ADVERTISEMENT

ಟಿಂಟ್ ಗ್ಲಾಸ್: ಬೇಕಿದೆ ಕಟ್ಟುನಿಟ್ಟಿನ ಕ್ರಮ

ನಿಯಮ ಉಲ್ಲಂಘನೆ: ಐಷಾರಾಮಿ ಕಾರುಗಳೇ ಅಧಿಕ

ಸಂಧ್ಯಾ ಹೆಗಡೆ
Published 13 ಅಕ್ಟೋಬರ್ 2024, 5:33 IST
Last Updated 13 ಅಕ್ಟೋಬರ್ 2024, 5:33 IST
<div class="paragraphs"><p>ಕಿಟಕಿ ಗ್ಲಾಸ್‌ಗೆ ಟಿಂಟ್ ಅಳವಡಿಸಿದ ಕಾರು</p></div>

ಕಿಟಕಿ ಗ್ಲಾಸ್‌ಗೆ ಟಿಂಟ್ ಅಳವಡಿಸಿದ ಕಾರು

   

ಮಂಗಳೂರು: ವಾಹನಗಳ ಕಿಟಕಿಗೆ ಟಿಂಟ್‌ ಗ್ಲಾಸ್ ಅಳವಡಿಕೆಗೆ ನಿಗದಿತ ಮಿತಿ ವಿಧಿಸಿದ್ದರೂ, ನಿಯಮ ಮೀರಿ, ಕಾರುಗಳಿಗೆ ಕಡುಬಣ್ಣದ ಗ್ಲಾಸ್ ಅಳವಡಿಸುವ ವ್ಯಾಮೋಹ ಹೆಚ್ಚುತ್ತಿದೆ. ಅದರಲ್ಲೂ ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಟಿಂಟೆಡ್ ಗ್ಲಾಸ್ ಅಳವಡಿಸಿ, ಯಾವುದೇ ಭಯವಿಲ್ಲದೆ ನಗರದಲ್ಲಿ ಓಡಾಡುತ್ತವೆ.

ವಾಹನದ ಮುಂಭಾಗ ಮತ್ತು ಹಿಂಭಾಗದ ಗ್ಲಾಸ್‌ಗೆ ಕನಿಷ್ಠ ಶೇ 70ರಷ್ಟು ಗೋಚರತೆ ಮತ್ತು ಬದಿಯ ಕಿಟಕಿಗಳಿಗೆ ಕನಿಷ್ಠ ಶೇ50ರಷ್ಟು ಗೋಚರತೆ ಇರಬೇಕು ಎಂದು ಕೇಂದ್ರ ಮೋಟಾರು ವಾಹನ ನಿಯಮದಲ್ಲಿ ಉಲ್ಲೇಖವಿದೆ. ಈ ನಿಯಮ ಉಲ್ಲಂಘಿಸಿದಲ್ಲಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಟ್ರಾಫಿಕ್ ಪೊಲೀಸರಿಗೆ ಕಾರು ಮಾಲೀಕರಿಗೆ ದಂಡ ವಿಧಿಸುವ ಅಧಿಕಾರ ಇದೆ. ಪೊಲೀಸ್ ಇಲಾಖೆ ಈ ಬಗ್ಗೆ ಆಗಾಗ ಕಾರ್ಯಾಚರಣೆ ನಡೆಸುತ್ತಿದ್ದರೂ, ನಗರದಲ್ಲಿ ಟಿಂಟೆಡ್ ಗ್ಲಾಸ್ ಅಳವಡಿಸಿರುವ ಕಾರುಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂಬುದು ಜನರ ಆರೋಪ.

ADVERTISEMENT

‘ಹೊಸ ಕಾರನ್ನು ತರುವಾಗ ಪಾರದರ್ಶಕವಾದ ಗ್ಲಾಸ್ ಇರುತ್ತದೆ. ನಂತರ ಮಾರ್ಪಾಡು ಮಾಡಿ ಕಾರಿನ ಕಿಟಕಿಗೆ ಟಿಂಟೆಡ್ ಗ್ಲಾಸ್ ಅಳವಡಿಸುತ್ತಾರೆ. ಇಡೀ ಕಾರಿನ ಗ್ಲಾಸ್‌ಗೆ ಕಡುಗಪ್ಪು ಬಣ್ಣದ ಟಿಂಟ್ ಅಳವಡಿಸುವುದರಿಂದ ಒಳಗೆ ಯಾರು ಕುಳಿತಿದ್ದಾರೆ ಎಂಬುದೂ ಕಾಣುವುದಿಲ್ಲ. ಅಂತಹ ಕಾರುಗಳು ನಗರದ ಎಲ್ಲ ಕಡೆಗಳಲ್ಲೂ ಕಾಣಸಿಗುತ್ತವೆ, ಸಂಜೆಯ ವೇಳೆ ಅಲ್ಲಲ್ಲಿ ರಸ್ತೆ ಬದಿಯಲ್ಲಿ ನಿಂತಿರುತ್ತವೆ. ಅದರಲ್ಲೂ ಮರ್ಸಿಡಿಸ್, ಬಿಎಂಡಬ್ಲ್ಯು, ಕ್ರೇಟಾ ಇಂತಹ ಕಾರುಗಳಲ್ಲೇ ಹೆಚ್ಚಾಗಿ ಟಿಂಟೆಡ್ ಗ್ಲಾಸ್ ಇರುವುದು ಕಾಣುತ್ತದೆ. ನಾವು ಈ ರೀತಿ ಮಾಡಿದರೆ, ಪೊಲೀಸರು ದಂಡ ವಿಧಿಸುತ್ತಾರೆ, ಬಡವರಿಗೊಂದು, ಶ್ರೀಮಂತರಿಗೊಂದು ನಿಯಮವೇ’ ಎಂದು ಪ್ರಶ್ನಿಸುತ್ತಾರೆ ಆಟೊರಿಕ್ಷಾ ಚಾಲಕರೊಬ್ಬರು.

‘ಟಿಂಟೆಡ್ ಗ್ಲಾಸ್ ವಿರುದ್ಧದ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ನಿಯಮ ಮೀರಿ ಟಿಂಟ್ ಅಳವಡಿಸಿದಲ್ಲಿ ಅಂತಹ ವಾಹನಗಳಿಗೆ ₹500 ದಂಡ ವಿಧಿಸಿ, ಟಿಂಟ್ ತೆಗೆಯುವಂತೆ ಸೂಚಿಸಲಾಗುತ್ತದೆ. ಟಿಂಟ್ ತೆಗೆಯದಿದ್ದಲ್ಲಿ ನೋಟಿಸ್ ಜಾರಿಗೊಳಿಸುವ ಜೊತೆಗೆ, ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ನಿರ್ದಿಷ್ಟ ವಾಹನದ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುತ್ತದೆ. 2024 ಜನವರಿಯಿಂದ ಈವರೆಗೆ 6,100 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು ₹30.10 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ’ಪ್ರಜಾವಾಣಿ’ಗೆ ತಿಳಿಸಿದರು.

‘ಅಪರಾಧ ತಡೆ ಮತ್ತು ರಸ್ತೆ ಸುರಕ್ಷತೆಯ ದೃಷ್ಟಿಯಿಂದ ವಾಹನಗಳಿಗೆ ಟಿಂಟ್ ಅಳವಡಿಸುವ ಬಗ್ಗೆ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ. ನಮ್ಮಲ್ಲಿ ಸದ್ಯದಲ್ಲಿ ನಾಲ್ವರು ಇನ್‌ಸ್ಪೆಕ್ಟರ್‌ಗಳು ಮಾತ್ರ ಇದ್ದು, ನಿಯಮಿತ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಡಿಸೆಂಬರ್ ವೇಳೆಗೆ ಹೊಸ ಐವರು ಇನ್‌ಸ್ಪೆಕ್ಟರ್‌ಗಳ ನೇಮಕ ಆಗಲಿದ್ದು, ಆಗ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.