ADVERTISEMENT

ಇಷ್ಟು ಎತ್ತರಕ್ಕೆ ಬೆಳೆಸಿದ್ದು ರಂಗಭೂಮಿಯೇ: ಬೋಳಾರ್

ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ತುಳು ಚಿತ್ರನಟ ಅರವಿಂದ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 5:13 IST
Last Updated 24 ಅಕ್ಟೋಬರ್ 2024, 5:13 IST

ಮಂಗಳೂರು: ‘ಶಾಲೆಯಲ್ಲಿ ಒಮ್ಮೆ ನಾಟಕದ ಸಿದ್ಧತೆ ನಡೆದಿತ್ತು. ಟೀಚರ್ ಒಬ್ಬರು ಇವನೆಂತ ‘ಮರ್ಲ್‌’ (ಮರುಳ) ಅಂತ ಹೇಳಿದ್ದರು. ಅದು ನನ್ನ ಮನಸ್ಸಿನಲ್ಲಿ ಗುಂಯ್ ಗುಡುತ್ತಿತ್ತು. ಮರುಳನ ಪಾತ್ರ ಮಾಡಿ ಪ್ರಥಮ ಬಹುಮಾನ ಗಿಟ್ಟಿಸಿಕೊಂಡೆ. ನಂತರ ಹಾಸ್ಯ ಪಾತ್ರಗಳೇ ಬದುಕಿಗೆ ಅನ್ನ ನೀಡಿದವು. ಮುಂದಿನ ಜನ್ಮ ಎಂಬುದೊಂದಿದ್ದರೆ, ರಂಗಭೂಮಿಯ ಕಲಾವಿದನಾಗಿಯೇ ಜನನಿಸಬೇಕೆಂಬ ಬಯಕೆಯಿದೆ, ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದು ರಂಗಭೂಮಿಯೇ...‘

ಹೀಗೆಂದು ತಮ್ಮ ನಟನೆಯ ಆರಂಭವನ್ನು ಮೆಲಕು ಹಾಕಿದರು ತುಳು ರಂಗಭೂಮಿಯ ಕಲಾವಿದ, ಚಿತ್ರನಟ ಅರವಿಂದ ಬೋಳಾರ್.

ಮಂಗಳೂರು ಪ್ರೆಸ್‌ಕ್ಲಬ್‌ ಬುಧವಾರ ಆಯೋಜಿಸಿದ್ದ ‘ಪ್ರೆಸ್‌ಕ್ಲಬ್‌ ಗೌರವ ಅತಿಥಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕಿತ್ತು ತಿನ್ನುವ ಬಡತನದ ಕಾರಣಕ್ಕೆ ನಾನು ಶಾಲೆ ಕಲಿತಿದ್ದು ಕಡಿಮೆ. ಕಲಿತವರ ಜೊತೆ ಮಾತ್ರ ಶಾರದೆ ಇರುವುದಿಲ್ಲ, ಕಲಾವಿದರ ಜೊತೆಯೂ ಇರುತ್ತಾಳೆ ಎಂಬುದು ನನ್ನ ನಂಬಿಕೆ’ ಎಂದರು.

ADVERTISEMENT

ಕಲಾವಿದರಿಗೆ ಸಮಯ ಪ್ರಜ್ಞೆ ಮುಖ್ಯ. ಕಲಾವಿದನ ಮಾತನ್ನು ಸಮಾಜ ಸ್ವೀಕರಿಸುವ ಜೊತೆಗೆ ಗೌರವಾದರಗಳಿಂದ ಕಾಣುತ್ತದೆ ಎಂದಾದರೆ, ಆತನಿಗೆ ಇನ್ನೇಣು ಭಾಗ್ಯ ಬೇಕು. ನಾನು ಸಮಯಕ್ಕೆ ಯಾವತ್ತೂ ಮಹತ್ವ ನೀಡುತ್ತೇನೆ. ಕಲಾರಂಗದಲ್ಲಿ ಗರ್ಭಗುಡಿಯ ಮೂರ್ತಿಯಾಗಿ ಇರಲು ನನಗೆ ಇಷ್ಟವೇ ವಿನಾ ಉತ್ಸವ ಮೂರ್ತಿ ಅಲ್ಲ. ಜನರ ಪ್ರೋತ್ಸಾಹದಿಂದ ಕಲಾವಿದನಾಗಿ ಹಾಸ್ಯ ಪಾತ್ರವನ್ನು ಸ್ವೀಕರಿಸಿದ್ದೇನೆ. ಕರಾವಳಿಯ ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯವನ್ನು ಮಾತ್ರ ಪ್ರೇಕ್ಷಕರು ಒಪ್ಪುತ್ತಾರೆ. ಹಾಸ್ಯದಲ್ಲಿ ಪ್ರತಿಬಾರಿ ಹೊಸತನ ಕಾಯ್ದುಕೊಳ್ಳುವುದು ಕಲಾವಿದನಿಗೆ ಸವಾಲು. ಇದನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿಯಿದೆ ಎಂದು ಹೇಳಿದರು.

‘ರಂಗ ನಿರ್ದೇಶಕ ದೇವದಾಸ್ ಕಾಪಿಕಾಡ್ ಗರಡಿಯಲ್ಲಿ ರಂಗಭೂಮಿಯಲ್ಲಿ ಪಳಗಿ, ನಂತರ ಯಕ್ಷಗಾನ, ಸಿನಿಮಾ ಕ್ಷೇತ್ರಗಳಲ್ಲೂ ಅಭಿನಯಿಸಿದ್ದೇನೆ. 95ಕ್ಕೂ ಹೆಚ್ಚು ಸಿನಿಮಾಗಳು ತೆರೆ ಕಂಡಿವೆ. ನಾನು ಅವಕಾಶ ಕೇಳಿಕೊಂಡು ಹೋಗಿದ್ದಕ್ಕಿಂತ, ಅವಕಾಶಗಳು ನನಗೆ ಒದಗಿಬಂದಿವೆ. ಪ್ರಸ್ತುತ ನಾಲ್ಕೈದು ಸಿನಿಮಾಗಳ ನಟನೆಗೆ ಆಫರ್ ಬಂದಿವೆ. ಪೋಷಕ ಕಲಾವಿದರನ್ನು ಬ್ಯಾನರ್‌ಗೆ ಮಾತ್ರ ಬಳಕೆ ಮಾಡುತ್ತಾರೆ ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಹೀಗಾಗಿ, ಕಥೆಯ ಆಶಯ ಅರಿತು ನಟನೆಗೆ ಒಪ್ಪಿಕೊಳ್ಳುವ ಕ್ರಮ ರೂಢಿಸಿಕೊಂಡಿದ್ದೇನೆ’ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌., ಪ್ರೆಸ್‌ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಇದ್ದರು.

ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ.ಹರೀಶ್‌ ರೈ ಸ್ವಾಗತಿಸಿದರು. ಹರೀಶ್‌ ಮೋಟುಕಾನ ನಿರೂಪಿಸಿದರು. ಮೊಹಮ್ಮದ್ ಆರೀಫ್ ವಂದಿಸಿದರು. ಛಾಯಾಗ್ರಾಹಕ ಸತೀಶ್‌ ಇರಾ ಕಾರ್ಯಕ್ರಮ ಸಂಯೋಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.