ಮಂಗಳೂರು: ಅಭಿವೃದ್ಧಿಯ ಅವಸರದಲ್ಲಿ ನಗರದ ಹಲವಾರು ಪ್ರದೇಶಗಳಲ್ಲಿ ಮರಗಳು ನೆಲಕ್ಕುರುಳಿತ್ತಿವೆ. ಆದರೆ, ಇವುಗಳ ನಡುವೆ ಒಂದಿಷ್ಟು ಮರಗಳು ಮರುಜನ್ಮ ಪಡೆಯುತ್ತಿವೆ. ಹೆದ್ದಾರಿ ಬದಿಯಲ್ಲಿ ಹನನಕ್ಕೆ ಗುರುತು ಮಾಡಿರುವ ಮರಗಳು ಅಥವಾ ಮನೆಯಂಗಳದಲ್ಲಿರುವ ಮರಗಳ ಸ್ಥಳಾಂತರಕ್ಕೆ ಜೂನ್‌ನಿಂದ ಅಕ್ಟೋಬರ್ ತಿಂಗಳು ಹೆಚ್ಚು ಪ್ರಶಸ್ತಎನ್ನುತ್ತಾರೆ ತಜ್ಞರು.
ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್, ನಗರದಲ್ಲಿ ಹಲವಾರು ಮರಗಳನ್ನು ಸ್ಥಳಾಂತರ ಮಾಡಿದ್ದಾರೆ. ಕಳೆದ ವರ್ಷ ಅವರು ಸ್ಥಳಾಂತರ ಮಾಡಿರುವ ಮರಗಳು, ಈಗ ಹಸಿರೆಲೆಗಳಿಂದ ನಗುತ್ತಿವೆ. ಭೌಗೋಳಿಕ ಪರಿಸರ, ಮಣ್ಣು, ಹವಾಮಾನ ಎಲ್ಲವೂ ಮರಗಳ ಮರುಚಿಗುರಿಗೆ ಕಾರಣವಾಗುತ್ತವೆ ಎಂಬುದು ಅವರ ಅನುಭವ.
‘ಒಮ್ಮೆ ಕಾಮಗಾರಿಯೊಂದಕ್ಕೆ 100 ವರ್ಷ ಹಳೆಯದಾದ ಮರ ಕಡಿಯಲು ಸಿದ್ಧತೆ ನಡೆದಿತ್ತು. ಆ ಮರಕ್ಕೆ ಮರುನೆಲೆ ಕಲ್ಪಿಸಿದರೆ ಬದುಕಿಸಬಹುದೆಂದು ಯೋಚಿಸಿದೆ. ಮರಗಳ ಸ್ಥಳಾಂತರ ಬಗ್ಗೆ ಅಲ್ಪ ಜ್ಞಾನವೂ ಇರಲಿಲ್ಲ. ಒಂದಿಷ್ಟು ವಿಡಿಯೊ, ದಾಖಲೆಗಳಿಗೆ ತಡಕಾಡಿದೆ, ತಜ್ಞರು, ಎಂಜಿನಿಯರ್‌ಗಳ ಬಳಿ ಚರ್ಚಿಸಿದೆ. ಮರವನ್ನು ಬದುಕಿಸಲೇ ಬೇಕೆಂದು ಹಟತೊಟ್ಟು, ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕಿತು’ ಎಂದು ಆರು ವರ್ಷಗಳ ಹಿಂದಿನ ನೆನಪನ್ನು ಮೆಲುಕು ಹಾಕಿದರು.
‘ಅಶ್ವತ್ಥ,ಗೋಳಿ, ಆಲ, ಮಹಾಗನಿ, ಬಸವನ ಪಾದ, ಮಾವು, ಹಲಸು ಹೀಗೆ ಈವರೆಗೆ 50ಕ್ಕೂ ಹೆಚ್ಚು ದೊಡ್ಡ ಮರಗಳನ್ನು ಸ್ಥಳಾಂತರಿಸಿದ್ದೇನೆ. ಹಲವಾರು ಕೈಗಳು ಸೇರಿ ಇದು ಸಾಧ್ಯವಾಗಿದೆ.
ಸ್ಥಳಾಂತರಿಸಿದ ಮರಗಳಲ್ಲಿ ಶೇ 50ರಷ್ಟು ಬದುಕುಳಿದು ನೆರಳು ನೀಡುತ್ತಿವೆ. ಜಾಗ ಬದಲಾಯಿಸಿದ ಹಲಸು, ಮತ್ತು ಮಾವು ವೃಕ್ಷಗಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಬೇಸರಿಸಿದರು.
ಸ್ಥಳಾಂತರಕ್ಕೆ ಜಾಗ ಗುರುತಿಸಿದ ಮೇಲೆ ಅಲ್ಲಿ ಸಿದ್ಧತೆ, ಕೆಲಸಗಾರರು, ರೆಂಬೆ ಕಟಾವಿಗೆ ಗರಗಸ, ಟ್ರೀ ಕ್ಲೈಂಬರ್ಸ್, ಹಿಟಾಚಿ, ಕ್ರೇನ್ ಹೀಗೆ ಒಂದು ವಾರದ ಪೂರ್ವಸಿದ್ಧತೆ ಬೇಕಾಗುತ್ತದೆ. ಮರುನಾಟಿ ಮಾಡಿದ ಸಮೃದ್ಧ ಗೊಬ್ಬರ, ಪೌಷ್ಟಿಕಾಂಶ, ಬಯೊ ಬೂಸ್ಟರ್ ಪೂರೈಸುವುದು ಕೂಡ ಅಷ್ಟೇ ಮಹತ್ವದ್ದು. ಕೆಲ ವರ್ಷಗಳ ಹಿಂದೆ ರಸ್ತೆ ವಿಸ್ತರಣೆಯ ವೇಳೆ ಮಂಗಳೂರಿನಿಂದ 10 ಕಿ.ಮೀ ದೂರದ ಉಳ್ಳಾಲಕ್ಕೆ ಮಹಾಗನಿ ವೃಕ್ಷವನ್ನು ಸಾಗಿಸಿ, ಅಲ್ಲಿ ಸ್ಮಶಾನದಲ್ಲಿ ಅದನ್ನು ಮರುನಾಟಿ ಮಾಡಿದ್ದಾರೆ. ಈಗ ಆ ಮರ ಸಮೃದ್ಧವಾಗಿ ಬೆಳೆದಿದೆ.
ಟ್ರೀ ಕಮಿಟಿ: ಸ್ಮಾರ್ಟ್ ಸಿಟಿ ಕಾಮಗಾರಿಯ ವೇಳೆ ರಸ್ತೆ ವಿಸ್ತರಣೆ ನೆಪದಲ್ಲಿ ಮರಗಳನ್ನು ಕಡಿಯಲು ಸಿದ್ಧತೆ ನಡೆದಾಗ, ಪರಿಸರ ಕಾರ್ಯಕರ್ತ ದಿನೇಶ್ ಹೊಳ್ಳ ಸೇರಿದಂತೆ ಅನೇಕರು, ನಗರದ ಟ್ರೀ ಕಮಿಟಿ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಪರಿಸರ ಪ್ರೇಮಿಗಳ ಕಾಳಜಿಯಿಂದ ಆಗ ರಕ್ಷಣೆಯಾಗಿರುವ ಮರಗಳು ನಗರದ ಜನರಿಗೆ ನೆರಳು ನೀಡುತ್ತಿವೆ. ಮರಗಳಲ್ಲಿ ದೇವರನ್ನು ಕಂಡ ಪರಿಸರ ಕಾರ್ಯಕರ್ತರು, ದೇವರ ನಾಮಫಲಕ, ದೈವಗಳ ಹೆಸರಿನಲ್ಲಿ ಹಲವಾರು ಮರಗಳನ್ನು ಉಳಿಸಿದ್ದಾರೆ.
‘ಪಶ್ಚಿಮಘಟ್ಟಗಳ ಹಸಿರು ಹೊದಿಕೆ’
ರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ (ಎನ್‌ಇಸಿಎಫ್) ಎಂಬ ಪರಿಸರಾಸಕ್ತರ ಸಂಘಟನೆ ಮುಂಗಾರಿನಲ್ಲಿ ಪ್ರತಿ ಭಾನುವಾರ ‘ಪಶ್ಚಿಮಘಟ್ಟಗಳ ಹಸಿರು ಹೊದಿಕೆ’ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ಸರ್ಕಾರಿ ನೌಕರರು, ವಕೀಲರು, ವೈದ್ಯರು, ವಿದ್ಯಾರ್ಥಿಗಳು ಹೀಗೆ ವಿವಿಧ ಕ್ಷೇತ್ರಗಳ ವೃತ್ತಿನಿರತರು ಭಾನುವಾರದ ರಜಾದಿನವನ್ನು ಸಸಿ ನಾಟಿಗೆ ಮೀಸಲಿಡುತ್ತಾರೆ. ಅರಣ್ಯ ಇಲಾಖೆ ಸಹಕಾರದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬೇರೆ ಬೇರೆ ಅರಣ್ಯ ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಜನರನ್ನೊಳಗೊಂಡ ತಂಡ ಬೆಳಗಿನಿಂದ ಮಧ್ಯಾಹ್ನದವರೆಗೆ ಸಸಿಗಳನ್ನು ನಾಟಿ ಮಾಡುತ್ತದೆ.
ಐದು ವರ್ಷಗಳ ಹಿಂದೆ ಕೆಲವೇ ಜನರು ಸೇರಿ ರಸ್ತೆಬದಿಯಲ್ಲಿ ಗಿಡ ನೆಡುತ್ತಿದ್ದ ಸಂಘಟನೆಯಲ್ಲಿ ಈಗ ನೂರಾರು ಜನರು ಸದಸ್ಯರಾಗಿದ್ದಾರೆ. ‘ಕಾಡುಪ್ರಾಣಿಗಳಿಗೆ ಕಾಡಿನಲ್ಲೇ ಹಣ್ಣು–ಹಂಪಲು ಸಿಗಬೇಕು. ಹೀಗಾಗಿ, ನೇರಳೆ, ಮಾವು, ಹಲಸು, ಪುನರ್ಪುಳಿ, ಚೆರಿ ಮೊದಲಾದ ಹಣ್ಣಿನ ಗಿಡಗಳಿಗೆ ಆದ್ಯತೆ ನೀಡಿ ನಾಟಿ ಮಾಡುತ್ತೇವೆ. ಐದು ವರ್ಷಗಳಲ್ಲಿ ಸುಮಾರು 28 ಸಾವಿರ ಗಿಡಗಳನ್ನು ನೆಡಲಾಗಿದೆ. ಭಾನುವಾರದ ಕಾರ್ಯಕ್ರಮಕ್ಕೆ ಬರುವವರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಿದೆ. ನಮ್ಮ ನಿಯಮಗಳಿಗೆ ಬದ್ಧರಾಗಿರುವವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ’ ಎನ್ನುತ್ತಾರೆ ಎನ್‌ಇಸಿಎಫ್ ಕಾರ್ಯದರ್ಶಿ ಶಶಿಧರ ಶೆಟ್ಟಿ.
‘ಸ್ಥಳಾಂತರಕ್ಕೆ ಅಭಿಪ್ರಾಯ ಸಂಗ್ರಹ’
‘ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವೇಳೆ ಮರಗಳನ್ನು ಸ್ಥಳಾಂತರಿಸುವ ಸಾಧ್ಯತೆ ಇದ್ದರೆ ಅವುಗಳನ್ನು ಉಳಿಸುವ ಪ್ರಯತ್ನ ಮಾಡುತ್ತೇವೆ. ಸ್ಥಳಾಂತರಕ್ಕೆ ಮರಗಳ ವಯಸ್ಸು, ತಳಿ ಎಲ್ಲವೂ ಮಹತ್ವದ್ದಾಗಿವೆ. ಇದರ ಮೇಲೆ ಮರದ ಅಳಿವು–ಉಳಿವು ನಿರ್ಧರಿತವಾಗುತ್ತದೆ. 60ರಿಂದ 80 ಸೆಂ.ಮೀ ಸುತ್ತಳತೆಯ ಮರಗಳಿದ್ದರೆ ಅವುಗಳ ಸ್ಥಳಾಂತರ ಸುಲಭವಾಗುತ್ತದೆ. ಹೆದ್ದಾರಿ ವಿಸ್ತರಣೆಗೆ ಗುರುತಿಸಿರುವ ಮರಗಳಲ್ಲಿ ಕೆಲವನ್ನು ಸ್ಥಳಾಂತರಿಸಬಹುದೆಂದು ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆರ್ಥಿಕ ನೆರವಿನಲ್ಲಿ, ಮರಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಇದಕ್ಕೆ ಇಲಾಖೆಯಲ್ಲಿ ಪ್ರತ್ಯೇಕ ಅನುದಾನ ಇರುವುದಿಲ್ಲ’ ಎಂದು ಡಿಸಿಎಫ್ ಡಾ. ದಿನೇಶ್‌ಕುಮಾರ್ ಪ್ರತಿಕ್ರಿಯಿಸಿದರು.
ಕಾಡುಪ್ರಾಣಿಗಳ ಆಹಾರಕ್ಕೆ ಅನುಕೂಲವಾಗುವಂತೆ ಈ ಬಾರಿ ಮಳೆಗಾಲದಲ್ಲಿ ಹಣ್ಣು–ಹಂಪಲುಗಳಿಗೆ ಆದ್ಯತೆ ನೀಡಿ ನಾಟಿ ಮಾಡಲಾಗಿದೆ. ಅರಣ್ಯ ಇಲಾಖೆಯ ಸಸಿ ನೆಡುವ ಕಾರ್ಯ ಶೇ 90ರಷ್ಟು ಪೂರ್ಣಗೊಂಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.