ADVERTISEMENT

ತುಳುವನ್ನು ರಾಜ್ಯ ಭಾಷೆಯಾಗಿ ಗುರುತಿಸಲಿ: ಡಿ.ವಿ. ಸದಾನಂದ ಗೌಡ

ಉಪನ್ಯಾಸ ಮಾಲಿಕೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 31 ಮೇ 2021, 2:45 IST
Last Updated 31 ಮೇ 2021, 2:45 IST
ತುಳು ಉಪನ್ಯಾಸ ಮಾಲಿಕೆಯ ವರ್ಷಾಚರಣೆಯ ಪ್ರಯುಕ್ತ ಶನಿವಾರ ಆನ್‌ಲೈನ್‌ ವೇದಿಕೆಯಲ್ಲಿ ಕೇಂದ್ರ ಸಚಿವ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿದರು.
ತುಳು ಉಪನ್ಯಾಸ ಮಾಲಿಕೆಯ ವರ್ಷಾಚರಣೆಯ ಪ್ರಯುಕ್ತ ಶನಿವಾರ ಆನ್‌ಲೈನ್‌ ವೇದಿಕೆಯಲ್ಲಿ ಕೇಂದ್ರ ಸಚಿವ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿದರು.   

ಮುಡಿಪು (ಮಂಗಳಗಂಗೋತ್ರಿ): ‘ಜಾಗತೀಕರಣದ ಪ್ರಭಾವದಿಂದ ತುಳು ಸೇರಿದಂತೆ ಹಲವು ಭಾಷೆಗಳು ನಲುಗುತ್ತಿವೆ. ಭಾಷೆಯ ಅಳಿವು– ಉಳಿವು ಬಳಸುವವರ ಕೈಯಲ್ಲಿದೆ. ತುಳು ಭಾಷೆಯ ಮೂಲಸತ್ವವನ್ನು ನಾವೆಲ್ಲರೂ ಸೇರಿ ಉಳಿಸಬೇಕಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜು, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ತುಳು ಉಪನ್ಯಾಸ ಮಾಲಿಕೆಯ ವರ್ಷಾಚರಣೆಯ ಪ್ರಯುಕ್ತ ಶನಿವಾರ ಆನ್‌ಲೈನ್‌ ವೇದಿಕೆಯಲ್ಲಿ ನಡೆದ 52ನೇ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಅವರು ಮಾತನಾಡಿದರು.

‘ತುಳು ಭಾಷೆಯು ನಮ್ಮ ಸಂಸ್ಕೃತಿ, ಆಚಾರ- ವಿಚಾರ, ಜೀವನ ಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ಭಾಷೆಯೊಂದರ ಅವನತಿ ದೇಶದ ಸಂಸ್ಕೃತಿಯ ಅವನತಿಯಿದ್ದಂತೆ. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ‘ಕನ್ನಡ ಮಾಧ್ಯಮಕ್ಕೆ ತುಳುವರ ಕೊಡುಗೆ ಅಪಾರ. ಭಾಷಾ ಶುದ್ಧತೆ, ತುಡಿತ, ಪ್ರಾಮಾಣಿಕತೆ, ಶ್ರಮ, ತಾಳ್ಮೆ, ಕಷ್ಟವನ್ನು ಎದುರಿಸಿ ಗೆದ್ದು ಬರುವ ಗುಣವನ್ನು ನಮ್ಮ ಮಣ್ಣು ಕಲಿಸಿದೆ. ಆದರೆ, ಈಗ ಮಾಧ್ಯಮದಲ್ಲಿ ರಾಜಕೀಯ ಪ್ರವೇಶದಿಂದ ತುಳು ಪ್ರತಿಭೆಗಳು ಅವಕಾಶ ಕಳೆದುಕೊಳ್ಳುತ್ತಿರುವುದು ಬೇಸರದ ವಿಚಾರ’ ಎಂದರು.

ವಕೀಲ ಎಂ.ಕೆ. ಸುವೃತ ಕುಮಾರ್‌ ಮಾತನಾಡಿ, ‘ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರದೆಯೇ ನಮ್ಮ ನಿತ್ಯ ಜೀವನದಲ್ಲಿ ತುಳುವನ್ನು ಅಳವಡಿಸಿಕೊಳ್ಳುವ ಮೂಲಕ ಭಾಷೆಯ ಬೆಳವಣಿಗೆಗೆ ಶ್ರಮಿಸೋಣ’ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿ, ‘ಕಠಿಣ ಪರಿಸ್ಥಿತಿಯಲ್ಲೂ ತುಳು ಉಪನ್ಯಾಸ ಸರಣಿ ಒಂದು ವರ್ಷ ಪೂರೈಸಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯ. ಜ್ಞಾನ ಪ್ರಸರಣವನ್ನೇ ಉದ್ದೇಶವಾಗಿ ಹೊಂದಿರುವ ನಾವು ಇಂತಹ ಕಾರ್ಯಕ್ರಮಕ್ಕೆ ಸದಾ ಪ್ರೋತ್ಸಾ ಹಿಸುತ್ತೇವೆ’ ಎಂಬ ಭರವಸೆ ನೀಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಕಿಶೋರ್‌ ಕುಮಾರ್‌ ಸಿ.ಕೆ, ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ತುಳು ಪೀಠ ಮತ್ತು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ಮಾಧವ ಎಂ.ಕೆ ಭಾಗವಹಿಸಿದ್ದರು. ವಿಜಯಲಕ್ಷ್ಮೀ ಕಟೀಲ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.