ADVERTISEMENT

ಕೌಕ್ರಾಡಿ: ಸರ್ಕಾರಿ ಜಾಗದಲ್ಲಿದ್ದ ಮನೆ ತೆರವು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 13:21 IST
Last Updated 14 ನವೆಂಬರ್ 2024, 13:21 IST
ಉಪ್ಪಿನಂಗಡಿ ಸಮೀಪ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿದ್ದ ನಿರ್ಮಿಸಿಕೊಂಡಿದ್ದ ಮನೆಯ ತೆರವು ಕಾರ್ಯ ಬುಧವಾರ ನಡೆಯಿತು
ಉಪ್ಪಿನಂಗಡಿ ಸಮೀಪ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿದ್ದ ನಿರ್ಮಿಸಿಕೊಂಡಿದ್ದ ಮನೆಯ ತೆರವು ಕಾರ್ಯ ಬುಧವಾರ ನಡೆಯಿತು    

ನೆಲ್ಯಾಡಿ (ಉಪ್ಪಿನಂಗಡಿ): ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಮುತ್ತುಸ್ವಾಮಿ ಎಂಬುವರು ನಿರ್ಮಿಸಿಕೊಂಡಿದ್ದ ಮನೆಯನ್ನು ಬುಧವಾರ ಕಂದಾಯ ಇಲಾಖೆ ತೆರವುಗೊಳಿಸಿತು. ಕಡಬ ತಹಸೀಲ್ದಾರ್, ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯಿತು.

ಮನೆ ತೆರವುಗೊಳಿಸುವ ಬದಲು ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಮುತ್ತುಸ್ವಾಮಿ –ರಾಧಮ್ಮ ದಂಪತಿ ರಾಷ್ಟ್ರಪತಿಗೆ ಮನವಿ ಮಾಡಿದ್ದರು. ಕಂದಾಯ ಇಲಾಖೆ ಒಮ್ಮೆ ತೆರವು ಕಾರ್ಯಕ್ಕೆ ಮುಂದಾದರೂ, ಸಾರ್ವಜನಿಕರ ಪ್ರತಿಭಟನೆಯಿಂದ ಅದು ಸಾಧ್ಯವಾಗಿರಲಿಲ್ಲ.

ಚಿತ್ರದುರ್ಗ ಮೂಲದವರಾದ ಮುತ್ತುಸ್ವಾಮಿ ಕೂಲಿ ಕೆಲಸಕ್ಕಾಗಿ ಬಂದು, ಆರು ವರ್ಷಗಳ ಹಿಂದೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಸಿಮೆಂಟ್‌ ಶೀಟ್‌ನಿಂದ ಸಣ್ಣ ಮನೆ ನಿರ್ಮಿಸಿಕೊಂಡು ಪತ್ನಿಯೊಂದಿಗೆ ವಾಸವಿದ್ದರು. ಮನೆಯ ಪರಿಸರದಲ್ಲಿ ಬಾಳೆ ಹಾಗೂ ಇತರೆ ಕೃಷಿಯನ್ನು ಮಾಡಿದ್ದರು. ಜಾಗದ ಸಮೀಪವೇ ಸಣ್ಣ ಅಂಗಡಿಯೊಂದನ್ನು ಇಟ್ಟು ವ್ಯಾಪರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು.

ADVERTISEMENT

ಸರ್ಕಾರ ಜಾಗದಲ್ಲಿ ಮನೆ ನಿರ್ಮಿಸಿರುವುದನ್ನು ಪ್ರಶ್ನಿಸಿ ಬೆಳ್ತಂಗಡಿಯ ಅಶೋಕ ಆಚಾರ್ಯ ಎಂಬವರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಕೋರ್ಟ್‌ ಆದೇಶದಂತೆ ಕಂದಾಯ ಇಲಾಖೆ ಬುಧವಾರ ತೆರವು ಕಾರ್ಯ ನಡೆಸಿದೆ.

ಮನೆ ತೆರವುಗೊಳಿಸುವಂತೆ ಮುತ್ತುಸ್ವಾಮಿ ಅವರಿಗೆ ಈ ಹಿಂದೆಯೇ ನೋಟಿಸ್‌ ನೀಡಲಾಗಿತ್ತು. ಅವರಿಗೆ  ಮನೆ, ನಿವೇಶನ ನೀಡುವ ಸಂಬಂಧ ಕ್ರಮ ಕೈಗೊಳ್ಳಲು ಕೌಕ್ರಾಡಿ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಲಾಗಿದೆ’ ಎಂದು ಕಡಬ ತಹಶೀಲ್ದಾರ್‌ ಪ್ರಭಾಕರ ಖಜೂರೆ ಹೇಳಿದರು.

ಕಡಬ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕೌಕ್ರಾಡಿ ಗ್ರಾಮ ಲೆಕ್ಕಾಧಿಕಾರಿ ಸಿದ್ದಲಿಂಗ ಜಂಗಮಶೆಟ್ಟಿ,  ಪಿಡಿಒ ದೇವಿಕಾ, ಮೆಸ್ಕಾಂನ ಸಜಿಕುಮಾರ್ ಇದ್ದರು. ಉಪ್ಪಿನಂಗಡಿ ಎಸ್.ಐ. ಅವಿನಾಶ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ಉಪ್ಪಿನಂಗಡಿ ಸಮೀಪ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿದ್ದ ನಿರ್ಮಿಸಿಕೊಂಡಿದ್ದ ಮನೆಯ ತೆರವು ಕಾರ್ಯ ಬುಧವಾರ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.