ಮಂಗಳೂರು:ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕರ್ನಾಟಕ ಪ್ರವಾಸೋದ್ಯಮ ನೀತಿ 2024–29ಕ್ಕೆ ರಾಜ್ಯ ಸಚಿವ ಸಂಪುಟ ಈಚೆಗೆ ಅನುಮೋದನೆ ನೀಡಿದೆ. ಹೊಸ ಬಗೆಯ ಪ್ರವಾಸಿ ಆಕರ್ಷಣೆಗಳಿಗೆ ಪೂರಕವಾದ ಭೌಗೋಳಿಕತೆ, ಸಾಂಸ್ಕೃತಿಕ ಮತ್ತು ಪಾರಂಪರಿಕ ಹಿನ್ನೆಲೆಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಈ ನೀತಿ ಹೊಸ ಹುರುಪು ತುಂಬುವ ವಿಶ್ವಾಸ ಮೂಡಿಸಿದೆ.
ಹೊಸ ನೀತಿಯಲ್ಲಿ ಪ್ರಮುಖ ಒಂಬತ್ತು ಕೇಂದ್ರೀಕೃತ ಕ್ಷೇತ್ರಗಳು, 25 ವಿಷಯಾಧಾರಿತ ಕ್ಷೇತ್ರಗಳು ಹಾಗೂ ಅದಕ್ಕೆ ಪೂರಕವಾಗಿ 44 ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಲಾಗಿದೆ. ಕೃಷಿ ಪ್ರವಾಸ, ಸ್ವಾಸ್ಥ್ಯ ಪ್ರವಾಸೋದ್ಯಮ, ಆಧ್ಯಾತ್ಮಿಕ–ತೀರ್ಥಯಾತ್ರಾ ಪ್ರವಾಸ, ಪಾರಂಪರಿಕ ತಾಣ ಭೇಟಿ, ಅಧ್ಯಯನ ಪ್ರವಾಸ, ಸಾಹಸ ಪ್ರವಾಸೋದ್ಯಮದ ಜೊತೆಗೆ ವಿರಾಮ, ವಿನೋದ, ಜ್ಞಾನಾರ್ಜನೆ, ಮನಃಶಾಂತಿ, ವಿಶ್ರಾಂತಿ ಮುಂತಾದ ಅಂಶಗಳನ್ನು ಒಳಗೊಂಡ ಹೊಸ ಪ್ರವಾಸೋದ್ಯಮ ನೀತಿ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ ಎನ್ನುತ್ತಾರೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.
ರಾಜ್ಯದ 320 ಕಿ.ಮೀ ಕರಾವಳಿ ತೀರದಲ್ಲಿರುವ ಪ್ರವಾಸಿ ತಾಣಗಳು 2023ರಲ್ಲಿ 8 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದ್ದವು. ರಾಜ್ಯದ ಒಟ್ಟು ಪ್ರವಾಸಿಗರಲ್ಲಿ ಕರಾವಳಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದವರ ಪಾಲು ಶೇ 12ರಿಂದ ಶೇ 15ರಷ್ಟಿದೆ. ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇರಳ ಅವಕಾಶಗಳಿರುವುದನ್ನು ಮನಗಂಡೇ ಹೊಸ ನೀತಿಯಲ್ಲಿ ಕರಾವಳಿ ಪ್ರವಾಸೋದ್ಯಮ, ಬೀಚ್ ಪ್ರವಾಸೋದ್ಯಮ ಮತ್ತು ಕಡಲ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ವಿಶ್ರಾಂತಿ ಧಾಮ, ಮನರಂಜನೆ ಹಾಗೂ ಸಾಹಸ ಚಟುವಟಿಕೆಗೆ ಒತ್ತು ನೀಡಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸು ಆಶಯವನ್ನು ಹೊಂದಲಾಗಿದೆ.
ವೈದ್ಯಕೀಯ, ಸ್ವಾಸ್ಥ್ಯ, ಗ್ರಾಮೀಣ, ಸಾಹಸ, ಕೃಷಿ, ಸಾಂಸ್ಕೃತಿಕ, ಪಾರಂಪರಿಕ, ಶೈಕ್ಷಣಿಕ, ಸಾಹಿತ್ಯ, ಕ್ರೀಡೆ, ಬುಡಕಟ್ಟು, ವಾರಾಂತ್ಯ ಹಾಗೂ ನಿಶ್ ಪ್ರವಾಸೋದ್ಯಮ (ಸಣ್ಣ ಗುಂಪುಗಳನ್ನು ಉದ್ದೇಶಿಸಿದ ಉತ್ಪನ್ನ ಆಧರಿತ ಪ್ರವಾಸೋದ್ಯಮ)ಯೋಜನೆಗಳಿಗೂ ಪ್ರವಾಸಿಗರನ್ನು ಸೆಳೆಯಬಲ್ಲ ಹೇರಳ ಅವಕಾಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಈ ಯೋಜನೆಗಳಿಗೆ ಪೂರಕವಾದ ಹಿನ್ನೆಲೆ ಮತ್ತು ಪರಂಪರೆ ಹೊಂದಿರುವ ಇಲ್ಲಿನ ಸಾಮರ್ಥ್ಯವನ್ನು ಮನಗಂಡು ವಿಶ್ವದರ್ಜೆಯ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಕರಾವಳಿ ತೀರದುದ್ದಕ್ಕೂ ವಿಶ್ವದರ್ಜೆಯ ಅನುಭವ ಒದಗಿಸುವ ಸಂಯೋಜಿತ ಪ್ರವಾಸೋದ್ಯಮ ವಲಯಗಳನ್ನು ಅಭಿವೃದ್ಧಿಪಡಿಸುವ ಆಶಯ ಹೊಸ ನೀತಿಯಲ್ಲಿದೆ. ಸುಸಜ್ಜಿತ ಮೂಲಸೌಕರ್ಯ, ಉತ್ಕೃಷ್ಟ ಗುಣಮಟ್ಟದ ಪರಿಸರ ಸ್ನೇಹಿ ವಾಸ್ತವ್ಯ, ಸಾಹಸ, ಸಂಸ್ಕೃತಿ, ಮನರಂಜನಾ ಹಬ್‌ಗಳು, ಎಲ್ಲ ಆದಾಯವರ್ಗದವರಿಗೂ ಕೈಗೆಟಕುವ ಸೌಲಭ್ಯಗಳ ಸೃಷ್ಟಿಸುವ ಉದ್ದೇಶವಿದೆ. ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ಅನುಮತಿಗಳನ್ನು ತ್ವರಿತವಾಗಿ ಒದಗಿಸಲು ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸುವ ಭರವಸೆ ನೀಡಲಾಗಿದೆ.
ಪ್ರವಾಸಿ ಋತುಗಳಲ್ಲಿ ಶಾಕ್ಸ್, ಕಿಯಾಸ್ಕ್‌ಗಳನ್ನು ಬಳಸಿ ತಾತ್ಕಾಲಿಕ ಸೌಕರ್ಯ ಕಲ್ಪಿಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಚಿಂತನೆಯೂ ಇದೆ. ಕಿನಾರೆಗಳಲ್ಲಿ ವಾರ್ಷಿಕ ಮೇಳ/ ಉತ್ಸವ ಆಯೋಜಿಸಿ ಇಲ್ಲಿನ ಸಂಸ್ಕೃತಿ, ಸ್ಥಳೀಯ ಪಾಕ ವಿಶೇಷಗಳನ್ನು ಪರಿಚಯಿಸುವ ಯೋಜನೆ ಇದೆ. ಮೀನಿನ ಖಾದ್ಯಗಳ ಹಾಗೂ ಕರಾವಳಿ ಶೈಲಿಯ ಪಾರಂಪರಿಕ ಶೈಲಿಯ ಸ್ವಾದವನ್ನು ಇನ್ನೊಂದು ಎತ್ತರಕ್ಕೆ ಒಯ್ಯಬಲ್ಲುದು ಎಂಬುದು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಅನಿಸಿಕೆ.
ವಿವಾಹ ಪ್ರವಾಸೋದ್ಯಮ (ಡೆಸ್ಟಿನೇಷನ್ ವೆಡ್ಡಿಂಗ್), ಎಂಐಸಿಇ (ಸಭೆ, ಉತ್ತೇಜನ, ಸಮ್ಮೇಳನ, ವಸ್ತುಪ್ರದರ್ಶನ) ಪ್ರವಾಸೋದ್ಯಮ ಮತ್ತು ವ್ಯಾಪಾರ ಪ್ರವಾಸೋದ್ಯಮವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮಂಗಳೂರು ನಗರವು ಈಗಾಗಲೇ ರಾಷ್ಟ್ರೀಯ ಅಂತರರಾಷ್ಟ್ರೀಯ ಸಮ್ಮೇಳನಗಳಿಗೆ ಆತಿಥ್ಯ ವಹಿಸುವ ಸೌಕರ್ಯ ಹಾಗೂ ಪರಂಪರೆಗಳೆರಡನ್ನೂ ಜಿಲ್ಲೆಯು ಹೊಂದಿದೆ. ಆತಿಥ್ಯ ಕ್ಷೇತ್ರದಲ್ಲಿ ಇಲ್ಲಿನ ಜನರು ಎತ್ತಿದ ಕೈ. ಪ್ರವಾಸೋದ್ಯಮ ನೀತಿಯಲ್ಲಿ ಇದಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಇಲ್ಲಿನ ಉತ್ಸಾಗಿ ಯುವೋದ್ಯಮಿಗಳು ಹಿಂದುಳಿಯಲಿಕ್ಕಿಲ್ಲ ಎನ್ನುತ್ತಾರೆ ಮಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ.
ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಹೆಸರುವಾಸಿ. ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಶ್ರೀಕ್ಷೇತ್ರ ಧರ್ಮಸ್ಥಳ, ಪೊಳಲಿ ರಾಜರಾಜೇಶ್ವರಿ, ಬಪ್ಪನಾಡು ಮೊದಲಾದ ದೇವಸ್ಥಾನಗಳು, ಮಿಲಾಗ್ರಿಸ್ ಚರ್ಚ್, ಉಳ್ಳಾಲ ದರ್ಗಾ ಮೊದಲಾದ ಕ್ಷೇತ್ರಗಳು ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿವೆ. ರಾಜ್ಯದಲ್ಲೇ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿ ಜಿಲ್ಲೆ ನಮ್ಮದು. ಸುಸಜ್ಜಿತ ಹೋಟೆಲ್‌ಗಳು, ಗುಣಮಟ್ಟದ ರಸ್ತೆಗಳು, ಸಂಚಾರ ನಿಯಂತ್ರಣ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಯಾತ್ರಿ ನಿವಾಸ. ಮೊದಲಾದ ಸೌಕರ್ಯಗಳನ್ನು ಇನ್ನಷ್ಟು ಹೆಚ್ಚಿಸಿದ್ದೇ ಆದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಇನ್ನೊಂದು ಮಜಲಿಗೆ ತಲುಪಿಸುವುದಕ್ಕೆ ಅವಕಾಶವಿದೆ.
ಹೊಸ ನೀತಿಯಲ್ಲಿ ಪ್ರವಾಸೋದ್ಯಮದ ಮೂಲಸೌಕರ್ಯ ಅಭಿವೃದ್ಧಿಗಾಗಿ ₹ 1,500 ಕೋಟಿ ಹೂಡಿಕೆ ಮಾಡಲು ಸರ್ಕಾರ ಯೋಜಿಸಿದೆ. ಆತಿಥೇಯ ಉದ್ಯಮಕ್ಕೆ ಉತ್ತೇಜನ ನೀಡಲು ಶೇ.5 ರಷ್ಟು ಬಂಡವಾಳ ಹೂಡಿಕೆ ಸಹಾಯಧನವನ್ನು ಸರ್ಕಾರ ಹೆಚ್ಚುವರಿಯಾಗಿ ಒದಗಿಸಲಿದೆ. ಒಂಬತ್ತು ಪ್ರೋತ್ಸಾಹಕ ಯೋಜನೆಗಳನ್ನು ಹಾಗೂ ಎರಡು ರೀತಿಯ ಸಹಾಯಧನಗಳನ್ನು, ಏಳು ಬಗೆಯ ರಿಯಾಯಿತಿಗಳನ್ನು ಪ್ರಕಟಿಸಿದೆ. ಇವುಗಳು ಸಮರ್ಪಕವಾಗಿ ಅನುಷ್ಠಾನವಾಗಿದ್ದೇ ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೊದ್ಯಮ ಹೊಸ ಶಖೆ ಆರಂಭವಾಗುವ ನಿರೀಕ್ಷೆ ಇಟ್ಟುಕೊಳ್ಳಬಹುದು.
ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಕರಾವಳಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಅನೇಕ ಅಂಶಗಳಿವೆ. ಸಮರ್ಪಕವಾಗಿ ಅನುಷ್ಠಾನವಾದರೆ ಜಿಲ್ಲೆ ಖಂಡಿತಾ ಪ್ರವಾಸ ಕ್ಷೇತ್ರದಲ್ಲಿ ಹೆಗ್ಗುರುತು ಮೂಡಿಸಲಿದೆ
–ಚಂದ್ರಹಾಸ ಶೆಟ್ಟಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಪ್ರವಾಸಿಗಳನ್ನು ಸೆಳೆಯುವುದಕ್ಕೆ ಪೂರಕ ವಾತಾವರಣ ಇದೆ. ಹೊಸ ಪ್ರವಾಸೋದ್ಯಮ ನೀತಿಯು ಇಲ್ಲಿಗೆ ಪ್ರವಾಸಿಗರಲ್ಲಿ ಆಕರ್ಷಿಸಲು ಮತ್ತಷ್ಟು ಬಲತುಂಬಲಿದೆ
–ರಶ್ಮಿ ಎಸ್.ಆರ್ ಉಪನಿರ್ದೇಶಕರು (ಪ್ರಭಾರ) ಪ್ರವಾಸೋದ್ಯಮ ಇಲಾಖೆ ದಕ್ಷಿಣ ಕನ್ನಡ
ಹೊಸ ನೀತಿಯಲ್ಲಿರುವ 44 ಅರ್ಹ ಪ್ರವಾಸೋದ್ಯಮ ಯೋಜನೆಗಳು
ಸಾಹಸ ಪ್ರವಾಸೋದ್ಯಮ ಯೋಜನೆ ಕೃಷಿ ಪ್ರವಾಸೋದ್ಯಮ ಯೋಜನೆ ಅಪಾರ್ಟ್ಮೆಂಟ್ ಹೋಟೆಲ್/ ಸೇವಾ ಅಪಾರ್ಟ್ಮೆಂಟ್ ಅಕ್ವೇರಿಯಂ/ಓಷನೇರಿಯಂ ಬೀಚ್ ಶ್ಯಾಕ್‌ಗಳು ಬೆಡ್ ಮತ್ತು ಉಪಹಾರ ಅಮ್ಯೂಸ್‌ಮೆಂಟ್ ಪಾರ್ಕ್ ಕಾರವಾನ್ ಪಾರ್ಕ್ ಕಾರವಾನ್ ಪ್ರವಾಸೋದ್ಯಮ ಯೋಜನೆ ಸಮಾವೇಶ ಕೇಂದ್ರ ಕ್ರೂಸ್ ಪ್ರವಾಸೋದ್ಯಮ ಯೋಜನೆ ಸಾಂಸ್ಕೃತಿಕ ಕೇಂದ್ರ ಸಾಂಸ್ಕೃತಿಕ ಗ್ರಾಮ / ಪ್ರವಾಸಿ ಗ್ರಾಮ ಪರಿಸರ ಪ್ರವಾಸೋದ್ಯಮ ಯೋಜನೆ ಫಾರಂ ಸ್ಟೇ ಚಲನಚಿತ್ರ ನಗರ ಗಾಲ್ಫ್ ಕೋರ್ಸ್ ಅತಿಥಿಗೃಹ ಪಾರಂಪರಿಕ ಹೋಟೆಲ್ ಪಾರಂಪರಿಕ ಪ್ರವಾಸೋದ್ಯಮ ಯೋಜನೆ ಪಾರಂಪರಿಕ ಪ್ರವಾಸ-ಅಧ್ಯಯನ (ಮಾರ್ಗದರ್ಶಿ ಪ್ರವಾಸ) ಹೋಂ ಸ್ಟೇ ಹೋಟೆಲ್ ಬಜೆಟ್ ಹೋಟೆಲ್-ಪ್ರೀಮಿಯಂ ಹೌಸ್ ಬೋಟ್ ಎಂಐಸಿಇ ಕೇಂದ್ರಗಳು ವಸ್ತು ಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು ಪ್ರವಾಸಿ ಸ್ನೇಹಿ ಸಂಕೀರ್ಣ (ಪ್ರವಾಸಿ ಸೌಲಭ್ಯ ಕೇಂದ್ರ) ರೋಪ್-ವೇ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಟೆಂಟೆಡ್ ಸೌಲಭ್ಯಗಳು ಥೀಮ್ ಪಾರ್ಕ್ ಟೈಮ್ ಶೇರ್ ರೆಸಾರ್ಟ್ ಪ್ರವಾಸಿ ಮಾರ್ಗದರ್ಶಿ ಪ್ರವಾಸೋದ್ಯಮ ಮತ್ತು ಆತೀಥೇಯ ತರಬೇತಿ ಸಂಸ್ಥೆ ಪ್ರವಾಸೋದ್ಯಮ ಸ್ಮಾರ್ಟ್ ಅಪ್ ಪ್ರವಾಸ ಆಯೋಜಕರು ಪ್ರವಾಸಿ ಸಾರಿಗೆ ಆಯೋಜಕರು ಪ್ರವಾಸಿ ವ್ಯಾಖ್ಯಾನ ಕೇಂದ್ರ ಟ್ರಾವೆಲ್ ಏಜೆಂಟ್ ಯಾತ್ರಿನಿವಾಸ ಕ್ಷೇಮ ಕೇಂದ್ರ ರಸ್ತೆ ಬದಿ ಸೌಕರ್ಯಗಳು ಯುವ ಪ್ರವಾಸೋದ್ಯಮ ಚಾರಣ ಪ್ರವಾಸೋದ್ಯಮ
ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಗುರುತಿಸಲಾದ ವಿಷಯಾಧಾರಿತ ಕ್ಷೇತ್ರಗಳು
ಸಾಹಸ ಪ್ರವಾಸೋದ್ಯಮ ಕೃಷಿ ಪ್ರವಾಸೋದ್ಯಮ ಕಾರವಾನ್ ಪ್ರವಾಸೋದ್ಯಮ ಕರಾವಳಿ ಪವಾಸೋದ್ಯಮ ಮತ್ತು ಬೀಚ್ ಪ್ರವಾಸೋದ್ಯಮ ಪಾಕಪದ್ಧತಿ ಪ್ರವಾಸೋದ್ಯಮ ಸಾಂಸ್ಕೃತಿಕ ಪ್ರವಾಸೋದ್ಯಮ ಪಾರಂಪರಿಕ ಪ್ರವಾಸೋದ್ಯಮ ಪರಿಸರ ಪ್ರವಾಸೋದ್ಯಮ (ಪಕೃತಿ ಪ್ರವಾಸೋದ್ಯಮ ಮತ್ತು ವನ್ಯಜೀವಿ ಪ್ರವಾಸೋದ್ಯಮ ಸೇರಿದಂತೆ) ಶೈಕ್ಷಣಿಕ ಪ್ರವಾಸೋದ್ಯಮ ಗಾಲ್ಫ್ ಪ್ರವಾಸೋದ್ಯಮ ಒಳನಾಡಿನ ಜಲ ಪ್ರವಾಸೋದ್ಯಮ ಸಾಹಿತ್ಯ ಪ್ರವಾಸೋದ್ಯಮ ಕಡಲ ಪ್ರವಾಸೋದ್ಯಮ ವೈದ್ಯಕೀಯ ಪ್ರವಾಸೋದ್ಯಮ ಎಂಐಸಿಇ (ಸಭೆ ಉತ್ತೇಜನ ಸಮ್ಮೇಳನ ವಸ್ತುಪ್ರದರ್ಶನ) ಪ್ರವಾಸೋದ್ಯಮ ಮತ್ತು ವ್ಯಾಪಾರ ಪ್ರವಾಸೋದ್ಯಮ ಗ್ರಾಮೀಣ ಪ್ರವಾಸೋದ್ಯಮ ಆಧ್ಯಾತ್ಮಿಕ ಪ್ರವಾಸೋದ್ಯಮ (ಧಾರ್ಮಿಕ ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ದೃಶ್ಯವೀಕ್ಷಣೆಯು ಸೇರಿದಂತೆ) ಕ್ರೀಡಾ ಪ್ರವಾಸೋದ್ಯಮ ಬುಡಕಟ್ಟು ಪ್ರವಾಸೋದ್ಯಮ ವಿವಾಹ ಪ್ರವಾಸೋದ್ಯಮ ವಾರಾಂತ್ಯದ ಪ್ರವಾಸೋದ್ಯಮ ಸ್ವಾಸ್ಥ್ಯ ಪ್ರವಾಸೋದ್ಯಮ ಇತರೆ ನಿಶ್ ಪ್ರವಾಸೋದ್ಯಮ (ಸಣ್ಣ ಗುಂಪುಗಳನ್ನು ಉದ್ದೇಶಿಸಿದ ಉತ್ಪನ್ನ ಆಧರಿತ ಪ್ರವಾಸೋದ್ಯಮ)
‘ಜಿಲ್ಲೆಯ ಪ್ರವಾಸೋದ್ಯಮದ ಚಿತ್ರಣವೇ ಬದಲು‘
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳು ಪ್ರಸ್ತುತ ಇರುವ ಸಮಸ್ಯೆಗಳು ಹಾಗೂ ಅವುಗಳನ್ನು ಬಗೆಹರಿಸುವ ಸವಾಲುಗಳನ್ನು ಆಧರಿಸಿ ಸರ್ಕಾರಕ್ಕೆ ಜಿಲ್ಲಾಡಳಿತದ ವತಿಯಿಂದ ಹಲವಾರು ಶಿಫಾರಸುಗಳನ್ನು ಮಾಡಿದ್ದೆವು. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಬಹುತೇಕ ಶಿಫಾರಸುಗಳನ್ನು ಅಳವಡಿಸಿಕೊಳ್ಳಲಾಗಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳಬೇಖಾದ ಕ್ರಮಗಳನ್ನು ಪ್ರತ್ಯೇಕವಾಗಿ ವಿವರಿಸಲಾಗಿದೆ. ಈ ನೀತಿ ಜಾರಿಯಾದಲ್ಲಿ ಜಿಲ್ಲೆಯ ಪ್ರವಾಸೋದ್ಯಮದ ಚಿತ್ರಣವೇ ಬದಲಾಗಲಿದೆ ಮುಲ್ಲೈ ಮುಗಿಲನ್ ಎಂ.ಪಿ. ಜಿಲ್ಲಾಧಿಕಾರಿ ದಕ್ಷಿಣ ಕನ್ನಡ –0–
‘ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ’
‘ಪ್ರವಾಸೋದ್ಯಮ ಚಟುವಟಿಕೆಯನ್ನು ಯೋಜಿತ ರೀತಿಯಲ್ಲಿ ನಡೆಸಲು ಕರಾವಳಿ ಪ್ರಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ನಿರ್ಮಿಸುವ ಪ್ರಸ್ತಾವ ಹೊಸ ನೀತಿಯಲ್ಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳಿಗೆ ಮಂಡಳಿಯು ಉತ್ತೇಜನಗಳನ್ನು ನೀಡಲಿದೆ. ಕರಾವಳಿಯಲ್ಲಿ ಯೋಜಿತ ಹಾಗೂ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮಹಾಯೋಜನೆಯನ್ನು (ಮಾಸ್ಟರ್ ಪ್ಲ್ಯಾನ್) ಮಂಡಳಿಯು ರೂಪಿಸಲಿದೆ. ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಮುದಾಯದ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಸಮನ್ವಯ ಸಾಧಿಸಲು ನೆರವಾಗಲಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು. ‘ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ ಸ್ಥಳೀಯ ಪಟ್ಟಣ ಮತ್ತು ಗ್ರಾಮಾಂತರ ಯೋಜನೆಯಡಿ ನಗರ ಮಹಾಯೋಜನೆಯಲ್ಲಿ ಮಾರ್ಪಾಡು ಅಥವಾ ಪರಿಷ್ಕರಣೆಗಳ ಅಗತ್ಯ ಎದುರಾದರೆ ಪ್ರವಾಸೋದ್ಯಮ ಇಲಾಖೆಯು ಪಟ್ಟಣ ಮತ್ತು ಗ್ರಾಮಾಂತರ ನಗರ ಯೋಜನೆ ನಿರ್ದೇಶನಾಲಯ ಹಾಗೂ ಇತರ ಸರ್ಕಾರಿ ಇಲಾಖೆಗಳು ಹಾಗೂ ಭಾಗಿದಾರರ ಜೊತೆ ಸಮನ್ವಯ ಸಾಧಿಸಲಿದೆ’ ಎಂದು ತಿಳಿಸಿದರು. –0– ಕರಾವಳಿ ಪ್ರವಾಸೋದ್ಯಮಕ್ಕೆ ಟಿಡಿಆರ್ ಕರಾವಳಿಯ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಜಾಗ ನೀಡುವವರಿಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡುವ ಪ್ರಸ್ತಾವವೂ ನೀತಿಯಲ್ಲಿದೆ. ತೀರ ಆದ್ಯತೆಯುಳ್ಳ ವಲಯಗಳಲ್ಲಿ ಹಾಗೂ ಸಂಯೋಜಿತ ಕರಾವಳಿ ಪ್ರವಾಸಿ ವಲಯಗಳಲ್ಲಿ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಇದರಿಂದ ಉತ್ತೇಜನ ಸಿಗಲಿದೆ. –0– 10 ಮಹಾ ಯೋಜನೆಗಳು ಕರಾವಳಿಯುದ್ದಕ್ಕೂ 10 ಮಹಾ ಪ್ರವಾಸೋದ್ಯಮ ಯೋಜನೆ (ಮೆಗಾ ಪ್ರಾಜೆಕ್ಟ‌್) ಜಾರಿಗೊಳಿಸುವ ಚಿಂತನೆ ಸರ್ಕಾರದ್ದು. ಆತಿಥ್ಯ ಮನರಂಜನೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡು ರಾಜ್ಯದ ಕರಾವಳಿಯನ್ನು ಜಗತ್ತಿನ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿ ರೂಪಿಸುವ ಆಶಯ ಇದರ ಹಿಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೆಲವು ಮೆಗಾ ಪ್ರಾಜೆಕ್ಟ್‌ಗಳು ಆರಂಭವಾಗುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.