ಮಂಗಳೂರು: ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಕಳ್ಳಸಾಗಣೆ ಮಾಡಿದ್ದ 349 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.
‘ದುಬೈನಿಂದ ಬಂದಿಳಿದ ಐಎಕ್ಸ್ 814 ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸಿದ್ದ ಮಹಿಳೆಯ ಸೊಂಟದ ಭಾಗದ ಬಳಿ ಲೋಹಶೋಧಕ ಸಲಕರಣೆ ಹಿಡಿದು ತಪಾಸಣೆಗೆ ಒಳಪಡಿಸಿದಾಗ ಬೀಪ್ ಶಬ್ದ ಬಂದಿತ್ತು. ಚಿನ್ನವನ್ನು ಕಳ್ಳಸಾಗಣೆ ಮಾಡಿರುವ ಸುಳಿವು ಸಿಕ್ಕಿದ್ದರಿಂದ ಆಕೆಯನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಆಗ ಆಕೆಯು ಗುದದ್ವಾರದಲ್ಲಿ ಅಂಡಾಕಾರದ ಎರಡು ವಸ್ತುಗಳನ್ನು ಬಚ್ಚಿಕೊಂಡು ಸಾಗಿಸುತ್ತಿರುವುದು ಕಂಡುಬಂತು’ ಎಂದು ಕಸ್ಟಮ್ಸ್ ಟ್ವೀಟ್ ಮಾಡಿದೆ.
‘ಅಂಡಾಕಾರದ ವಸ್ತುಗಳನ್ನು ಗುದದ್ವಾರದಿಂದ ಹೊರಗೆ ತೆಗೆಯಿಸಿ ಪರಿಶೀಲಿಸಲಾಯಿತು. ಮಹಿಳೆಯು ಈ ರೀತಿಯಲ್ಲಿ ಒಟ್ಟು 349 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಪತ್ತೆಯಾಗಿದೆ. ಇದರ ಮೌಲ್ಯ ₹ 20.42 ಲಕ್ಷ ಎಂದು ಅಂದಾಜಿಸಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಲಾಗಿದೆ’ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.