ADVERTISEMENT

ಸಂಚಾರ ನಿಯಮ ಉಲ್ಲಂಘನೆಗೆ ಶಿಕ್ಷೆ ಪ್ರಮಾಣ ಹೆಚ್ಚಳ: ಡಿಸಿಪಿ ದಿನೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 29 ಮೇ 2024, 6:39 IST
Last Updated 29 ಮೇ 2024, 6:39 IST
<div class="paragraphs"><p>ಕಾರ್ಯಗಾರದಲ್ಲಿ ಡಿಸಿಪಿ ದಿನೇಶ್ ಕುಮಾರ್ ಬಸ್ ಚಾಲಕರ ಮತ್ತು ನಿರ್ವಾಹಕರ ಕುಶಲೋಪರಿ ನಡೆಸಿದರು </p></div>

ಕಾರ್ಯಗಾರದಲ್ಲಿ ಡಿಸಿಪಿ ದಿನೇಶ್ ಕುಮಾರ್ ಬಸ್ ಚಾಲಕರ ಮತ್ತು ನಿರ್ವಾಹಕರ ಕುಶಲೋಪರಿ ನಡೆಸಿದರು

   

– ಪ್ರಜಾವಾಣಿ ಚಿತ್ರ

ಮಂಗಳೂರು: ‘ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ನಿಯಮಗಳು ಮುಂದಿನ ತಿಂಗಳಿನಿಂದ ಬದಲಾಗಲಿದ್ದು, ಉಲ್ಲಂಘನೆಗೆ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಾಗಲಿದೆ’ ಎಂದು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್ ತಿಳಿಸಿದರು.

ADVERTISEMENT

ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘ, ಕೆನರಾ ಬಸ್‌ ಮಾಲೀಕರ ಸಂಘ ಹಾಗೂ ಸೇಂಟ್ ಅಲೋಶಿಯಸ್  ಪರಿಗಣಿತ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಬಸ್‌ ಚಾಲಕರ ಮತ್ತು ನಿರ್ವಾಹಕರ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಇದೇ ಜೂನ್‌ 1ರಿಂದ ಜಾರಿಗೆ ಬರಲಿದೆ. ನಿರ್ಲಕ್ಷ್ಯದ ಚಾಲನೆಗೆ ಐಪಿಸಿ ಸೆಕ್ಷನ್‌ 279ರ ಬದಲಾಗಿ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್‌ 281 ಅನ್ವಯವಾಗಲಿದೆ. ಐಪಿಸಿ 279ರಡಿ ಹಿಂದೆ 6 ತಿಂಗಳ ಕಾರಾಗೃಹ ವಾಸ ಮತ್ತು ₹  5ಸಾವಿರ ದಂಡಕ್ಕೆ ಅವಕಾಶ ಇತ್ತು. ಬಿಎನ್‌ಎಸ್ ಕಾಯ್ದೆಯ ಸೆಕ್ಷನ್‌ 281 ರ ಅಡಿ ಮೂರು ವರ್ಷ ಕಾರಾಗೃಹ ವಾಸ ಮತ್ತು ₹ 10 ಸಾವಿರ ದಂಡ ವಿಧಿಸಲು ಅವಕಾಶವಿದೆ’ ಎಂದರು.

‘ವಾಹನ ಅಪಘಾತದಿಂದ ಸಾಮಾನ್ಯ ಗಾಯ ಉಂಟಾದರೆ ಐಪಿಸಿ ಸೆಕ್ಷನ್‌ 337ರ ಅಡಿ ಶಿಕ್ಷೆ ವಿಧಿಸಲಾಗುತ್ತಿತ್ತು. ಇನ್ನು ಬಿಎನ್‌ಎಸ್ 125 ಎ, 125 ಬಿ ಅಡಿ ಕ್ರಮವಹಿಸಲಾಗುತ್ತದೆ. ಅಪಘಾತದಿಂದ ವ್ಯಕ್ತಿಯ ಮರಣ ಸಂಭವಿಸಿದರೆ  ಐಪಿಸಿ ಸೆಕ್ಷನ್ 304 ಎ ಬದಲು ಬಿಎನ್‌ಎಸ್‌ ಸೆಕ್ಷನ್‌ 106 ಅನ್ವಯವಾಗಲಿದೆ. ಈ ಹಿಂದೆ ಈ ಅಪರಾಧಕ್ಕೆ ಎರಡು ವರ್ಷ ಜೈಲು ಶಿಕ್ಷೆ ಇತ್ತು. ಅದು 5 ವರ್ಷಗಳಿಗೆ ಏರಿಕೆಯಾಗಿದೆ. ಅಪಘಾತದಿಂದ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸದಿದ್ದರೆ ಬಿಎನ್‌ಎಸ್‌ ಸೆಕ್ಷನ್‌ 134, 134ಎ, 134ಬಿ, ಅಪಘಾತದ ಮಾಹಿತಿ ಪೊಲೀಸ್ ಠಾಣೆಗೆ‌ ನೀಡದೇ ಇದ್ದರೆ ಅಥವಾ ಅಪಘಾತ ಮಾಡಿ ಪರಾರಿಯಾದರೆ  ಬಿಎನ್‌ಎಸ್‌ ಸೆಕ್ಷನ್‌ 106 (2)ರ ಅಡಿ ಪ್ರಕರಣಗಳು ದಾಖಲಾಗಲಿವೆ’ ಎಂದು ಮಾಹಿತಿ ನೀಡಿದರು. 

‘ಮದ್ಯಸೇವಿಸಿ ಚಾಲನೆ, ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ, ಅವಕಾಶ ಇಲ್ಲದ ಕಡೆ ಓವರ್ ಟೇಕ್ ಮಾಡುವುದು, ರೆಡ್ ಲೈಟ್ ನಿಯಮ ಉಲ್ಲಂಘನೆ, ಏಕಮುಖ ಸಂಚಾರ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ  ವಾಹನ ಚಾಲನೆ, ರೇಸಿಂಗ್ ಪ್ರಕರಣಗಳಲ್ಲಿ ತಪ್ಪಿತಸ್ಥರ ಚಾಲನ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳಲಾಗುತ್ತದೆ’ ಎಂದು ತಿಳಿಸಿದರು. 

ಸಾರಿಗೆ ಉಪ ಆಯುಕ್ತ ಶ್ರೀಧರ್ ಕೆ.ಮಲ್ಲಾಡ್, ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಸಚಿವ ಆಲ್ವಿನ್ ಡೇಸಾ, ತರಬೇತುದಾರ ರಾಜೇಂದ್ರ ಭಟ್, ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಜೀವಂದರ್ ಅಧಿಕಾರಿ, 
ಕುಯಿಲಾಡಿ ಸುರೇಶ್ ನಾಯಕ್, ಸಂಚಾರ ಠಾಣೆಗಳ ಇನ್‌ಸ್ಪೆಕ್ಟರ್‌ಗಳಾದ ಆನಂದ್, ಉರಗಪ್ಪ, ದೀಪಕ್, ಕೃಷ್ಣಾನಂದ ನಾಯಕ್ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಅಜೀಜ್‌ ಪರ್ತಿಪಾಡಿ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ವಂದಿಸಿದರು. ಆರ್ .ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.
 

ಬಸ್‌ಗಳ ಒಳಗಡೆ ದೇವರ ಫೋಟೊಗಳ ಬದಲು ಚಾಲಕರ ಕುಟುಂಬದವರ ಫೋಟೊಗಳನ್ನು ಇಟ್ಟರೆ ವಾಹನದ ವೇಗ ತನ್ನಷ್ಟಕ್ಕೆ ಕಡಿಮೆಯಾಗುವುದು
ರಾಜೇಂದ್ರ ಭಟ್ ತರಬೇತುದಾರ
‘ಎಲ್ಲಾ ರಸ್ತೆಯಲ್ಲೂ ಸಿಸಿಟಿವಿ ಕ್ಯಾಮೆರಾ’ ಕ್ರಮೇಣ ನಗರದ ಎಲ್ಲ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುಲಾಗುತ್ತದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಚಲಾಯಿಸುವುದು ಚಾಲನೆ ವೇಳೆ ಮೊಬೈಲ್ ಬಳಕೆ ಸೀಟ್ ಬೆಲ್ಟ್ ಧರಿಸದಿರುವುದನ್ನೂ ಪತ್ತೆಹಚ್ಚಲು ಇದು ನೆರವಾಗುತ್ತದೆ’
ದಿನೇಶ್‌ ಕುಮಾರ್‌, ಡಿಸಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.