ಮಂಗಳೂರು: ಕರಾವಳಿಯ ಪಿಲಿ ನಲಿಕೆಯನ್ನು (ಹುಲಿ ಕುಣಿತ) ಮುಂಬೈ ಮಹಾನಗರಕ್ಕೆ ಪರಿಚಯಿಸಲು ನಿರ್ಧರಿಸಲಾಗಿದ್ದು ಮುಂದಿನ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಮುಂಬೈ ಮಹಾನಗರದಲ್ಲಿ ಸ್ಪರ್ಧೆ ಏರ್ಪಡಿಸುವ ಯೋಜನೆ ಇದೆ ಎಂದು ಮಂಗಳೂರು ಪಿಲಿ ನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಿಲಿ ನಲಿಕೆ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಚಿತ್ರ ನಟ ಸುನಿಲ್ ಶೆಟ್ಟಿ ಅವರ ಜೊತೆ ಈ ಕುರಿತು ಮಾತುಕತೆ ನಡೆದಿದ್ದು ಹಿಂದಿ ಚಿತ್ರರಂಗದ ನಟ–ನಟಿಯರು ತಂಡಗಳ ಮಾಲೀಕತ್ವ ವಹಿಸುವಂತೆ ಕೋರಲಾಗುವುದು ಎಂದರು.
ಮಂಗಳೂರಿನಲ್ಲಿ ನಡೆಯುವ ಪಿಲಿ ನಲಿಕೆಯಿಂದಾಗಿ ಹುಲಿ ಕುಣಿತ ಎಲ್ಲ ಕಡೆ ಪಸರಿಸಿದೆ. ಕಳೆದ ಬಾರಿ ಮೊದಲ ಬಹುಮಾನ ಗೆದ್ದ ಗೋರಕ್ಷಕನಾಥ ತಂಡ ಒಂದು ವರ್ಷದಲ್ಲಿ ದೇಶದ ವಿವಿಧ ಕಡೆಗಳಲ್ಲಿ 42 ಪ್ರದರ್ಶನ ನೀಡಿದೆ ಎಂದು ಅವರು ವಿವರಿಸಿದರು.
‘ಹೆಣ್ಮಕ್ಕಳಿಂದ ಪಾವಿತ್ರ್ಯಕ್ಕೆ ಧಕ್ಕೆ’
‘ಪಿಲಿ ನಲಿಕೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದರೆ ಈ ಕುಣಿತದ ಪಾವಿತ್ರ್ಯ ಇಲ್ಲದಾಗುತ್ತದೆ’ ಎಂದು ಮಿಥುನ್ ರೈ ಹೇಳಿದರು. ‘ಹುಲಿ ಕುಣಿತಕ್ಕೆ ವೇಷ ಹಾಕುವವರು ವ್ರತದಲ್ಲಿ ಇರಬೇಕಾಗುತ್ತದೆ. ಮಹಿಳೆಯರು ಇರುವ ಮನೆಗೆ ಹೋಗುವುದು, ಅಲ್ಲಿ ಮಲಗುವುದು ನಿಷಿದ್ಧ ಇದೆ. ಸೂತಕ ಇದ್ದರೂ ವೇಷ ಹಾಕುವುದಿಲ್ಲ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.