ಮಂಗಳೂರು: ‘ತಿರುಪತಿ ತಿಮ್ಮಪ್ಪ ದೇವರಿಗೆ ನೈವೇದ್ಯವಾಗಿ ಅರ್ಪಿಸುವ ಲಡ್ಡು ತಯಾರಿಸಲು ದನದ ಕೊಬ್ಬು ಮಿಶ್ರಿತ ತುಪ್ಪ ಬಳಸಿ ಅಪಚಾರವೆಸಗಲಾಗಿದ್ದು, ಈ ಕುರಿತು ಚರ್ಚಿಸಲು ನಗರದ ಡೊಂಗರಕೇರಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಇದೇ 30 ರಂದು ಬೆಳಿಗ್ಗೆ 8ರಿಂದ ಧರ್ಮಾಗ್ರಹ ಸಭೆ ಹಮ್ಮಿಕೊಂಡಿದ್ದೇವೆ‘ ಎಂದು ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ತಿರುಪತಿಯಲ್ಲಿ ಹಾಗೂ ಇತರ ಎಲ್ಲ ದೇವಸ್ಥಾನಗಳಲ್ಲಿ ಎಲ್ಲಾ ಆಚಾರಗಳೂ ಧರ್ಮ ಸಮ್ಮತವಾಗಿ ನಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಿದ್ದೇವೆ. ಸಾಧು ಸಂತರು, ವಿವಿಧ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ’ ಎಂದರು.
‘ಆಂಧ್ರ ಪ್ರದೇಶದಲ್ಲಿ ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ತಿರುಪತಿಯ ಏಳು ಬೆಟ್ಟಗಳನ್ನುಸರ್ಕಾರದ ಸುಪರ್ದಿಗೆ ತರುವ, ಅಲ್ಲಿ ಶಿಲುಬೆ ಸ್ಥಾಪಿಸುವ ಪ್ರಯತ್ನ ನಡೆದಿತ್ತು. ಹಿಂದೂಗಳ ಪ್ರಬಲ ಪ್ರತಿಭಟನೆ ಬಳಿಕ ಆ ಪ್ರಸ್ತಾವವನ್ನು ಸರ್ಕಾರ ಕೈಬಿಟ್ಟಿತ್ತು. ರಾಜಶೇಖರ ರೆಡ್ಡಿ ಅವರ ಮಗ ಜಗನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಲಡ್ಡಿನ ವಿಚಾರದಲ್ಲಿ ಹಿಂದೂಗಳ ನಂಬಿಕೆಗೆ ಅಪಚಾರವೆಸಗಲಾಗಿದೆ. ಅಂತಹ ಅಪಚಾರಗಳು ಇನ್ನು ನಡೆಯದಂತೆ ತಡೆಯಲು ತಿರುಪತಿಯೂ ಸೇರಿ ಎಲ್ಲ ದೇವಸ್ಥಾನಗಳನ್ನು ಸರ್ಕಾರದ ತೆಕ್ಕೆಯಿಂದ ಹೊರತರಬೇಕು. ಹಿಂದೂ ದೇವಸ್ಥಾನದ ಆಡಳಿತದಲ್ಲಿ ಅನ್ಯಮತೀಯರಿಗೆ ಅವಕಾಶವೇ ಇರಬಾರದು. ಈ ಬಗ್ಗೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿದ್ದೇವೆ’ ಎಂದರು.
‘ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಮನೆ ಮನೆಯಲ್ಲಿ ತಿರುಪತಿ ತಿಮ್ಮಪ್ಪ ದೇವರನ್ನು ಆರಾಧಿಸುತ್ತೇವೆ. ಪ್ರತಿ ವರ್ಷವೂ ತುಳಸಿ ಪೂಜೆಯ ದಿನ ತಿಮ್ಮಪ್ಪ ದೇವರಿಗೆ ಮುಡಿಪು ತೆಗೆದಿಟ್ಟು ಒಪ್ಪಿಸುತ್ತೇವೆ. ತಿರುಪತಿ ದೇವರನ್ನು ನೋಡಲು ಸಾಧ್ಯವಾಗದಿದ್ದರೂ, ಅಲ್ಲಿನ ಲಡ್ಡು ಪ್ರಸಾದದಲ್ಲೇ ದೇವರನ್ನು ಕಾಣುತ್ತೇವೆ. ಅಂತಹ ನಂಬಿಕೆಗೆ ಧಕ್ಕೆ ಉಂಟಾಗಿದೆ’ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ನಗರದ ಎಲ್ಲಾ ದೇವಸ್ಥಾನ, ದೈವಸ್ಥಾನ, ಮಠಮಂದಿರ ಮತ್ತು ಭಜನಾ ಮಂದಿರಗಳಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ದಕ್ಷಿಣ ಪ್ರಾಂತ ಸಹ ಸೇವಾಪ್ರಮುಖ್ ಗೋಪಾಲ್ ಕುತ್ತಾರ್, ಬಜರಂಗದಳದ ಪ್ರಾಂತ ಸಹಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಹರೀಶ್ ಕುಮಾರ್ ಶೇಟ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.