ಮೂಲ್ಕಿ: ಪಕ್ಷಿಕೆರೆ ಬಳಿಯ ಕೆಮ್ರಾಲ್‌ನಲ್ಲಿ ಕಾರ್ತಿಕ್ ಭಟ್ (32) ತನ್ನ ಪತ್ನಿ ಪ್ರಿಯಾಂಕಾ (27) ಮತ್ತು ಮಗ ಹೃದಯ (4) ಎಂಬುವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕೌಟುಂಬಿಕ ಕಲಹವೇ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೂಲ್ಕಿ ಠಾಣಾ ವ್ಯಾಪ್ತಿಯ ಬೆಳ್ಳಯೂರು ಗ್ರಾಮದ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಬಗ್ಗೆ ಟ್ರ್ಯಾಕ್ ಮಾಸ್ಟರ್ ನವೀನ್ ಎಂಬುವರು ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಚಲಿಸುತ್ತಿರುವ ರೈಲಿನಡಿ ಸಿಲುಕಿ ಛಿದ್ರವಾದ ಗಂಡಸಿನ ಮೃತದೇಹ ಪತ್ತೆಯಾಗಿತ್ತು. ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ರೈಲು ಹಳಿಯಲ್ಲಿ ಕೀ ಗೊಂಚಲು ಸಿಕ್ಕಿತ್ತು, ಅದರಲ್ಲಿ ಸ್ಕೂಟರ್ ಒಂದರ ಕೀ ಕೂಡ ಇತ್ತು. ಪೊಲೀಸ್ ಸಿಬ್ಬಂದಿ ಶನಿವಾರ ಬೆಳಿಗ್ಗೆ ಮತ್ತೆ ಹುಡುಕಿದಾಗ ಬೆಳ್ಳಾಯೂರು ಗ್ರಾಮದ ಮಹಾಮ್ಮಾಯಿ ದೇವಸ್ಥಾನದ ಹತ್ತಿರ ಒಂದು ಸ್ಕೂಟರ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪತ್ತೆಯಾಯಿತು. ಹಳಿಯಲ್ಲಿ ಸಿಕ್ಕ ಬೀಗದ ಕೀ ಗೊಂಚಲಿನಲ್ಲಿದ್ದ ಕೀ ಆ ಸ್ಕೂಟರ್‌ಗೆ ಹೊಂದಿಕೆಯಾಗಿತ್ತು. ಅದರಲ್ಲಿದ್ದ ವಾಹನ ನೋಂದಣಿ ಪ್ರಮಾಣಪತ್ರ ತೆಗೆದು ನೀಡಿದಾಗ ಅದು ಪಕ್ಷಿಕೆರೆ ಬಳಿಯ ಕೆಮ್ರಾಲ್ ನಿವಾಸಿ ಕಾರ್ತಿಕ್ ಭಟ್ (32) ಅವರದು ಎಂದು ಗೊತ್ತಾಗಿತ್ತು’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದರು.
‘ಕಾರ್ತಿಕ್ ಆರು ವರ್ಷಗಳ ಹಿಂದೆ ಶಿವಮೊಗ್ಗದ ಪ್ರಿಯಾಂಕ ಅವರನ್ನು ಮದುವೆಯಾಗಿರುವುದು, ಆ ದಂಪತಿಗೆ ನಾಲ್ಕು ವರ್ಷದ ಮಗು (ಹೃದಯ್) ಇರುವುದು, ಕಾರ್ತಿಕ್ ಅವರ ತಂದೆ ಜನಾರ್ಧನ ಭಟ್ ಹಾಗೂ ತಾಯಿ ಶಾಮಲಾ ಭಟ್ ಪಕ್ಷಿಕೆರೆಯಲ್ಲಿ 30 ವರ್ಷಗಳಿಂದ ಕ್ಯಾಂಟೀನ್ ನಡೆಸಿಕೊಂಡಿರುವುದು ತಿಳಿಯಿತು. ಕಾರ್ತಿಕ್ ಪತ್ನಿಯ ಮೊಬೈಲ್‌ಗೆ ಕೆರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಬಳಿಕ ಕಾರ್ತಿಕ್ ತಂದೆ– ತಾಯಿ ಬಂದು ಮನೆಯ ಬಾಗಿಲು ತೆರೆದರು. ಮನೆಯಲ್ಲಿ ಕಾರ್ತಿಕ್ ವಾಸವಿದ್ದ ಕೊಠಡಿಗೆ ಬೀಗ ಹಾಕಲಾಗಿತ್ತು. ಅದರ ಮನೆಯ ಬೀಗವನ್ನು ತೆರೆದಾಗ ಕೊಠಡಿಯಲ್ಲಿ ಪತ್ನಿ ಹಾಗು ಮಗು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ ಮಹಿಳೆಯನ್ನು ಗಾಜಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು’ ಎಂದು ಅವರು ವಿವರಿಸಿದರು.
‘ಮನೆಯಲ್ಲಿ ದಿನಚರಿ ಪುಸ್ತಕದಲ್ಲಿ ಕಾರ್ತಿಕ್ ಡೆತ್‌ನೋಟ್ ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಅದರಲ್ಲಿ ಉಲ್ಲೇಖಿಸಿದ್ದಾರೆ. ಪತ್ನಿ ಹಾಗೂ ಮಗುವಿನ ಮೃತದೇಹ ಪತ್ತೆಯಾದ ಕೊಠಡಿಯಲ್ಲಿ ಫ್ಯಾನಿಗೆ ಸೀರೆಯನ್ನು ಕಟ್ಟಲಾಗಿತ್ತು. ಪತ್ನಿ ಹಾಗೂ ಮಗುವನ್ನು ಕೊಂದ ಬಳಿಕ ಕಾರ್ತಿಕ್ ಅಲ್ಲೇ ಆತ್ಮಹತ್ಯೆಗೆ ಯತ್ನಿಸಿರಲಿಕ್ಕೆ ಸಾಕು. ಅವರಿಗೆ ಯಾವ ಕಾರಣಕ್ಕೆ ದಂಪತಿ ಜಗಳ ಮಾಡಿಕೊಂಡಿದ್ದಾರೆ ಎಂಬುದ ಇನ್ನಷ್ಟೇ ಗೊತ್ತಾಗಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.