ADVERTISEMENT

ಮಂಗಳೂರು | ಮರದ ದಿಮ್ಮಿ ಅಕ್ರಮ ಸಾಗಾಟ: ಪ್ರಕರಣ ದಾಖಲು

ಸಾಗುವಾನಿ ಸಹಿತ 7 ಮರಗಳಿಗೆ ಕೊಡಲಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 6:19 IST
Last Updated 24 ಅಕ್ಟೋಬರ್ 2024, 6:19 IST
ಕದ್ರಿ ಮಲ್ಲಿಕಟ್ಟೆಯ ಲೋಕೋಪಯೋಗಿ ನಿರೀಕ್ಷಣಾ ಮಂದಿರದ ಆವರಣದಲ್ಲಿರುವ ಸಾಗುವಾನಿ ಮರದ ದಿಮ್ಮಿಗಳು
ಕದ್ರಿ ಮಲ್ಲಿಕಟ್ಟೆಯ ಲೋಕೋಪಯೋಗಿ ನಿರೀಕ್ಷಣಾ ಮಂದಿರದ ಆವರಣದಲ್ಲಿರುವ ಸಾಗುವಾನಿ ಮರದ ದಿಮ್ಮಿಗಳು   

ಮಂಗಳೂರು: ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದ ಬಳಿ ಇದ್ದ  ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡಿದ ಬಗ್ಗೆ ಅರಣ್ಯ ಸಂಚಾರ ದಳದವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರದ ದಿಮ್ಮಿಗಳನ್ನು ಮಂಗಳವಾರ ಸಂಜೆ ಅಕ್ರಮವಾಗಿ ಸಾಗಿಸುತ್ತಿರುವುದನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಎನ್‌ಇಸಿಎಫ್‌) ಹರೀಶ್‌ ಮತ್ತು ಇತರ ಕಾರ್ಯಕರ್ತರು ನೋಡಿದ್ದು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

‘ಪರವಾನಗಿ ಇಲ್ಲದೆಯೇ ಇಲ್ಲಿನ ಮರದ ದಿಮ್ಮಿಗಳನ್ನು ಖಾಸಗಿ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗಿದೆ. ಆ ವಾಹನವನ್ನು ಹಿಂಬಾಲಿಸಿ ಪಂಪ್‌ವೆಲ್ ಬಳಿ ತಡೆಯಲು ಯತ್ನಿಸಿದ್ದೆವು. ನಮ್ಮನ್ನು ನೋಡಿದ ಚಾಲಕ, ಮರದ ದಿಮ್ಮಿಗಳಿದ್ದ ವಾಹನವನ್ನು ಹೊಯ್ಗೆಬಜಾರ್‌ನ ಅರಣ್ಯ ಇಲಾಖೆಯ ಜಾಗದಲ್ಲಿ ನಿಲ್ಲಿಸಿದ’ ಎಂದು ಹರೀಶ್‌ ’ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಎರಡು ಮರಗಳ ರೆಂಬೆಗಳನ್ನು ಕತ್ತರಿಸಲು ಮಾತ್ರ ಅನುಮತಿ ಪಡೆದು ಏಳು ಮರಗಳನ್ನು ಕಡಿದದ್ದು ಏಕೆ.  ಮರದ ದಿಮ್ಮಿಗಳನ್ನು ವಾಹನದಲ್ಲಿ ತುಂಬಿಸಿ ಅದಕ್ಕೆ  ಪ್ಲಾಸ್ಟಿಕ್ ಹೊದಿಸಿ  ರಾತ್ರಿ ವೇಳೆ ಸಾಗಿಸುವ ಅಗತ್ಯವೇನು. ಬೆಲೆ ಬಾಳುವ ಸಾಗುವಾನಿ ಮರಗಳನ್ನು ಅನುಮತಿ ಇಲ್ಲದೆಯೇ ಕಡಿದದ್ದು ಏಕೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು’ ಎಂದು ಅವರು ಒತ್ತಾಯಿಸಿದರು.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ, ‘ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರು, ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೋರಿದ್ದರು. ಆರು ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. ಅನುಮತಿ ನೀಡಲಾದ ಮರ ಬಿಟ್ಟು ಬೇರೆ ಮರಗಳನ್ನು ಕಡಿದಿದ್ದರೆ, ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮರ ಕಡಿದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದರು. 

ಅರಣ್ಯ ಸಂಚಾರ ದಳದ ಸಿಬ್ಬಂದಿ, ನಿರೀಕ್ಷಣಾ ಮಂದಿರದ ಬಳಿಯ ಜಾಗವನ್ನು ಬುಧವಾರ ಪರಿಶೀಲಿಸಿದಾಗ ಅಲ್ಲಿ ಸಾಗುವಾನಿ ಮರಗಳ 24 ದಿಮ್ಮಿಗಳು ಪತ್ತೆಯಾಗಿವೆ. ಎರಡು ಮರಗಳ ರೆಂಬೆಗಳನ್ನು ಕತ್ತರಿಸಲು ಮಾತ್ರ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದರೆ ಕದ್ರಿ ಮಲ್ಲಿಕಟ್ಟೆಯ ನಿರೀಕ್ಷಣಾ ಮಂದಿರದ ಬಳಿ ಇದ್ದ ನಾಲ್ಕು ಸಾಗುವಾನಿ ಮರಗಳನ್ನು ಹಾಗೂ ದೇವದಾರು, ಕಂಬ ಅಶೋಕ ಹಾಗೂ ಉಪ್ಪಳಿಗೆ ಜಾತಿಯ ತಲಾ ಒಂದು ಮರ ಸೇರಿ ಏಳು ಮರಗಳನ್ನು ಕಡಿಯಲಾಗಿದೆ ಎಂದು ಅರಣ್ಯ ಸಂಚಾರ ದಳದ ಹಿರಿಯ ಅಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ವಲಯ ಅರಣ್ಯ ಅಧಿಕಾರಿಯವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.