ಮಂಗಳೂರು: ಭೂಕುಸಿತದಿಂದ ಬಂದ್ ಆಗಿದ್ದ ಸಕಲೇಶಪುರ– ಸುಬ್ರಹ್ಮಣ್ಯ ಘಾಟಿ ರೈಲ್ವೆ ಮಾರ್ಗದಲ್ಲಿ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಭಾನುವಾರದಿಂದ ರೈಲು ಸಂಚಾರ ಪುನರಾರಂಭವಾಗಿದೆ.
ಭಾರಿ ಮಳೆಯ ನಡುವೆಯೇ ಭೂಕುಸಿತ ಸಂಭವಿಸಿದ್ದರಿಂದ ಜುಲೈ 23ರಿಂದ ಒಮ್ಮೆ ಈ ಮಾರ್ಗದಲ್ಲಿ ರೈಲು ಸಂಚಾರ ಬಂದ್ ಆಗಿತ್ತು. ತೆರವು ಕಾರ್ಯಾಚರಣೆ ಬಳಿಕ ಸಂಚಾರ ಪುನರಾರಂಭವಾಗಿತ್ತು. ನಿರಂತರ ಭೂಕುಸಿತ ಮತ್ತು ಹಳಿಯ ಅಡಿಯಲ್ಲಿನ ಮಣ್ಣು ಕೊಚ್ಚಿಹೋದ ಕಾರಣದಿಂದ ಆಗಸ್ಟ್ 9ರಿಂದ ಮತ್ತೆ ರೈಲು ಸಂಚಾರ ಬಂದ್ ಆಗಿತ್ತು.
ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ಮಣ್ಣು, ಕಲ್ಲಿನ ರಾಶಿಯನ್ನು 15 ದಿನಗಳ ಸತತ ಕಾರ್ಯಾಚರಣೆ ಮೂಲಕ ತೆರವು ಮಾಡಲಾಗಿದೆ. ಹಳಿಯ ಅಡಿಯಲ್ಲಿ ಮಣ್ಣು ಕೊಚ್ಚಿಹೋಗಿದ್ದ ಸ್ಥಳಗಳಲ್ಲೂ ದುರಸ್ತಿ ಮಾಡಲಾಗಿದೆ. 55 ಕಿಲೋ ಮೀಟರ್ ಉದ್ದದ ಮಾರ್ಗ ಈಗ ರೈಲು ಸಂಚಾರಕ್ಕೆ ಸಂಪೂರ್ಣ ಸಿದ್ಧವಾಗಿದೆ. ಭಾನುವಾರದಿಂದಲೇ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಪುನರಾರಂಭ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಹಿರಿಯ ವಿಭಾಗೀಯ ಕಾರ್ಯನಿರ್ವಹಣಾ ವ್ಯವಸ್ಥಾಪಕ ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದುವರಿದ ಕಾರ್ಯಾಚರಣೆ:
ಹಳಿಯ ಮೇಲೆ ಗುಡ್ಡ ಕುಸಿದು ಬಿದ್ದಿರುವುದರಿಂದ ಬಂದ್ ಆಗಿರುವ ಪಡೀಲ್– ಕುಲಶೇಖರ ನಡುವಿನ ರೈಲ್ವೆ ಮಾರ್ಗದಲ್ಲಿ ತೆರವು ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಸೋಮವಾರ ಮಧ್ಯಾಹ್ನದ ಬಳಿಕ ತೆರವು ಕಾರ್ಯಾಚರಣೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಸೋಮವಾರ ಬೆಳಿಗ್ಗೆ ಮಂಗಳೂರಿನಿಂದ ಗೋವಾದ ಮಡಗಾಂವ್‌ಗೆ ಹೋಗಬೇಕಿದ್ದ ಇಂಟರ್ ಸಿಟಿ ಮತ್ತು ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮುಂಬೈ– ಮಂಗಳೂರು ರೈಲುಗಳು ಸುರತ್ಕಲ್ ನಿಲ್ದಾಣದಿಂದ ಸಂಚರಿಸುತ್ತವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.