ADVERTISEMENT

ನಮ್ಮ ನಾಯಕ ಅಂದು ಗುಹೆಗೆ, ಇಂದು ನೀರಿನಾಳಕ್ಕೆ, ಮುಂದೆ ಚಂದ್ರನ ಮೇಲೆ: ಪ್ರಕಾಶ್ ರೈ

ಡಿವೈಎಫ್‌ಐ ರಾಜ್ಯಮಟ್ಟದ ಸಮ್ಮೇಳನ *ಹೆಸರೆತ್ತದೆಯೇ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್‌ ರೈ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 16:12 IST
Last Updated 27 ಫೆಬ್ರುವರಿ 2024, 16:12 IST
<div class="paragraphs"><p>ಸಮ್ಮೇಳನದಲ್ಲಿ ಸ್ಮರಣಿಕೆಯಾಗಿ ನೀಡಿದ ಸಂವಿಧಾನದ ಪೀಠಿಕೆಯನ್ನು ಪ್ರಕಾಶ್‌ ರೈ ಪ್ರದರ್ಶಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಬಜಾಲ್‌, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಬಜಾಲ್‌ ಹಾಗೂ ಖಜಾಂಚಿ ಬಿ.ಕೆ.ಇಮ್ತಿಯಾಜ್‌ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ</p></div>

ಸಮ್ಮೇಳನದಲ್ಲಿ ಸ್ಮರಣಿಕೆಯಾಗಿ ನೀಡಿದ ಸಂವಿಧಾನದ ಪೀಠಿಕೆಯನ್ನು ಪ್ರಕಾಶ್‌ ರೈ ಪ್ರದರ್ಶಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಬಜಾಲ್‌, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಬಜಾಲ್‌ ಹಾಗೂ ಖಜಾಂಚಿ ಬಿ.ಕೆ.ಇಮ್ತಿಯಾಜ್‌ ಭಾಗವಹಿಸಿದ್ದರು – ಪ್ರಜಾವಾಣಿ ಚಿತ್ರ

   

ಉಳ್ಳಾಲ (ದಕ್ಷಿಣ ಕನ್ನಡ): ‘ನಮ್ಮ ನಾಯಕ ಹೆಂಗೆ ಜನರನ್ನು ಮಂಗ ಮಾಡುತ್ತಿದ್ದಾನೆ ನೋಡಿ; 2019ರಲ್ಲಿ ಕ್ಯಾಮೆರಾಮೆನ್‌ ಜೊತೆ ಗುಹೆ ಸೇರಿಕೊಂಡ. ಈ ಸಲ ಕ್ಯಾಮೆರಾಮನ್ ಜೊತೆ ನೀರಿನಾಳಕ್ಕೆ ಇಳಿದಿದ್ದಾನೆ. ಇನ್ನೂ ಸ್ವಲ್ಪ ಕೆಳಗೆ ಹೋಗಿದ್ದರೆ ದೇಶದ ಸಮಸ್ಯೆಗಳನ್ನಾದರೂ ಸ್ವಲ್ಪ ನೋಡಬಹುದಿತ್ತು. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ...’

ಬಹುಭಾಷಾ ನಟ ಪ್ರಕಾಶ್‌ ರೈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೂ ಎಲ್ಲೂ ಉಲ್ಲೇಖಿಸದೆಯೇ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಪರಿ ಇದು.

ADVERTISEMENT

ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ವತಿಯಿಂದ ಇಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ರಾಜ್ಯ ಮಟ್ಟದ 12ನೇ ಸಮ್ಮೇಳನದ ಸಮಾರೋಪದಲ್ಲಿ ಅವರು ಮಂಗಳವಾರ ಮಾತನಾಡಿದರು.

‘ಹಿಂದೆ ಸ್ವಾತಂತ್ರ್ಯ ತಂದು ಕೊಡಲು ಉಪವಾಸ ಆಚರಿಸುವ ನಾಯಕರಿದ್ದರು. ಈಗ ಇರುವುದು ದೇವಸ್ಥಾನದ ಉದ್ಘಾಟನೆಗಾಗಿ ಉಪವಾಸ ಮಾಡುವ ನಾಯಕ. ಹಾಗಾಗಿ ಸ್ವಾತಂತ್ರ್ಯವನ್ನು, ಪ್ರಜಾಪ್ರಭುತ್ವವನ್ನು ನಮ್ಮ ಕನಸನ್ನು ಸಾರ್ಥಕಗೊಳಿಸುವ ದಾರಿಯನ್ನು ನಾವು ಮತ್ತೆ ನೋಡಿಕೊಳ್ಳಬೇಕಿದೆ’ ಎಂದು ತಿಳಿಸಿದರು.

‘ರಾಜ್‌ಕುಮಾರ್, ಎಂಜಿಆರ್‌, ಎನ್‌ಟಿಆರ್‌ ಅವರಿಗಿಂತಲೂ ದೊಡ್ಡ ನಟ ರಾಜಕಾರಣದಲ್ಲಿದ್ದಾನೆ. ದಿನಕ್ಕೆ ಐದು ಸಲ ಬಟ್ಟೆ ಬದಲಾಯಿಸುತ್ತಾನೆ. ವಂದೇಭಾರತ್‌ ರೈಲುಗಳಿಗೆ ಅವನು ತೋರಿಸಿದಷ್ಟು ಬಾವುಟಗಳನ್ನು ಯಾವ ಸ್ಟೇಷನ್ ಮಾಸ್ಟರ್‌ ಕೂಡಾ ತೋರಿಸಿರಲಿಕ್ಕಿಲ್ಲ’ ಎಂದರು.

‘ಈಗ ಮಂದಿರ ಆಯಿತು. ನಾಳೆ ಜೈ ಶ್ರೀರಾಮ್ ಎಂದು ಶುರು ಮಾಡುತ್ತಾರೆ. ಈ ಸಲ ಮತ್ತೆ ಗೆದ್ದರೆ ಇನ್ನೇನು ನೋಡಬೇಕೋ. ಇವರು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಆ ಬಳಿಕ ಬ್ರಾಹ್ಮಣ, ಕ್ಷತ್ರಿಯ ಎಂದು ಮತ್ತೆ ಶುರು ಮಾಡುತ್ತಾರೆ. ಇವರಿಗೆ ಬೇಕಾಗಿರುವುದೂ ಅದೇ. ಮಕ್ಕಳ ವಿದ್ಯಾಬ್ಯಾಸದಲ್ಲಿ ಇವರಿಗೆ ಆಸಕ್ತಿ ಇಲ್ಲ. ಸುಳ್ಳು ಪದವಿ ಹಿಡಿದು ಓಡಾಡುವವನಿಗೆ ವಿದ್ಯೆಯ ಮಹತ್ವ, ಬಡವರ ಹಸಿವಿನ ಮಹತ್ವ ಹೇಗೆ ತಿಳಿಯಬೇಕು. ಅಣಬೆ ತಿನ್ನುವುದು, ದಿನಕ್ಕೈದು ಸಲ ಬಟ್ಟೆ ಬದಲಾಯಿಸುವುದು, ಪ್ರಪಂಚ ಸುತ್ತುವುದು ನಮ್ಮ ತೆರಿಗೆ ದುಡ್ಡಿನಲ್ಲಿ ತಾನೆ’ ಎಂದು ಪ್ರಶ್ನಿಸಿದರು.

‘ಮಸೀದಿ ಅಗೆದರೆ ಮಂದಿರ ಸಿಗಬಹುದು. ಅದರ ಕೆಳಗೂ ಅಗೆದರೆ ಬುದ್ಧನೂ ಸಿಗಬಹುದಲ್ಲವೇ. ಎಷ್ಟೆಂದು ಅಗೆಯುತ್ತಾ ಹೋಗುತ್ತೀರಿ. ಮರಳಿ ಶಿಲಾಯುಗಕ್ಕೆ ಹೋಗುತ್ತೀರಾ’ ಎಂದರು.

‘ಎಷ್ಟು ಕೋಟಿ ಕೊಟ್ಟಿದ್ದೇವೆ ರಾಮಮಂದಿರಕ್ಕೆ. ಅದು ಎಲ್ಲಿ ಹೋಯಿತೆಂದೇ ಗೊತ್ತಾಗಿಲ್ಲ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ರಾಮಮಂದಿರ ಕಟ್ಟಿದ್ದು ಕಲ್ಲಿನಿಂದ. ಹಾಗಾದರೆ ಕೋಟ್ಯಂತರ ಇಟ್ಟಿಗೆ ಏನಾಯಿತು ಎಂದು ಪ್ರಶ್ನಿಸಬೇಕಾಗಿದೆ’ ಎಂದರು.

‘ದೇಹಕ್ಕಾದ ಗಾಯ ನಾವು ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ದೇಶಕ್ಕೆ, ಸಮಾಜಕ್ಕೆ ಆದ ಗಾಯ ನಾವು ಸುಮ್ಮನಿದ್ದಷ್ಟೂ ಹೆಚ್ಚಾಗುತ್ತದೆ. ನಮ್ಮ ಹೆಬ್ಬೆರಳು ಕಡಿದರೆ ಆ ನೋವು ನಮಗೆ ಮಾತ್ರ. ಆದರೆ, ಏಕಲವ್ಯನ ಬೆರಳು ಕಡಿದರೆ ಅದು ಎಲ್ಲರ ನೋವು ಆಗಬೇಕು. ದನಿ ಇಲ್ಲದವರಿಗೆ, ಅಲ್ಪಸಂಖ್ಯಾತರ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂದರು.

ಡಿವೈಎಫ್‌ಐನ ಅಖಿಲ ಭಾರತ ಅಧ್ಯಕ್ಷ ಎ.ಎ.ರಹೀಂ, ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.