ಮುಡಿಪು: ‘ಪುರಂದರದಾಸರು ಹಾಗೂ ಕನಕದಾಸರನ್ನು ಬೇರೆ ಮಾಡಲು ಸಾಧ್ಯವಿಲ್ಲ. ಈಗಿನ ಮುಖಂಡರು ಅಥವಾ ಯಾವುದೇ ರಾಜಕೀಯ ಶಕ್ತಿಗಳು ಅವರನ್ನು ದೂರ ಮಾಡಲು ಪ್ರಯತ್ನಿಸಿದರೂ ವಿಭಜನೆಯ ತಂತ್ರ ಫಲಿಸದು’ ಎಂದು ಬೆಂಗಳೂರಿನ ಗಾಯಕ ವಿದ್ಯಾಭೂಷಣ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಸಂಶೋಧನ ಕೇಂದ್ರ, ಮಂಗಳಗಂಗೋತ್ರಿಯು ಕನಕ ಜಯಂತಿ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ‘ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕ– ಪುರಂದರರು ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳು. ಅವರಿಬ್ಬರೂ ಅನೋನ್ಯವಾಗಿ ಇದ್ದರು. ಅವರಿಬ್ಬರೂ ಭಗವಂತನ ಪ್ರೀತಿಯ ಭಗವದ್ಭಕ್ತರಾಗಿದ್ದರು. ಭಕ್ತಿ ಚಳವಳಿ ದೇಶದಲ್ಲಿ ಸಂಚಲನೆ ಮೂಡಿಸಿತ್ತು ಎಂದರು.
ಕುಲಸಚಿವ ಕೆ.ರಾಜು ಮೊಗವೀರ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಸಂಗೀತಕ್ಕೆ ವಿಶಿಷ್ಟವಾದ ಸ್ಥಾನವಿದೆ. ಕನಕದಾಸರು ಕಲಿ, ಕವಿ ಹಾಗೂ ಸಂತರೂ ಆಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಕನಕದಾಸರ ಚಿಂತನೆಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯವಿದೆ. ಮಡಿವಂತಿಕೆಯಿಲ್ಲದೆ ಜಾತಿ ಸಮೀಕರಣದ ರಾಜಕೀಯಕ್ಕೆ ಬಲಿಯಾಗದೆ ಕನಕನನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಹಾವೇರಿ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ, ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ, ವಿಶ್ವಮಂಗಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಶೆಟ್ಟಿ ಭಾಗವಹಿಸಿದ್ದರು.
ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಧನಂಜಯ ಕುಂಬ್ಳೆ ಸ್ವಾಗತಿಸಿದರು. ಹೇಮ, ಸ್ವಾತಿ ಕನಕದಾಸರ ಕೀರ್ತನೆಯ ಮೂಲಕ ಪ್ರಾರ್ಥಿಸಿದರು. ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಎನ್.ವಂದಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ವಿವಿ ಮಟ್ಟದ ಅಂತರಜಿಲ್ಲಾ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಅಧ್ಯಾಪಕ, ಅಧ್ಯಾಪಕೇತರ ಮತ್ತು ಸಾರ್ವಜನಿಕ ಮಟ್ಟದಲ್ಲಿ ನಡೆಯಿತು. ಒಟ್ಟು 173 ಗಾಯಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.