ADVERTISEMENT

'ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ'

ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿ ಚಿಂತನ– ಮಂಥನ ಸಭೆಯಲ್ಲಿ ಡಾ.ಕೆ.ವಿ.ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 5:10 IST
Last Updated 24 ಅಕ್ಟೋಬರ್ 2024, 5:10 IST
ಕಾರ್ಯಕ್ರಮದಲ್ಲಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿದರು. (ಎಡದಿಂದ) ಪಿ.ಸಿ.ರಾವ್‌, ಮುಲ್ಲೈ ಮುಗಿಲನ್ ಎಂ.ಪಿ, ವಿದ್ಯಾ ಕುಮಾರಿ, ಡಾ.ಆನಂದ ಕೆ., ಚಂದ್ರಹಾಸ ಶೆಟ್ಟಿ ಭಾಗವಹಿಸಿದ್ದರು : ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿದರು. (ಎಡದಿಂದ) ಪಿ.ಸಿ.ರಾವ್‌, ಮುಲ್ಲೈ ಮುಗಿಲನ್ ಎಂ.ಪಿ, ವಿದ್ಯಾ ಕುಮಾರಿ, ಡಾ.ಆನಂದ ಕೆ., ಚಂದ್ರಹಾಸ ಶೆಟ್ಟಿ ಭಾಗವಹಿಸಿದ್ದರು : ಪ್ರಜಾವಾಣಿ ಚಿತ್ರ   

ಮಂಗಳೂರು: ‘ರಾಜ್ಯ ಸರ್ಕಾರವು ಪ್ರವಾಸೋದ್ಯಮ ನೀತಿಯನ್ನು ಪರಿಷ್ಕರಿಸುತ್ತಿದ್ದು, ಕರಾವಳಿಯ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಪ್ರತ್ಯೇಕ ಅಧ್ಯಾಯ ಸೇರ್ಪಡೆಗೆ ತಯಾರಿ ನಡೆದಿದೆ. ಇಲ್ಲಿನ ಪ್ರವಾಸೋದ್ಯಮ ಎದುರಿಸುತ್ತಿರುವ ತೊಡಕುಗಳನ್ನು ನಿವಾರಿಸಲು  ಕೆಲವೊಂದು ಮಾರ್ಪಾಡು ಮಾಡಲಾಗುತ್ತಿದೆ’ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಕರ್ನಾಟಕ ಟೂರಿಸಂ ಸೊಸೈಟಿ ಆಶ್ರಯದಲ್ಲಿ ಇಲ್ಲಿ ಬುಧವಾರ ಏರ್ಪಡಿಸಿದ್ದ ಕರಾವಳಿಯ ಪ್ರವಾಸೋದ್ಯಮ ಅಭೀವೃದ್ಧೀ ಕುರಿತ ಚಿಂತನ– ಮಂಥನ ಸಭೆ ‘ಕನೆಕ್ಟ್‌ 2024’ರಲ್ಲಿ ಅವರು ಮಾತನಾಡಿದರು.

‘ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅರ್ಜಿದಾರರಿಗೆ ನೆರವಾಗಲು ಸೌಲಭ್ಯ ನೆರವು ಕೇಂದ್ರ (ಫೆಸಿಲಿಟೇಷನ್ ಸೆಂಟರ್‌) ಸ್ಥಾಪಿಸುವ ಚಿಂತನೆ ಇದೆ. ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ಪ್ರಾಧಿಕಾರ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಅನುಮತಿಗೆ ಸಂಬಂಧಿಸಲು ಪ್ರತ್ಯೇಕ ವ್ಯವಸ್ಥೆ ರೂಪಿಸಲಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಕರಾವಳಿಯ ಧಾರ್ಮಿಕ ಕ್ಷೇತ್ರಗಳ ಜೊತೆಗೆ ಇಲ್ಲಿನ ಕಂಬಳ, ಭೂತಾರಾಧನೆ, ಯಕ್ಷಗಾನದಂತಹ ಸಾಂಸ್ಕೃತಿಕ ಪರಂಪರೆಗಳಿಗೆ, ಸಾಹಸ ಪ್ರವಾಸೋದ್ಯಮಕ್ಕೆ ಜನರನ್ನು ಸೆಳೆಯುವ ಪ್ರಯತ್ನಗಳಾಗಬೇಕು. ಎಡೆಬಿಡದೆ ಸುರಿಯುವ ಇಲ್ಲಿನ ಮಳೆ, ಸಮುದ್ರದಲೆಗಳ ಸೊಬಗು, ಕೆಸರು ಗದ್ದೆ, ಪ್ರಾಕೃತಿಕ ತಾಣಗಳೂ ನಮ್ಮ ಶಕ್ತಿ. ಅವುಗಳನ್ನೂ ಸಮರ್ಥವಾಗಿ ಬಳಸಿಕೊಂಡು ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕಿದೆ. ಇದಕ್ಕೆ ಖಾಸಗಿಯವರ ಸಹಕಾರ ಅಗತ್ಯ’ ಎಂದರು.

ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ‘ಇಲ್ಲಿನ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವವರಲ್ಲಿ ಶೇ 35ರಷ್ಟು ಮಂದಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಹಾಗೂ ವಹಿವಾಟಿನ ಸಲುವಾಗಿ ಬಂದವರು.  ಬೇಕಲಕೋಟೆ ಹಾಗೂ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೋಗುವವರೂ ವಿಮಾನದಲ್ಲಿ ಇಲ್ಲಿಗೆ ಬಂದು ಟ್ಯಾಕ್ಸಿ ಮಾಡಿಕೊಂಡು ಹೋಗುತ್ತಾರೆ.  ಇಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಬರುವವರು  ಇತರ ಪ್ರವಾಸಿ ತಾಣಗಳನ್ನೂ ಸಂದರ್ಶಿಸುವಂತಾಗಬೇಕು. ಚಾರಣ, ಸರ್ಫಿಂಗ್‌ನಂತಹ ಸಾಹಸ ಪ್ರವಾಸೋದ್ಯಮದ ಅವಕಾಶಗಳನ್ನು  ಬಳಸಿಕೊಳ್ಳಬೇಕು’ ಎಂದು  ತಿಳಿಸಿದರು.

ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ‘ಹತ್ತು ವರ್ಷ ಹಿಂದೆ ಸೇಂಟ್‌ ಮೇರಿ ದ್ವೀಪಕ್ಕೆ ವರ್ಷಕ್ಕೆ 5 ಲಕ್ಷದಷ್ಟು ಪ್ರವಾಸಿಗರು ಬರುತ್ತಿದ್ದರು. ಕಳೆದ ವರ್ಷ ಅಲ್ಲಿಗೆ 23 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮ ತಾಣಗಳ ಪಟ್ಟಿಯಲ್ಲಿ ಹಿಂದೆ 35 ತಾಣಗಳು ಮಾತ್ರ ಇದ್ದವು. ಅವುಗಳ ಸಂಖ್ಯೆ ಹೆಚ್ಚಿಸಿದ್ದೇವೆ.  ಅವುಗಳ ಕಾಫಿ ಟೇಬಲ್ ಪುಸ್ತಕ ಸಿದ್ಧವಾಗುತ್ತಿದೆ. ಪ್ರವಾಸಿ ತಾಣಕ್ಕೆ ಸಂಪರ್ಕ ಸಮಸ್ಯೆ ನೀಗಿಸಲು ಕ್ರಮವಹಿಸಲಾಗಿದೆ. ಜಿಲ್ಲೆಯ 18 ಕಿನಾರೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ’ ಎಂದರು.

‘ಪ್ರಾಕೃತಿಕ ಸೌಂದರ್ಯ ಉಳಿಸಿಕೊಂಡು, ಮೂಲಸೌಕರ್ಯ ಕಡಿಮೆ ಖರ್ಚಿನಲ್ಲಿ ಪ್ರವಾಸಿ ತಾಣಗಳನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಲು ಆದ್ಯತೆ ನೀಡಿದ್ದೇವೆ. ನಮ್ಮ ಈ ಪ್ರಯತ್ನವನ್ನು ಪರಿಗಣಿಸಿ ‌‌ಕೇಂದ್ರ ಪ್ರವಾಸೋದ್ಯಮ ಇಲಾಖೆಯು  ₹ 10 ಕೋಟಿ ಅನುದಾನ ಮಂಜೂರು ಮಾಡಿದೆ’ ಎಂದರು.

ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಕರ್ನಾಟಕ ಟೂರಿಸಂ ಸೊಸೈಟಿಯ ಪಿ.ಸಿ.ರಾವ್‌, ದ.ಕ.ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಚಂದ್ರಹಾಸ ಶೆಟ್ಟಿ, ಉಡುಪಿ ಜಿಲ್ಲೆಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ ಮೊದಲಾದವರು ಭಾಗವಹಿಸಿದ್ದರು.

ಕಡಲ ಕಿನಾರೆಗಳಿಗೆ ಪಿಲಿಕುಳಕ್ಕೆ ಪ್ರವಾಸಿಗಳಿಗೆಂದೇ  ಪ್ರತ್ಯೇಕ ಬಸ್‌ ಬೇಕು ಕಿನಾರೆ ಬಳಿಯ ಸರ್ಕಾರಿ ಜಾಗದಲ್ಲಿ ಟೆಂಟ್‌ (ಶಾಗ್‌) ಅಳವಡಿಕೆಗೆ ಅವಕಾಶ ಕಲ್ಪಿಸಬೇಕು ಪ್ರವಾಸಿ ತಾಣ ಸಂಪರ್ಕ ರಸ್ತೆಗಳನ್ನು ದುರಸ್ತಿಪಡಿಸಬೇಕು

- ‘ಹೋಮ್‌ ಸ್ಟೇಗೆ ಡೀಮ್ಡ್‌ ಮಂಜೂರಾತಿ‘ ‘ಹೋಂ ಸ್ಟೇಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರೂ ಮಂಜೂರಾತಿ ಸಿಕ್ಕಿಲ್ಲ. ಸ್ಥಳೀಯ ಸಂಸ್ಥೆ ಪೊಲೀಸ್‌ ಇಲಾಖೆ ಹಾಗೂ ನೆರೆಕರೆಯವರಿಂದ ನಿರಾಕ್ಷೇಪಣಾ ಪತ್ರ ಪಡೆದು ಸಲ್ಲಿಸುವಂತೆ ಸೂಚಿಸಲಾಗುತ್ತಿದೆ. ಇದನ್ನೆಲ್ಲ ಮಾಡಲು ನಾಲ್ಕೈದು ತಿಂಗಳು ಬೇಕು. ನೆರೆ ಮನೆಯವರ ಜೊತೆ ಸಂಬಂಧ ಚೆನ್ನಾಗಿಲ್ಲವಾದರೆ ಅವರು ನಿರಾಕ್ಷೇಪಣಾ ಪತ್ರ ನೀಡುತ್ತಾರೆಯೇ’ ಎಂದು ಕಟಪಾಡಿಯ ವ್ಯಕ್ತಿಯೊಬ್ಬರು ಪ್ರಶ್ನಿಸಿದರು. ‘ಉಡುಪಿ ಜಿಲ್ಲೆಯಲ್ಲಿ 256  ಹೋಂ ಸ್ಟೇಗಳಿಗೆ ಅನುಮತಿ ನೀಡಲಾಗಿದೆ. ಕೆಲವು ಗ್ರಾಮ ಪಂಚಾಯಿತಿಗಳು ಹೋಂ ಸ್ಟೇ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ನಿರ್ಣಯಕೈಗೊಳ್ಳುತ್ತಿವೆ. ಹಾಗಾಗಿ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಸ್ವಲ್ಪ ಗೊಂದಲ ಇದೆ. ಇಂತಹ ನಿರ್ದಿಷ್ಟ ಪ್ರಕರಣಗಳ ಬಗ್ಗೆ ಪರಿಶೀಲಿಸಿ ಕ್ರಮವಹಿಸುತ್ತೇವೆ’ ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದರು. ‘ಹೋಂಸ್ಟೇಗೆ ಅರ್ಜಿ ಸಲ್ಲಿಸಿದರೆ ಸಾಕು. ನಿರಾಕ್ಷೇಪಣಾ ಪತ್ರ ಪಡೆಯುವ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆಯೇ ಮಾಡಲಿದೆ. ಸಂಬಂಧಪಟ್ಟ ಇಲಾಖೆಗಳಿಂದ 15 ದಿನಗಳ ಒಳಗೆ ಅನುಮತಿ ಸಿಗದಿದ್ದರೆ ಅರ್ಜಿಗೆ ಆಕ್ಷೇಪವನ್ನು ವ್ಯಕ್ತವಾಗದಿದ್ದರೆ ಡೀಮ್ಡ್‌ ಅನುಮತಿ ನೀಡುವ ಅವಕಾಶ ಕಲ್ಪಿಸಲಿದ್ದೇವೆ’ ಎಂದು ರಾಜೇಂದ್ರ ತಿಳಿಸಿದರು.  ‘ಹೋಂಸ್ಟೇ ಮಾಲೀಕರು ಮದ್ಯ ಸರಬರಾಜು ಮಾಡುವಂತಿಲ್ಲ. ಪ್ರವಾಸಿಗಳೇ ವ್ಯಕ್ತಿಯೊಬ್ಬನಿಗೆ ಅನುಮತಿ ಇರುವಷ್ಟು ಮದ್ಯ ತಂದು ಸೇವಿಸಲು ಅಡ್ಡಿ ಇಲ್ಲ.  ಪಾನಮತ್ತರಾಗಿ ರಾದ್ಧಾಂತ ಮಾಡಿದರೆ ಪೊಲೀಸ್‌ ಅಧಿಕಾರಿಗಳು ಮಧ್ಯಪ್ರವೇಶ ಮಾಡಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಗರ ಮಹಾಯೋಜನೆಯಲ್ಲೂ ಮಾರ್ಪಾಡು’ ‘ಕರಾವಳಿಯಲ್ಲಿ ಪ್ರವಾಸಿ ಚಟುವಟಿಕೆ ಉತ್ತೇಜನ ನೀಡಲು ನಗರ ಮಹಾಯೋಜನೆಯಲ್ಲೂ ಕೆಲವೊಂದು ಅಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಯಾವೆಲ್ಲ ಚಟುವಟಿಕೆಗೆ ಎಲ್ಲೆಲ್ಲಿ ಅವಕಾಶ ನೀಡಲಾಗುತ್ತದೆ ಎಂಬುದನ್ನು ಮಾಸ್ಟರ್‌ ಪ್ಲ್ಯಾನ್‌ನಲ್ಲೇ ಉಲ್ಲೇಖಿಸಲಿದ್ದೇವೆ’ ಎಂದು ಮುಲ್ಲೈ ಮುಗಿಲನ್ ಎಂ.ಪಿ. ಎಂದರು. ‘ವರ್ಷದಲ್ಲಿ ಕನಿಷ್ಠ 100 ದಿನಗಳ  ಬೇಡಿಕೆ ಇದ್ದರೆ ಹೆಲಿ ಟೂರಿಸಂ ಆರಂಭಿಸಲು  ಆ ಸಂಸ್ಥೆಗಳು ಆಸಕ್ತಿ ವಹಿಸುತ್ತವೆ. ಇದಕ್ಕೆ ಮೂಲಸೌಕರ್ಯ ಕಲ್ಪಿಸಲು ಸಿದ್ಧವಿದ್ದೇವೆ’ ಎಂದರು.

‘ಗೋವಾ ರೀತಿ ಮದ್ಯ ಮಾರಾಟಕ್ಕೆ ಅವಕಾಶ? ಕಿನಾರೆಗಳಲ್ಲಿ ನೀರಾ ಕಳ್ಳು ವೋಡ್ಕಾ ಬಿಯರ್‌ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಪ್ರವಾಸೋದ್ಯಮಿಯೊಬ್ಬರು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜೇಂದ್ರ ಕುಮಾರ್‌ ‘ಗೋವಾ ಮಾದರಿಯಲ್ಲಿ ಇಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಪ್ರವಾಸೋದ್ಯಮ ನೀತಿ ಅಂತಿಮಗೊಳಿಸುವ ಮುನ್ನ ಸರ್ಕಾರ ಈ ಬಗ್ಗ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ’ ಎಂದು ತಿಳಿಸಿದರು. ‘ರಾಜ್ಯದ ಎಲ್ಲ ಮಹಾನಗರಗಳಲ್ಲಿ ಹೋಟೆಲ್‌ ಹಾಗೂ ಇತರ ಮಳಿಗೆಗಳು ರಾತ್ರಿ 1ರವರೆಗೆ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿದೆ. ಇದಕ್ಕೆ ಪೊಲೀಸ್‌ ಇಲಾಖೆಯೂ ಅಡ್ಡಿಪಡಿಸುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.