ಬಜಪೆ: ನಿಲ್ಲಿಸಿದ್ದ ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಡುಪೆರಾರ ಗ್ರಾಮದ ಈಶ್ವರಕಟ್ಟೆ ಕೊಲವೇಲಾ ರಾಘವೇಂದ್ರ ಭಜನಾ ಮಂದಿರದ ಸಮೀಪದ ನಿವಾಸಿ ಪ್ರತಾಪ್ (20), ಕಂದಾವರ ಗ್ರಾಮದ ಚರ್ಚ್ ರೋಡ್ ನಿವಾಸಿ ಅನಿಲ್ (23) ಎಂದು ಗುರುತಿಸಲಾಗಿದೆ.
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು, ಕೈಕಂಬ ಮತ್ತು ಗುರುಪುರ ಪರಿಸರಗಳಲ್ಲಿ ನಿಲ್ಲಿಸುತ್ತಿದ್ದ ಟಿಪ್ಪರ್ ಲಾರಿ, ಜೆಸಿಬಿ ಮತ್ತು ಇತರ ವಾಹನಗಳಿಂದ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆ ನಡೆಸಿದ ಬಜಪೆ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್ ಹಾಗೂ ಅವರ ತಂಡ ಮಂಗಳವಾರ ಮಂಗಳೂರು ತಾಲ್ಲೂಕಿನ ಬಜಪೆಯ ಒಡ್ಡಿದ ಕಲ ಎಂಬಲ್ಲಿ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಕಾರಿನಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅವರಿಂದ ಸುಮಾರು ₹ 4 ಲಕ್ಷ ಮೌಲ್ಯದ ಒಂದು ಕಾರು, ₹1.50 ಲಕ್ಷ ಮೌಲ್ಯದ 17 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ.ಎ
ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ಕುಮಾರೇಶನ್, ಲತಾ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ, ಎಎಸ್ಐ ರಾಮ ಪೂಜಾರಿ, ಸುಜನ್, ರಶೀದ್ ಶೇಖ್, ಬಸವರಾಜ್ ಪಾಟೀಲ್, ಜಗದೀಶ್, ಸಂತೋಷ್, ಪ್ರಕಾಶ, ಕೆಂಚಪ್ಪ, ಕೆಂಚನಗೌಡ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.