ADVERTISEMENT

ಮಂಗಳೂರು | ಲಿಂಗತ್ವ ಅಲ್ಪಸಂಖ್ಯಾತರ ವೇಷ ತೊಟ್ಟು ತೊಂದರೆ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:00 IST
Last Updated 19 ಜೂನ್ 2024, 14:00 IST
ಪತ್ರಿಕಾಗೋಷ್ಠಿಯಲ್ಲಿ ನಿಖಿಲಾ ಮಾತನಾಡಿದರು. ಖುಷಿ, ಪ್ರೇಮಾ, ಅರುಂಧತಿ ಹಾಗೂ ಹನಿ ಪಾಲ್ಗೊಂಡಿದ್ದರು
ಪತ್ರಿಕಾಗೋಷ್ಠಿಯಲ್ಲಿ ನಿಖಿಲಾ ಮಾತನಾಡಿದರು. ಖುಷಿ, ಪ್ರೇಮಾ, ಅರುಂಧತಿ ಹಾಗೂ ಹನಿ ಪಾಲ್ಗೊಂಡಿದ್ದರು   

ಮಂಗಳೂರು: ನಗರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ವೇಷ ತೊಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆಕೊಡುವುದು ಹೆಚ್ಚಾಗಿದೆ. ಇದರಿಂದ ನಿಜವಾದ ಲಿಂಗತ್ವ ಅಲ್ಪಸಂಖ್ಯಾತರ ಹೆಸರು ಕೆಡುತ್ತಿದೆ ಮತ್ತು ಅವರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ನವಸಹಜ ಸಮುದಾಯ ಸಂಘಟನೆ ದೂರಿದೆ.

ಉತ್ತರದ ರಾಜ್ಯಗಳಿಂದ ಬಂದವರು ಮತ್ತು ಸ್ಥಳೀಯ ಪುರುಷರು ಹಗಲು ಹೊತ್ತಿನಲ್ಲಿ ಪತ್ನಿ ಮತ್ತು ಮಕ್ಕಳ ಜೊತೆ ಸಂಸಾರ ಮಾಡುತ್ತ ರಾತ್ರಿ ಸೀರೆ ಉಟ್ಟುಕೊಂಡು ರಸ್ತೆಗೆ ಇಳಿಯುತ್ತಾರೆ. ಸ್ಟೇಟ್‌ಬ್ಯಾಂಕ್‌ ಮತ್ತು ಸಿಟಿ ಬಸ್ ನಿಲ್ದಾಣಗಳಲ್ಲಿ ಇಂಥವರ ಪೀಡೆ ಹೆಚ್ಚಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಈಚೆಗೆ ದೂರು ದಾಖಲಾಗಿದೆ ಎಂದು ಸಂಘಟನೆಯ ಅಧ್ಯಕ್ಷೆ ನಿಖಿಲಾ ತಿಳಿಸಿದರು.

ನಿಜವಾದ ಲಿಂಗತ್ವ ಅಲ್ಪಸಂಖ್ಯಾತರ ಬಳಿ ಜಿಲ್ಲಾಧಿಕಾರಿ ನೀಡಿದ ‘ಟ್ರಾನ್ಸ್‌ಜೆಂಡರ್ ಕಾರ್ಡ್‌’ ಇರುತ್ತದೆ. ಅವರು ಸಮಾಜಕ್ಕೆ ತೊಂದರೆ ಮಾಡದೆ ಬದುಕು ನಿರ್ವಹಿಸುತ್ತಿದ್ದಾರೆ. ಅವರಿಂದ ಆಶೀರ್ವಾದ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಸಮಾಜದಲ್ಲಿ ಇದೆ. ಆದರೆ ಈಗ ನಕಲಿಗಳ ಹಾವಳಿಯಿಂದಾಗಿ ಅವರ ಬಗ್ಗೆ ಅಸಹನೆ ಮೂಡಿದ್ದರಿಂದ ಯಾರೂ ಅವರ ಬಳಿ ಸುಳಿಯುತ್ತಿಲ್ಲ. ಇದರಿಂದ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ನಿಖಿಲಾ ಹೇಳಿದರು.

ADVERTISEMENT

‘ಟ್ರಾನ್ಸ್‌ಜೆಂಡರ್ ಕಾರ್ಡ್‌’ ಇಲ್ಲದೇ ಭಿಕ್ಷಾಟನೆ ಮಾಡುವುದು ಕಂಡುಬಂದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು, ಸಮಾಜವೂ ಇಂಥವರ ಬಗ್ಗೆ ಜಾಗರೂಕರಾಗಿಬೇಕು’ ಎಂದು ಅವರು ಹೇಳಿದರು.

ಕಾರ್ಯದರ್ಶಿ ಅರುಂಧತಿ, ಸದಸ್ಯರಾದ ಪ್ರೇಮಾ, ಹನಿ ಹಾಗೂ ಖುಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.