು ಗ್ರಾಮ ಸಭೆಯಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ.ಶಿಶಿರ ಅವರು ಇಲಾಖೆಯ ಮಾಹಿತಿ ನೀಡುತ್ತಿದ್ದರು.
ಈ ವೇಳೆ ಗ್ರಾಮಸ್ಥ ಡೀಕಯ್ಯ ಪೂಜಾರಿ ಅವರು, ‘ಕಳೆದ ಏಪ್ರಿಲ್‌ನಲ್ಲಿ ಗೋಳಿತ್ತೊಟ್ಟು ಗ್ರಾಮದ ಮಮತಾ ಎಂಬ ವಿದ್ಯಾರ್ಥಿನಿ ಚಿಕಿತ್ಸೆಗಾಗಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ತೆರಳಿದವರು ಅಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣ ಏನು? ನೀವು ಸೂಕ್ತ ಚಿಕಿತ್ಸೆ ನೀಡಿಲ್ಲ’ ಎಂದು ಆರೋಪಿಸಿದರು.
ಅದಕ್ಕೆ ವೈದ್ಯಾಧಿಕಾರಿ ಉತ್ತರಿಸಿ, ‘ಮಮತಾ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಾಗ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ತಕ್ಷಣವೇ ಅವರನ್ನು ಪುತ್ತೂರಿಗೆ ಕಳುಹಿಸಿಕೊಟ್ಟಿದ್ದೇನೆ. ದೂರದಲ್ಲಿದ್ದ ಆಂಬುಲೆನ್ಸ್ ಸ್ಥಳಕ್ಕೆ ಬರಲು 20 ನಿಮಿಷ ತಗುಲಿದ್ದು, ಆ ಅವಧಿಯಲ್ಲಿ ನಾನು ಆ ವಿದ್ಯಾರ್ಥಿನಿಗೆ ತುರ್ತು ಚಿಕಿತ್ಸೆ ನೀಡಿದ್ದೇನೆ. ಬಳಿಕ ಆಕ್ಸಿಜನ್ ಇದ್ದ ಆಂಬುಲೆನ್ಸ್‌ನಲ್ಲಿ ನಾನು ಆಕೆಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂಬ ಮಾಹಿತಿ ನನಗೆ ಬಂದಿದೆ’ ಎಂದು ಹೇಳಿದರು.
‘ಆಕೆ, ಸುಮಾರು 2-3 ತಿಂಗಳ ಹಿಂದೆಯೇ ಅನಾರೋಗ್ಯದಿಂದ ಇದ್ದಳು. ಇದರಿಂದಾಗಿ ಆಕೆ ಕಾಲೇಜಿಗೂ ರಜೆ ಹಾಕಿದ್ದಳು ಎಂಬ ಮಾಹಿತಿಯನ್ನು ಕಾಲೇಜಿನಿಂದ ತಿಳಿದುಕೊಂಡಿದ್ದೇನೆ. ಮೂರು ತಿಂಗಳ ಅವಧಿಯಲ್ಲಿ ಒಂದು ವಾರ ಅವಳು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಅಲ್ಲಿ ಅವಳಿಗೆ ಚಿಕಿತ್ಸೆ ನೀಡಿದ ವೈದ್ಯರು ಮಾನಸಿಕ ಅನಾರೋಗ್ಯದ ಕುರಿತಾಗಿ ಚೀಟಿಯಲ್ಲಿ ಉಲ್ಲೇಖಿಸಿ, ಮಾತ್ರೆಗಳನ್ನು ನೀಡಿದ್ದಾರೆ. ಆಕೆಯ ಮನೆಯವರು ಆಕೆಗೆ ಹಳ್ಳಿ ಮದ್ದು ನೀಡಿದ್ದಾರೆ’ ಎಂದು ವೈದ್ಯೆ ತಿಳಿಸಿದರು.
ಇದಕ್ಕೆ ತೃಪ್ತರಾಗದ ಡೀಕಯ್ಯ, ಆಕೆ ಮೃತಪಡಲು ಕಾರಣ ಏನು ಎಂಬ ಮಾಹಿತಿ ನಮಗೆ ಬೇಕು. ಆಸ್ಪತ್ರೆಯಲ್ಲಿ ಅವಳ ಮೃತದೇಹದ ಮರಣೋತ್ತರ ಪರೀಕ್ಷೆಯನ್ನೂ ಮಾಡಿಲ್ಲ. ಅವರು ಬಡವರೆಂದು ಈ ರೀತಿ ಮಾಡಿದ್ದಿರಾ? ಎಂದು ವೈದ್ಯೆ ಮೇಲೆ ವಿವಿಧ ಆರೋಪ ಮಾಡಿದರು.
ವೈದ್ಯರು ಎಷ್ಟೇ ಸಮಜಾಯಿಷಿ ನೀಡಿದರೂ ಅವರು ತೃಪ್ತರಾಗಲಿಲ್ಲ. ಸಭೆಯಲ್ಲಿದ್ದ ಸಿಬ್ಬಂದಿಯೂ ವೈದ್ಯರ ನೆರವಿಗೆ ಬಂದು ವಿವರಣೆ ನೀಡಿದರು. ಈ ವೇಳೆ ವಿಚಲಿತರಾದ ವೈದ್ಯಾಧಿಕಾರಿ ಡಾ.ಶಿಶಿರ ಕುಸಿದು ಬಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತು. ಬಳಿಕ ಸಭೆ ಮುಂದುವರಿಯಿತು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಎನ್.ರಾಜಗೋಪಾಲ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಲತಾ, ಸದಸ್ಯರಾದ ಬಾಬು ಪೂಜಾರಿ, ಗುಲಾಬಿ, ಜಾನಕಿ, ಸಂಧ್ಯಾ, ನೋಣಯ್ಯ ಗೌಡ, ಜೋಸೆಫ್, ಶೃತಿ, ವಾರಿಜಾಕ್ಷಿ, ಪ್ರಜಲ, ಬಾಲಕೃಷ್ಣ ಗೌಡ, ಸವಿತಾ, ಹೇಮಲತಾ, ಪದ್ಮನಾಭ ಪೂಜಾರಿ, ಶಿವಪ್ರಸಾದ್ ಇದ್ದರು. ಪಿಡಿಒ ಜಗದೀಶ ನಾಯ್ಕ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.