ADVERTISEMENT

ಮಂಗಳೂರು | ಹುಲಿಕುಣಿತದ ಗತ್ತು: ಸಾಂಪ್ರದಾಯಿಕ ಶಿಸ್ತು

ಯುವಜನರನ್ನು ಸೆಳೆಯುತ್ತಿರುವ ಹುಲಿವೇಷ ಕುಣಿತ

ಸಂಧ್ಯಾ ಹೆಗಡೆ
Published 6 ಅಕ್ಟೋಬರ್ 2024, 5:23 IST
Last Updated 6 ಅಕ್ಟೋಬರ್ 2024, 5:23 IST
<div class="paragraphs"><p>ಬಿಜೈನ ರಾಮಕೃಷ್ಣ ಭಜನಾ ಮಂದಿರದಲ್ಲಿ ನಡೆದ ಊದು ಪೂಜೆಯಲ್ಲಿ ಹುಲಿವೇಷಧಾರಿಗೆ ಬಣ್ಣ ಬಳಿಯುತ್ತಿರುವುದು</p></div>

ಬಿಜೈನ ರಾಮಕೃಷ್ಣ ಭಜನಾ ಮಂದಿರದಲ್ಲಿ ನಡೆದ ಊದು ಪೂಜೆಯಲ್ಲಿ ಹುಲಿವೇಷಧಾರಿಗೆ ಬಣ್ಣ ಬಳಿಯುತ್ತಿರುವುದು

   

ಮಂಗಳೂರು: ತುಳುನಾಡಿನ ಸಂಸ್ಕೃತಿಯ ಭಾಗವಾಗಿರುವ ಹುಲಿವೇಷ ಕುಣಿತವು ನವರಾತ್ರಿಗೆ ರಂಗು ತುಂಬಿದೆ. ಪುಟ್ಟ ಮಕ್ಕಳಿಂದ ಹಿರಿಯ ಜೀವಗಳ ವರೆಗೆ ಹುಲಿವೇಷ ಕುಣಿತಕ್ಕೆ ಮನಸೋಲದವರಿಲ್ಲ. ತಾಸೆಯ ಅಬ್ಬರಕ್ಕೆ ಹುಲಿವೇಷಧಾರಿ ಗತ್ತಿನ ಹೆಜ್ಜೆ ಹಾಕುತ್ತಿದ್ದರೆ, ಪ್ರೇಕ್ಷಕರ ಸಾಲಿನಲ್ಲಿ ನಿಂತವರ ಕಾಲು ನಿಧಾನಕ್ಕೆ ಅದುರಲಾರಂಭಿಸುತ್ತದೆ. ವೇಷಧಾರಿಯ ತಾಳಕ್ಕೆ ಇವರೂ ಹೆಜ್ಜೆ ಹಾಕುತ್ತಾರೆ. ಹುಲಿವೇಷ ಕುಣಿತದ ಸೆಳೆತವೇ ಅಂತಹುದು.

ಹುಲಿವೇಷ ಕುಣಿತವು ಇತ್ತೀಚಿನ ವರ್ಷಗಳಲ್ಲಿ ಯುವಜನರನ್ನು ಆಕರ್ಷಿಸುತ್ತಿದೆ. ದಶಕದ ಹಿಂದೆ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಹುಲಿವೇಷ ಕುಣಿತ ತಂಡಗಳು, ಮಂಗಳೂರು ನಗರವೊಂದರಲ್ಲೇ 30ಕ್ಕೂ ಹೆಚ್ಚು ದಾಟಿವೆ. ಆಧುನಿಕತೆ ಭರಾಟೆಯನ್ನು ಹಿಂದಿಕ್ಕಿ ಪ್ರಾಚೀನ ಜನಪದ ಕಲೆಯೊಂದು ಉಚ್ಛ್ರಾಯದೆಡೆಗೆ ಸಾಗುತ್ತಿರುವುದು ಹಿರಿಯ ಕಲಾವಿದರಲ್ಲಿ ಆಶಾಭಾವ ಮೂಡಿಸಿದೆ.

ADVERTISEMENT

ಯುವಕರಿಂದ ಆಕರ್ಷಣೆಗೊಳಗಾಗಿ ಹುಲಿವೇಷ ಕುಣಿತವು ಮನರಂಜನಾ ಮಾಧ್ಯಮವಾಗಿ ರೂಪುಗೊಳ್ಳಬಹುದೆಂಬ ಆತಂಕ ಹಿರಿಯ ವೇಷಧಾರಿಗಳನ್ನು ಕಾಡುತ್ತಿರುವಾಗಲೇ, ಭರವಸೆಯ ಬೆಳಕಾಗಿ ಆರಂಭಗೊಂಡಿದ್ದು ಹುಲಿವೇಷ ಕುಣಿತದ ಸ್ಪರ್ಧೆಗಳು. ಈ ಸ್ಪರ್ಧೆಗಳಲ್ಲಿ ಸಾಂಪ್ರದಾಯಿಕ ಪ್ರದರ್ಶನಕ್ಕೆ ವಿಶೇಷ ಪ್ರಾಧಾನ್ಯತೆ ದೊರೆಯಿತು. ಪರಿಣಾಮವಾಗಿ, ಯುವಕರು ತಲೆಮಾರುಗಳಿಂದ ಬಂದಿರುವ ಸಾಂಪ್ರದಾಯಿಕ ಕುಣಿತವನ್ನು ಶಾಸ್ತ್ರೀಯ ಮಟ್ಟುಗಳಲ್ಲಿ ಕಲಿಯತೊಡಗಿದರು ಎನ್ನುತ್ತಾರೆ ಹಿರಿಯ ಹುಲಿವೇಷ ಕುಣಿತಧಾರಿಗಳು.

ದಶಕದ ಹಿಂದೆ ಹೋಲಿಸಿದರೆ, ಹುಲಿವೇಷ ಕುಣಿತದಲ್ಲಿ ಈಗ ಹೆಚ್ಚು ಶಿಸ್ತುಬದ್ಧತೆ ಕಾಣಲು ಸಾಧ್ಯವಾಗುತ್ತಿದೆ. ತಾಲೀಮು (ಗೋದ) ಆಟದಲ್ಲಿ ಪ್ರಾರಂಭದ ಹೆಜ್ಜೆ ಪೌಲ. ಇದೇ ಈಗಿನ ಹುಲಿವೇಷದ ಪೌಲ ಕುಣಿತ. ಹುಲಿವೇಷ ಕುಣಿತ ಯಾವತ್ತಿಗೂ ನೃತ್ಯವಾಗಲಾರದು. ಹಿಂದೆ ಕುಣಿತದ ಜೊತೆಗೆ ತಾಸೆ ಮತ್ತು ಡೋಲು ಬಳಕೆಯಾಗುತ್ತಿತ್ತು. ನಂತರ ಪಾಶ್ಚಾತ್ಯ ಪ್ರಭಾವದಿಂದ ಕೆಲವು ಸಮಯ ಡ್ರಮ್ಸ್ ಬಳಕೆ ಬಂತು. ಆದರೆ, ಈಗಿನ ತಲೆಮಾರಿನ ಯುವಕರು ಸಾಂಪ್ರದಾಯಿಕವಾಗಿ ಕಲಿತು ಕಲೆಯನ್ನು ಹಳೆಯ ವೈಭವಕ್ಕೆ ಕೊಂಡೊಯ್ದಿದ್ದಾರೆ ಎನ್ನುತ್ತಾರೆ ಹುಲಿವೇಷ ಕುಣಿತದ ಬಗ್ಗೆ ಅಧ್ಯಯನ ನಡೆಸಿರುವ ಜಾನಪದ ವಿದ್ವಾಂಸ ಕೆ.ಕೆ. ಪೇಜಾವರ.

ಹುಲಿವೇಷ ಕುಣಿತವು ಸಂಪ್ರದಾಯ ಬದ್ಧತೆಯ ಲಯಕ್ಕೆ ಮರಳುವಲ್ಲಿ ಒಂಬತ್ತು ವರ್ಷಗಳ ಹಿಂದೆ ಪ್ರಾರಂಭವಾದ ‘ಪಿಲಿನಲಿಕೆ’, ಇತ್ತೀಚೆಗೆ ಪ್ರಾರಂಭವಾಗಿರುವ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಕೊಡುಗೆ ದೊಡ್ಡದು. ಸಂಪ್ರದಾಯ ಕೇಂದ್ರೀಕರಿಸಿ ನಡೆಯುವ ಸ್ಪರ್ಧೆಯಲ್ಲಿ, ಅಕ್ಕಿಮುಡಿ ಎಸೆತ, ಝಂಡೆ, ತಾಸೆ, ಕಸರತ್ತು, ಹುಲಿಗಳ ಪೌಲ ಕುಣಿತ, ಬಣ್ಣಗಾರಿಕೆ ಎಲ್ಲವನ್ನೂ ಸೂಕ್ಷ್ಮಗಣ್ಣಿನಿಂದ ಅವಲೋಕಿಸಿ ಅಂಕ ನೀಡಲಾಗುತ್ತದೆ. ಇದರಿಂದಾಗಿ, ಹುಲಿವೇಷ ತಂಡಗಳು ಕಲೆಯ ನಿಖರತೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಲಾರಂಭಿಸಿದವು ಎನ್ನುತ್ತಾರೆ ಅವರು.

‘ನೈಸರ್ಗಿಕ ಬಣ್ಣ ಹಿತ’

ಹುಲಿವೇಷ ಕುಣಿತಕ್ಕೆ ಕಪ್ಪು, ಬಿಳಿ, ಕೆಂಪು, ಹಳದಿ ಬಣ್ಣ ಪ್ರಧಾನವಾಗಿ ಬಳಕೆ ಮಾಡುವ ಕ್ರಮ ಇದೆ. ಬದಿಯಲ್ಲಿ ಹಸಿರು ಬಣ್ಣದ ಟಚ್ ಕೊಡಬಹುದು ಅಷ್ಟೆ. ಹಿಂದೆ ಹಳದಿ ಬಣ್ಣಕ್ಕೆ ಅಡುಗೆಯಲ್ಲಿ ಬಳಸುವ ಅರಿಸಿನ, ಕೆಂಪು ಬಣ್ಣಕ್ಕೆ ಹರಿವ ನೀರಿನಲ್ಲಿ ಸಿಗುವ ಕಲ್ಲು ಅಥವಾ ಹೆಂಚಿನ ತುಂಡು, ಚಿಮಣಿ ದೀಪ ಉರಿಸಿ ತಯಾರಿಸುವ ಕಪ್ಪುಬಣ್ಣ, ಬೆಳ್ತಿಗೆ ಅಕ್ಕಿ ಅರೆದು ಬಿಳಿ ಬಣ್ಣ ತಯಾರಿಸುತ್ತಿದ್ದರು. ಹಸಿರು ಅಗತ್ಯವಿದ್ದರೆ ಗಿಡದ ಎಲೆ ಬಳಕೆಯಾಗುತ್ತಿತ್ತು. ನೈಸರ್ಗಿಕವಾಗಿ ಲಭ್ಯವಾಗುವ ವಸ್ತುಗಳಲ್ಲೇ ಬಣ್ಣವನ್ನು ಹುಡುಕಿಕೊಳ್ಳುವ ಕ್ರಮವಿತ್ತು, ಇದು ಆರೋಗ್ಯಕ್ಕೂ ಹಿತವಾಗಿತ್ತು. ಈಗ ಸುಲಭದಲ್ಲಿ ಸಿಗುವ ಪೇಂಟ್‌ಗಳನ್ನು ಬಳಸಲಾಗುತ್ತಿದೆ ಎನ್ನುತ್ತಾರೆ ಕೆ.ಕೆ. ಪೇಜಾವರ.

‘ಭಾವೈಕ್ಯದ ಹುಲಿ ವೇಷ ಕುಣಿತ’

ನಮ್ಮದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಸೇರಿ ಆಚರಿಸುವ ಭಾವೈಕ್ಯದ ಹುಲಿವೇಷ ಕುಣಿತ. ಹಿರಿಯರು ಹಾಕಿಕೊಟ್ಟ ಸಾಂಪ್ರದಾಯಿಕ ಶೈಲಿಯನ್ನು ಚಾಚೂತಪ್ಪದೆ ಅನುಸರಿಸಿಕೊಂಡು ಬರುತ್ತಿದ್ದೇವೆ. ‘ನಲಿಕೆ’ಗಳು ಯುವಕರಲ್ಲಿ ವಿಶೇಷ ಆಸಕ್ತಿ ಮೂಡಿಸಿವೆ. ಗತ್ತಿನ ಕುಣಿತದ ಕಲಿಕೆ ಸುಲಭವಲ್ಲ, ಶ್ರದ್ಧೆ ಇರಬೇಕು. ಆದರೂ, ಅನೇಕರು ಆಸಕ್ತಿಯಿಂದ ಕಲಿಯಲು ಬರುತ್ತಾರೆ ಎನ್ನುತ್ತಾರೆ ಎಮ್ಮೆಕೆರೆ ಫ್ರೆಂಡ್ಸ್‌ ಸರ್ಕಲ್‌ನ ದಸರಾ ಹುಲಿ ತಂಡದ ಹುಲಿವೇಷ ಕುಣಿತಧಾರಿ ಅಮಿತ್‌ರಾಜ್.

ಮೊದಲಿನ ನೈಸರ್ಗಿಕ ಬಣ್ಣ ಬಳಕೆ ಈಗ ಇಲ್ಲ. ಪೇಂಟ್ ಅನ್ನು ಬಳಿಯುವಾಗ ತೀವ್ರ ಉರಿಯಾಗುತ್ತದೆ. ಬಿಸಿಲಿನ ಅಬ್ಬರ ಹೆಚ್ಚಿರುವುದರಿಂದ ಈಗ ಪೇಂಟ್‌ ಮೈಗೆ ಹಚ್ಚಿಕೊಂಡು 2–3 ದಿನ ಇರುವುದು ದೊಡ್ಡ ಸವಾಲು. ಪೇಂಟ್ ಬಳಿಯುವಾಗಲಂತೂ ಕಣ್ಣಂಚಲ್ಲಿ ನೀರು ತುಂಬುತ್ತದೆ. ಆದರೆ, ದೇವಿಯ ಕೃಪೆ ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ನೀಡುತ್ತದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.