ನೀಲೇಶ್ವರ (ಕಾಸರಗೋಡು): ಪಟ್ಟಣದ ಹೆದ್ದಾರಿ ಬಳಿಯ ಅಞೂಟ್ಟಂಬಲಂ ವೀರರ್‌ಕಾವ್ ದೈವಸ್ಥಾನದಲ್ಲಿ ಸಂಭವಿಸಿದ ಪಟಾಕಿ ಸ್ಫೋಟಕ್ಕೆ ಸಂಬಂಧಿಸಿ ದೈವಸ್ಥಾನ ಸಮಿತಿಯ ಮೂವರನ್ನು ಬಂಧಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಮಿತಿಯ ಅಧ್ಯಕ್ಷ ಪಡನ್ನಕ್ಕಾಡ್ ಚಂದ್ರಶೇಖರನ್, ಕಾರ್ಯದರ್ಶಿ ಮಂದಂಪುರಂ ನಿವಾಸಿ ಕೆ.ಟಿ. ಭರತನ್, ಸದಸ್ಯ ಕೊಟ್ರಚ್ಚಾಲ್ ನಿವಾಸಿ ಪಳ್ಳಿಕ್ಕರೆ ರತೀಶ್ ಬಂಧಿತರು. ಕೊಟ್ರಚ್ಚಾಲ್‌ನ ವಿಜಯನ್ ತಲೆಮರೆಸಿಕೊಂಡಿದ್ದಾರೆ. ಪ್ರಕರಣದಲ್ಲಿ ಸಮಿತಿಯ ಒಟ್ಟು 8 ಪದಾಧಿಕಾರಿಗಳನ್ನು ಆರೋಪಿಗಳೆಂದು ಪಟ್ಟಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರರ್‌ಕಾವ್‌ನಲ್ಲಿ ಮೂವಾಳಂಕುಳಿ ಚಾಮುಂಡಿಯ ವಾರ್ಷಿಕ ಕಳಿಯಾಟ್ಟಂ ಮಹೋತ್ಸವದ ಭಾಗವಾಗಿ ಮಂಗಳವಾರ ನಸುಕಿನ 2.15ಕ್ಕೆ ವೆಳ್ಳಾಟಂ ಆರಂಭಗೊಂಡ ಸಂದರ್ಭದಲ್ಲಿ ಸಿಡಿಸಿದ ಪಟಾಕಿಯೊಂದರ ಕಿಡಿ ಪಟಾಕಿ ಸಂಗ್ರಹಿಸಿಟ್ಟಿದ್ದ ಶೆಡ್ ಒಳಗೆ ಬಿದ್ದು ಭಾರಿ ಸ್ಫೋಟ ಆಗಿತ್ತು.
8 ಮಂದಿ ಸ್ಥಿತಿ ಗಂಭೀರ: ಘಟನೆಯಲ್ಲಿ 154 ಮಂದಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಎಜೆ, ಕೆ.ಎಸ್.ಹೆಗ್ಡೆ, ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಕಣ್ಣೂರು, ಕಾಞಂಗಾಡ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಈ ಪೈಕಿ 52 ಮಂದಿ ಮಂಗಳವಾರ ಸಂಜೆಯ ವೇಳೆ ಮನೆಗೆ ತೆರಳಿದ್ದಾರೆ. ಒಟ್ಟು 13 ಆಸ್ಪತ್ರೆಗಳಲ್ಲಿ 69 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಪೈಕಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ. 29 ಮಂದಿ ಐಸಿಯುನಲ್ಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ 21 ಮಂದಿ, ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮೂವರು ಮತ್ತು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.