ADVERTISEMENT

ಮಂಗಳೂರು: ‘ಸಣ್ಣ’ ಜವಳಿ ಮಳಿಗೆಗಳಿಗೆ ‘ದೊಡ್ಡ’ ಹೊಡೆತ

ದೀಪಾವಳಿಗೂ ಇಲ್ಲ ವ್ಯಾಪಾರದ ಭರಾಟೆ, ಕರಾವಳಿಯ 200ಕ್ಕೂ ಹೆಚ್ಚು ಮಳಿಗೆಗಳು ವರ್ಷದಿಂದೀಚೆಗೆ ಬಂದ್‌,

ಪ್ರವೀಣ್‌ ಕುಮಾರ್‌ ಪಿ.ವಿ
Published 1 ನವೆಂಬರ್ 2024, 6:30 IST
Last Updated 1 ನವೆಂಬರ್ 2024, 6:30 IST
<div class="paragraphs"><p>ದೀಪಾವಳಿ ಹಬ್ಬ ಸಮೀಪಿಸಿದರೂ ಜವಳಿ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಕಾಣುತ್ತಿಲ್ಲ. ಮಂಗಳೂರಿನ ಜವಳಿ ಮಳಿಗೆಯೊಂದರಲ್ಲಿ ಕಂಡುಬಂದ ದೃಶ್ಯವಿದು ಪ್ರಜಾವಾಣಿ ಚಿತ್ರ</p></div>

ದೀಪಾವಳಿ ಹಬ್ಬ ಸಮೀಪಿಸಿದರೂ ಜವಳಿ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಕಾಣುತ್ತಿಲ್ಲ. ಮಂಗಳೂರಿನ ಜವಳಿ ಮಳಿಗೆಯೊಂದರಲ್ಲಿ ಕಂಡುಬಂದ ದೃಶ್ಯವಿದು ಪ್ರಜಾವಾಣಿ ಚಿತ್ರ

   

ಮಂಗಳೂರು: ದೀಪಾವಳಿ ಸಂದರ್ಭ ಹೊಸ ಬಟ್ಟೆ ಧರಿಸಿ ಸಂಭ್ರಮಿಸುವುದು ವಾಡಿಕೆ. ಹಾಗಾಗಿಯೇ, ಕೆಲ ವರ್ಷಗಳ ಹಿಂದೆ, ಇಲ್ಲಿನ ಜವಳಿ ಮಳಿಗೆಗಳು  ದೀಪಾವಳಿ ಸಮೀಪಿಸುತ್ತಿದ್ದಂತೆಯೇ ಗ್ರಾಹಕರಿಂದ ಗಿಜಿಗುಡಲು ಆರಂಭಿಸುತ್ತಿದ್ದವು. ಆದರೆ ಈಚಿನ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಬಹುತೇಕ ಸಣ್ಣ ಜವಳಿ ಮಳಿಗೆಗಳಲ್ಲಿ ದೀಪಾವಳಿ ಸಂದರ್ಭದಲ್ಲೂ ವ್ಯಾಪಾರದ ಭರಾಟೆ ಇಲ್ಲ. ಬಹುತೇಕ ಸಣ್ಣ ಮಳಿಗೆಗಳು ಬಿಕೋ ಎನ್ನುತ್ತಿವೆ.

‘ಆನ್‌ಲೈನ್‌ ಖರೀದಿ ಭರಾಟೆ, ದೊಡ್ಡ ಜವಳಿ ಮಳಿಗೆಗಳಲ್ಲಿ ಆಕರ್ಷಣೀಯ  ಕೊಡುಗೆಗಳು ನಮ್ಮಂತಹ ಸಣ್ಣ ಪುಟ್ಟ ಜವಳಿ ಮಳಿಗೆಗಳು ವ್ಯಾಪಾರವನ್ನೆಲ್ಲ ಕಸಿದುಕೊಂಡಿವೆ. ದೀಪಾವಳಿ ಸಂದರ್ಭ ದಲ್ಲೂ ಹೇಳಿಕೊಳ್ಳುವ ವ್ಯಾಪಾರವೇ ಇಲ್ಲ’ ಎಂದು ಅಲವತ್ತುಕೊಳ್ಳುತ್ತಾರೆ ಸಣ್ಣ ಪುಟ್ಟ ಜವಳಿ ಮಳಿಗೆಗಳ ವರ್ತಕರು.

ADVERTISEMENT

‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 5ಸಾವಿರಕ್ಕೂ ಅಧಿಕ ಸಣ್ಣ ಜವಳಿ ವ್ಯಾಪಾರ ಮಳಿಗೆಗಳಿವೆ. 200ಕ್ಕೂ ಹೆಚ್ಚು ಮಳಿಗೆಗಳು ವರ್ಷದಿಂದ ಈಚೆಗೆ ಬಾಗಿಲು ಮುಚ್ಚಿವೆ. ಅನೇಕ ಜವಳಿ ವ್ಯಾಪಾರಿಗಳು ಹೂಡಿದ ಬಂಡವಾಳವೂ ವಾಪಾಸ್‌ ಸಿಗದೇ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ’ ಎನ್ನುತ್ತಾರೆ ಕರಾವಳಿ ಟೆಕ್ಸ್‌ಟೈಲ್ಸ್ , ರೆಡಿಮೇಡ್‌ ಆ್ಯಂಡ್ ಫೂಟ್‌ವೇರ್‌ ಡೀಲರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಸಂತೋಷ್‌ ಕಾಮತ್‌.

‘ಸಣ್ಣ ಜವಳಿ ಮಳಿಗೆಗಳ ವ್ಯಾಪಾರಕ್ಕೆ ದೊಡ್ಡ ಹೊಡೆತ ನೀಡಿರುವುದು ಆನ್‌ಲೈನ್ ಮಾರಾಟ. ಫ್ಲಿಪ್‌ಕಾರ್ಟ್‌, ಅಮೆಝಾನ್‌, ಕ್ರೋಮಾ, ಮಿಂತ್ರ ಮೊದಲಾದ ಆನ್‌ಲೈನ್  ಮಾರಾಟ ಪೋರ್ಟಲ್‌ಗಳು ದೀಪಾವಳಿಯೂ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಗ್ರಾಹಕರ ಮನೆ ಬಾಗಿಲಿಗೆ ಬಟ್ಟೆಗಳನ್ನು ತಲುಪಿಸುತ್ತಿವೆ. ಯುವ ಗ್ರಾಹಕರು ಇವುಗಳತ್ತ ಆಕರ್ಷಿತರಾಗಿದ್ದಾರೆ’ ಎಂದು ಕಾಮತ್ ವಿಶ್ಲೇಷಿಸಿದರು.

‘ಡಿ–ಮಾರ್ಟ್‌ನಂತಹ ದೊಡ್ಡ ಕಂಪನಿಗಳು ಇತರ ಸಾಮಗ್ರಿಗಳ ಜೊತೆಗೆ ಸಿದ್ಧ ಉಡುಪುಗಳನ್ನೂ ಮಾರುತ್ತಿವೆ. ದಿನಸಿ ತರಲು ಇಲ್ಲಿಗೆ ಹೋಗುವ ಜನರು ಬಟ್ಟೆಯನ್ನೂ ಮನೆಗೆ ತರುವ ಪರಿಸ್ಥಿತಿ ಇದೆ. ಸಣ್ಣ ಮಳಿಗೆಗಳತ್ತ ಜನರು ಆಕರ್ಷಣೆ ಕಳೆದುಕೊಳ್ಳಲು ಇದು ಕೂಡ ಕಾರಣ’ ಎನ್ನುತ್ತಾರೆ ಕಾಮತ್‌.

‘ಆನ್‌ಲೈನ್‌ ಮಾರಾಟ ಪೋರ್ಟ ಲ್‌ಗಳಲ್ಲಿ ದಿನಕ್ಕೊಂದು ಹೊಸ ವಿನ್ಯಾಸ ವನ್ನು ಬಿಡುಗಡೆಮಾಡುತ್ತಾರೆ. ಅವು ನಮ್ಮಂತಹ ಸಣ್ಣಪುಟ್ಟ ಮಳಿಗೆಯನ್ನು ತಲುಪಲು ಏನಿಲ್ಲವೆಂದರೂ ಎರಡು ಮೂರು ತಿಂಗಳು ಬೇಕು. ಅವು ನಮ್ಮ ಮಳಿಗೆಯನ್ನು ತಲುಪುವಷ್ಟರಲ್ಲಿ ಆನ್‌ಲೈನ್‌ನಲ್ಲಿ ಮತ್ತಷ್ಟು ಹೊಸ ವಿನ್ಯಾಸದ ಉಡುಪು ಬಂದಿರುತ್ತದೆ. ನಮ್ಮ ಗ್ರಾಹಕರೂ ಅದರ ಫೋಟೊ ತೋರಿಸಿ ಇಂಥಹದ್ದೇ ವಿನ್ಯಾಸದ ಉಡುಪು ನೀಡುವಂತೆ ಕೇಳುತ್ತಾರೆ. ನಾವು ಜಿಎಸ್‌ಟಿ ಕಟ್ಟಿ ತೀರಾ ಕಡಿಮೆ ಲಾಭ ಇಟ್ಟು ಮಾರಿದರೂ ಆನ್‌ಲೈನ್‌ ಮಾರಾಟಕ್ಕೆ ಪೈಪೋಟಿ ನೀಡುವಷ್ಟು ಕಡಿಮೆ ದರಕ್ಕೆ ಬಟ್ಟೆ ಮಾರಾಟ ಮಾಡಲು ಸಾಧ್ಯವಾಗದು’ ಎನ್ನುತ್ತಾರೆ ಮೂಡುಬಿದಿರೆಯ ಲಕ್ಷ್ಮೀಸ್‌ ಸಿಲ್ಕ್ ಪ್ಯಾಲೇಸ್‌ನ ಪ್ರಶಾಂತ್‌ ಹೆಬ್ಬಾರ್‌. 

‘ಹಿಂದೆ ನಮ್ಮ ಮಳಿಗೆಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಊಟ ಮಾಡಲೂ ಪುರುಸೊತ್ತು ಇಲ್ಲದಷ್ಟು ವ್ಯಾಪಾರ ಆಗುತ್ತಿತ್ತು. ಆದರೆ ಈಗ ವ್ಯಾಪಾರ ಪೂರ್ತಿ ಕುಸಿದಿದೆ. ನಷ್ಟ ಅನುಭವಿಸಿರುವುದು ಇಲ್ಲಿನ ಜವಳಿ ವ್ಯಾಪಾರಿಗಳು ಮಾತ್ರ ಅಲ್ಲ. ಕೃಷಿಯ ರೀತಿಯಲ್ಲೇ ಬಟ್ಟೆ ವ್ಯಾಪಾರವೂ ನೇಕಾರರು, ಪೂರೈಕೆದಾರರನ್ನು ಒಳಗೊಂಡ ಸರಪಣಿ ವ್ಯವಸ್ಥೆಯನ್ನು ಹೊಂದಿದೆ. ಅವರೆಲ್ಲರ ಮೇಲೂ ಹೊಡೆತ ಬಿದ್ದಿದೆ’ ಎಂದು ಅಸೋಸಿಯೇಷನ್‌ನ ಕಾರ್ಯ ದರ್ಶಿಯೂ ಆಗಿರುವ ಸುಳ್ಯದ ಜವಳಿ ವರ್ತಕ ಎಂ.ಬಿ ಸದಾಶಿವ ತಿಳಿಸಿದರು. 

‘ವ್ಯಾಪಾರಿಗಳಿಂದ ಸಗಟು ಖರೀದಿ’

‘ನಷ್ಟದಿಂದ ವ್ಯಾಪಾರ ಮಳಿಗೆಗಳನ್ನೇ ಬಂದ್‌ ಮಾಡುತ್ತಿರುವ ಇಲ್ಲಿನ ಜವಳಿ ವ್ಯಾಪಾರಿಗಳಿಂದ ತಮಿಳುನಾಡು ಹಾಗೂ ರಾಜಸ್ಥಾನದ ವ್ಯಾಪಾರಿಗಳು ತೀರಾ ಕಡಿಮೆ ದರದಲ್ಲಿ ಉಡುಪುಗಳನ್ನು ಸಗಟು ಖರೀದಿ ಮಾಡುತ್ತಿದ್ದಾರೆ. ಜಾತ್ರೆಗಳ ಬಳಿ, ಕೆಲವು ಸಣ್ಣ ಪಟ್ಟಣಗಳಲ್ಲಿ ಚಪ್ಪರ ಹಾಕಿ ‘ಭಾರೀ ರಿಯಾಯಿತಿ ದರದ ಮಾರಾಟ’ ಎಂದು ಪ್ರಚಾರ ಮಾಡಿ ಮೂಲದರಕ್ಕಿಂತಲೂ ತೀರಾ ಕಡಿಮೆ ದರಕ್ಕೆ ಆ ಉಡುಪುಗಳನ್ನು ಮಾರಾಟ ಮಾಡುತ್ತಾರೆ. ಇಂತಹ ಮಾರಾಟದಿಂದ ಆ ಊರಿನ ಸಣ್ಣ ಜವಳಿ ವ್ಯಾಪಾರಿಗಳಿಗೂ ಹೊಡೆತ ಬೀಳುತ್ತಿದೆ. ನಮ್ಮಿಂದ ಕಾಲ ಕಾಲಕ್ಕೆ ಜಿಎಸ್‌ಟಿ ಕಟ್ಟಿಕೊಳ್ಳುವ ಅಧಿಕಾರಿಗಳು ಇಂತಹ ವ್ಯಾಪಾರಕ್ಕೆ ಕಡಿವಾಣ ಹಾಕುವುದಿಲ್ಲ’ ಎಂದು ಜವಳಿ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು. 

‘ಹೊರರಾಜ್ಯಗಳ ವರ್ತಕರು ಸಣ್ಣ ಪುಟ್ಟ ಪಟ್ಟಣಗಳಲ್ಲೂ ಎಲ್ಲೆಂದರಲ್ಲಿ ಚಪ್ಪರ ಹಾಕಿ ಭಾರಿ ರಿಯಾಯಿತಿ ದರದ ಮಾರಾಟ ಎಂದು ಜನರನ್ನು ಸೆಳೆಯುತ್ತಿದ್ದಾರೆ. ಇಲ್ಲಿ ಗೃಹಬಳಕೆ ವಸ್ತುವಿನಿಂದ ಹಿಡಿದು ಬಟ್ಟೆಗಳವರೆಗೆ ಎಲ್ಲವೂ ಸಿಗುತ್ತವೆ. ಆನ್‌ಲೈನ್‌ ಮಾರಾಟದ ಜೊತೆಗೆ ಇವು ಕೂಡಾ ಜವಳಿಗೆ ಮಳಿಗೆಗಳ ವ್ಯಾಪಾರಕ್ಕೆ ಏಟು ನೀಡಿವೆ. ಜಿಎಸ್‌ಟಿ ಕಟ್ಟಿ ನ್ಯಾಯಬದ್ಧವಾಗಿ ಜವಳಿ ವ್ಯಾಪಾರ ನಡೆಸುತ್ತಿರುವವರು ನಾವು ನಷ್ಟ ಅನುಭವಿಸುವಂತಾಗಿದೆ’ ಎಂದು ಎಂ.ಬಿ.ಸದಾಶಿವ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.