ADVERTISEMENT

ಮಂಗಳೂರು: ‘ಹೃದಯ’ ಜೋಪಾನ– ಸಾವಿರಾರು ಮನಸುಗಳ ಸ್ಪಂದನ

‘ವಿಶ್ವ ಹೃದಯ ದಿನ 2024’ ವಾಕಥಾನ್‌

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 4:38 IST
Last Updated 30 ಸೆಪ್ಟೆಂಬರ್ 2024, 4:38 IST
ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಾಕಥಾನ್‌ನಲ್ಲಿ ಭಾಗವಹಿಸಿದ ಸ್ವಯಂಸೇವಕರು: ಪ್ರಜಾವಾಣಿ ಚಿತ್ರ 
ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಾಕಥಾನ್‌ನಲ್ಲಿ ಭಾಗವಹಿಸಿದ ಸ್ವಯಂಸೇವಕರು: ಪ್ರಜಾವಾಣಿ ಚಿತ್ರ    

ಮಂಗಳೂರು: ಬೆಳಕು ಮೂಡುವ ಹೊತ್ತಲ್ಲೇ ನಗರದ ಅಂಬೇಡ್ಕರ್‌ ವೃತ್ತದ ಬಳಿಯ ಕೆಎಂಸಿ ಆವರಣವು ಕೆಂಬಣ್ಣದ ಸಮವಸ್ತ್ರಧಾರಿಗಳಿಂದ ತುಂಬಿತ್ತು. 2024ರ ವಿಶ್ವ ಹೃದಯ ದಿನದ ಅಂಗವಾಗಿ ಹೃದಯವನ್ನು ಜೋಪಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಸಾವಿರಕ್ಕೂ ಅಧಿಕ ಸ್ವಯಂಸೇವಕರು ಇಲ್ಲಿ ನೆರೆದಿದ್ದರು.

ಬಿ.ಆರ್‌.ಅಂಬೇಡ್ಕರ್‌ ವೃತ್ತದ ಕೆಎಂಸಿ ಆಸ್ಪತ್ರೆಯಿಂದ ಮಿಲಾಗ್ರಿಸ್‌– ಐಎಂಎ– ಅತ್ತಾವರ ಕೆಎಂಸಿ–ಮಾರ್ಗವಾಗಿ ಕಾಪ್ರಿಗುಡ್ಡದ ಮರೆನಾ ಸ್ಪೋರ್ಟ್‌ ಕಾಂಪ್ಲೆಕ್ಸ್‌ವರೆಗೆ ಅವರು ಹೆಜ್ಜೆ ಹಾಕಿದರು. ಮುಂಜಾವ ಮಧುರ ವಾತಾವರಣದಲ್ಲಿ ಈ ಮಾರ್ಗದ ತುಂಬಾ ಕೆಂಬಣ್ಣ ಆವರಿಸಿತ್ತು. ಹೃದಯದ ಕಾಳಜಿ ವಹಿಸುವ ಮಹತ್ವ ಸಾರಲು ಬ್ಯಾನರ್‌, ಭಿತ್ತಿಫಲಕ ಪ್ರದರ್ಶಿಸಿದರು. ಪುಟಾಣಿಗಳು, ಯುವಜನರು, ಮಧ್ಯವಯಸ್ಕರು, ಹಿರಿಯರು ಸೇರಿದಂತೆ  ಸುಮಾರು 1200 ಫಿಟ್ನೆಸ್‌ ಉತ್ಸಾಹಿಗಳು ಹೆಜ್ಜೆಹಾಕಿದರು. ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು, ಸಂಘ ಸಂಸ್ಥೆಗಳು, ಕಾಲೇಜುಗಳೂ ವಾಕಥಾನ್‌ಗೆ ಸಾಥ್‌ ನೀಡಿದವು. ಝುಂಬಾ ವಾರ್ಮ್ಅಪ್‌ ಮೂಲಕ ಸ್ವಯಂಸೇವಕರಲ್ಲಿ ಉತ್ಸಾಹ ತುಂಬಲಾಯಿತು. 

ಡಿಸಿಪಿ (ಪರಾಧ ಮತ್ತು ಸಂಚಾರ) ಬಿ.ಪಿ. ದಿನೇಶ್‌ ಕುಮಾರ್‌ ಅವರು ವಾಕಥಾನ್‌ ಉದ್ಘಾಟಿಸಿದರು. ರಾಷ್ಟ್ರೀಯ ಕ್ರೀಡಾಪಟು ಆಯುಷ್ ದೇವಾಡಿಗ ಜ್ಯೋತಿ ಹಿಡಿದು ವಾಕಥಾನ್‌ ಮುನ್ನಡೆಸಿದರು.

ADVERTISEMENT

ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ನರಸಿಂಹ ಪೈ, ‘ಜೀವನಶೈಲಿಯಿಂದಾಗಿ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸಲು ನಿಯಮಿತ ವ್ಯಾಯಾಯ ಅತ್ಯಗತ್ಯ’ ಎಂದರು.

ಮಾಹೆಯ ಸಹಕುಲಾಧಿಪತಿ ಡಾ.ದಿಲೀಪ್ ಜಿ.ನಾಯ್ಕ್‌, ‘ಬೇರೆ ಬೇರೆ ಕ್ಷೇತ್ರಗಳನ್ನು ಪ್ರತಿನಿಧಿಸುವ ಇಷ್ಟೊಂದು ಮಂದಿ ವಾಕಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸಿದ್ದನ್ನು ಕಂಡು ಹೃದಯ ತುಂಬಿ ಬಂದಿದೆ’ ಎಂದರು.

ನಗರ ಅಪರಾಧ ದಾಖಲೆ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನಕುಲಾಲ್‌, ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ.ರಂಜನ್‌, ಜಿಲ್ಲಾ ರೋಟರಿ ಇಂಟರ್‌ನ್ಯಾಷನಲ್‌ ಗವರ್ನರ್‌  ವಿಕ್ರಮದತ್ತ ಡಿ.ಜಿ, ಭಾಗವಹಿಸಿದ್ದರು. ಜಕೆಎಂಸಿ ಹೃದಯ ವಿಜ್ಞಾನ ವಿಭಾಗದ ಡಾ.ಮನೀಶ್ ರೈ, ಡಾ.ರಾಜೇಶ್ ಭಟ್‌, ಡಾ.ವಿಜಯ್‌, ಡಾ.ಹರೀಶ್‌, ಡಾ,ಐರಿಶ್ ಶೆಟ್ಟಿ ಭಾಗವಹಿಸಿದ್ದರು

ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಅಂಶಗಳು, ಹೃದಯ ಕಾಯಿಲೆ ತಡೆಯಲು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಕೆಎಂಸಿ ಆಸ್ಪತ್ರೆಯು ಹಮ್ಮಿಕೊಂಡಿರುವ ತಿಂಗಳ ಅಭಿಯಾನದ ಅಂಗವಾಗಿ ವಾಕಥಾನ್‌ ಏರ್ಪಡಿಸಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.