ADVERTISEMENT

ದಕ್ಷಿಣ ಕನ್ನಡ ಜಿಲ್ಲೆ | ವಲಸೆ ಕಾರ್ಮಿಕರಿಗಿಲ್ಲ ಶೌಚಾಲಯ

ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ: ಕರಾವಳಿಯ ಮನೆಗಳಲ್ಲಿ ಶೌಚಾಲಯ: ಕಾರ್ಮಿಕರಿಗೆ ದೊರೆಯದ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:00 IST
Last Updated 5 ಅಕ್ಟೋಬರ್ 2019, 20:00 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

‘ಭಾರತ ಬಯಲು ಶೌಚಮುಕ್ತ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈಗಲೂ ನಸುಕಿನಲ್ಲೇ ಕೈಯಲ್ಲಿ ತಂಬಿಗೆ ಹಿಡಿದು ಮಹಿಳೆಯುರು, ಪುರುಷರು, ಮಕ್ಕಳು ಬಯಲ ಕಡೆಗೆ ಹೋಗುವುದು ಮಾಮೂಲಿ ದೃಶ್ಯ. ಸರ್ಕಾರದ ದಾಖಲೆಗಳಲ್ಲಿ ಮಾತ್ರ ಬಯಲು ಶೌಚಮುಕ್ತವಾಗಿದೆ. ಈ ಕುರಿತು ‘ಪ್ರಜಾವಾಣಿ’ ಇಲ್ಲಿ ಬೆಳಕು ಚೆಲ್ಲಿದೆ.

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಂಪೂರ್ಣ ಶೌಚಾಲಯ ನಿರ್ಮಾಣದ ಗುರಿ ಮುಟ್ಟುವ ಹಂತದಲ್ಲಿದ್ದರೆ, ನೀರಿನ ಅಭಾವದಿಂದ ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆಯಲ್ಲಿ ನಿರ್ಮಾಣವಾಗಿರುವ ಶೌಚಾಲಯಗಳ ಬಳಕೆ ಸಾಧ್ಯವಾಗುತ್ತಿಲ್ಲ.

2015 ರಲ್ಲೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ಬಯಲು ಶೌಚ ಮುಕ್ತ ಎಂದು ಸ್ವಯಂ ಘೋಷಣೆ ಮಾಡಲಾಗಿತ್ತು. ಕಳೆದ ವರ್ಷವಷ್ಟೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶೀಲಿಸಿದಾಗ 803 ಮನೆಗಳಿಗೆ ಶೌಚಾಲಯ ಇಲ್ಲದಿರುವ ಮಾಹಿತಿ ಲಭ್ಯವಾಗಿತ್ತು.

ADVERTISEMENT

ಮಾರ್ಚ್‌ ಅಂತ್ಯದ ವೇಳೆಗೆ ಮನೆ ನಂಬರ್‌ ಇದ್ದು, ಶೌಚಾಲಯ ಹೊಂದಿರದ ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಸ್ವಚ್ಛ ಭಾರತ್‌ ಯೋಜನೆಯಡಿ ₹12 ಸಾವಿರ ನೆರವು ನೀಡಲಾಗಿದ್ದು, ಉಳಿದೆಲ್ಲ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ.

‘ಬಯಲು ಶೌಚ ಮುಕ್ತ ಆಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಎರಡನೇ ಹಂತದ ಪರಿಶೀಲನೆಗೆ ಮಾಡಲಾಗಿದ್ದು, 803 ಮನೆಗಳಿಗೆ ಶೌಚಾಲಯ ಇರಲಿಲ್ಲ. ಇದೀಗ ಬಾಕಿ ಉಳಿದ ಎಲ್ಲ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್‌. ಸೆಲ್ವಮಣಿ ತಿಳಿಸಿದ್ದಾರೆ.

ನಗರವೂ ಬಯಲು ಶೌಚ ಮುಕ್ತವಾಗಿದೆ. ಆದರೆ, ನಗರದ ಹೊರವಲಯದಲ್ಲಿರುವ ಕೈಗಾರಿಕೆ ಪ್ರದೇಶಗಳ ಕಾರ್ಮಿಕರು ನಿತ್ಯ ಬಯಲೇ ಆಶ್ರಯಿಸಬೇಕಾಗಿದೆ.

ವಲಸೆ ಕಾರ್ಮಿಕರಿಗಿಲ್ಲ ಶೌಚಾಲಯ: 2017 ರಲ್ಲಿ ಉಡುಪಿ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ. ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ಬೇಸ್‌ಲೈನ್‌ ಸರ್ವೆಯಲ್ಲಿ ಗುರುತಿಸಲಾಗಿದ್ದ 28,636 ಶೌಚಾಲಯಗಳನ್ನು ನಿರ್ಮಿಸಲಾಗಿದೆ.

‘ಬೇಸ್‌ಲೈನ್‌ ಸರ್ವೆಯಿಂದ ಹೊರಗುಳಿದಿದ್ದವರನ್ನು ಮತ್ತೊಮ್ಮೆ ಸರ್ವೆ ಮಾಡಿ, 536 ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಬಳಿಕ 2 ಹಂತದ ಸಮೀಕ್ಷೆಯಲ್ಲಿ ಶೌಚಾಲಯ ಇಲ್ಲದ 67 ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರಿಗೂ ಶೌಚಾಲಯ ಕಟ್ಟಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಹೊರ ಜಿಲ್ಲೆಗಳ ವಲಸೆ ಕಾರ್ಮಿಕರಿಗೆ 17 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಿಲ್ಲೆ ಬಯಲು ಶೌಚ ಮುಕ್ತವಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ, ಸಮುದಾಯ ಶೌಚಾಲಯಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವುದರಿಂದ ನಗರದಲ್ಲಿರುವ ಹೆಚ್ಚಿನ ವಲಸೆ ಕಾರ್ಮಿಕರಿಗೆ ಶೌಚಾಲಯಗಳ ಸೌಲಭ್ಯ ಇಲ್ಲ. ಮನೆ, ಅಪಾರ್ಟಮೆಂಟ್‌ಗಳ ನಿರ್ಮಾಣ ಕಾರ್ಯದಲ್ಲಿ ಹೊರ ಜಿಲ್ಲೆಗಳ ನೂರಾರು ಕಾರ್ಮಿಕರು ದುಡಿಯುತ್ತಿದ್ದು, ಶೌಚಕ್ಕೆ ಪೊದೆ, ನಿರ್ಜನ ಪ್ರದೇಶಗಳನ್ನು ಆಶ್ರಯಿಸಬೇಕಾಗಿದೆ.

ಕುಡಿಯುವುದಕ್ಕೇ ನೀರಿಲ್ಲ: ಚಿಕ್ಕಮಗಳೂರು ಜಿಲ್ಲೆಯು 2018ರಲ್ಲಿ ಬಯಲು ಶೌಚ ಮುಕ್ತ ಎಂದು ಘೋಷಣೆಯಾಗಿದೆ. ಜಿಲ್ಲಾ ಪಂಚಾಯಿತಿ ಸಮೀಕ್ಷೆ ಪ್ರಕಾರ ಸ್ವಚ್ಛ ಭಾರತ ಮಿಷನ್‌ ಶುರುವಾದಾಗಿನಿಂದ ಈವರೆಗೆ 74,036 ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡಲಾಗಿದೆ.

ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಮಳೆಗಾಲದಲ್ಲೂ 60 ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ಕುಡಿಯುವ ನೀರು ಒದಗಿಸಲಾಗುತ್ತಿದೆ. ಮನೆಗಳಲ್ಲಿ ಶೌಚಾಲಯ ಇದ್ದರೂ, ನೀರಿನ ಸಮಸ್ಯೆಯಿಂದಾಗಿ ಬಹಳಷ್ಟು ಬಳಕೆಯಾಗುತ್ತಿಲ್ಲ.

‘2–3 ದಿನಕ್ಕೊಮ್ಮೆ ಟ್ಯಾಂಕರ್‌ನಲ್ಲಿ ನೀರು ಕೊಡುತ್ತಾರೆ. ಮನೆಗಳಲ್ಲಿ ಶೌಚಾಲಯ ಇದ್ದರೂ ಬಳಕೆಯಾ
ಗುತ್ತಿಲ್ಲ. ಬಯಲನ್ನು ಆಶ್ರಯಿಸುವಂತಾಗಿದೆ’ ಎನ್ನುತ್ತಾರೆ ಲಕ್ಯಾ ಗ್ರಾಮದ ಕೆಂಚಪ್ಪ.

ನಗರ ವ್ಯಾಪ್ತಿಯ ಹಿರೇಮಗಳೂರು, ಕಲ್ಲುದೊಡ್ಡಿ, ಗವನಹಳ್ಳಿ ಇತರೆಡೆಗಳಲ್ಲಿ ಚೊಂಬು ಹಿಡಿದು ಶೌಚ ತೆರಳುವ ಪರಿಪಾಟ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.