ADVERTISEMENT

ಮಂಗಳೂರು | ಅಮೆಜಾನ್‌ ಸಂಸ್ಥೆಗೆ ₹11.45 ಲಕ್ಷ ವಂಚನೆ: ಇಬ್ಬರ ಬಂಧನ

ದುಬಾರಿ ಸಾಮಾಗ್ರಿ ಖರೀದಿಸಿ, ಸ್ಟಿಕ್ಕರ್ ಅದಲು ಬದಲು ಮಾಡಿ ವಂಚಿಸುತ್ತಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 23:45 IST
Last Updated 3 ನವೆಂಬರ್ 2024, 23:45 IST
ಆರೋಪಿ ರಾಜ್‌ಕುಮಾರ್‌ ಮೀನ ಹಾಗೂ ಸುಭಾಷ್ ಗುರ್ಜರ್‌ ಹಾಗೂ ಅವರಿಂದ ವಶಪಡಿಸಿಕೊಂಡ ನಗದು
ಆರೋಪಿ ರಾಜ್‌ಕುಮಾರ್‌ ಮೀನ ಹಾಗೂ ಸುಭಾಷ್ ಗುರ್ಜರ್‌ ಹಾಗೂ ಅವರಿಂದ ವಶಪಡಿಸಿಕೊಂಡ ನಗದು   

ಮಂಗಳೂರು: ನಕಲಿ ಗುರುತು ತೋರಿಸಿ ಇ–ವಾಣಿಜ್ಯ ಸಂಸ್ಥೆ ಅಮೆಜಾನ್‌ನಿಂದ ₹11.45 ಲಕ್ಷ ಮೌಲ್ಯದ ಸಾಮಗ್ರಿ ತರಿಸಿಕೊಂಡು, ಅದನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ ಸಂಬಂಧ ಇಲ್ಲಿನ ಉರ್ವ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

‘ರಾಜಸ್ಥಾನದ ರಾಜ್‌ಕುಮಾರ್‌ ಮೀನ (23) ಹಾಗೂ ಸುಭಾಷ್‌ ಗುರ್ಜರ್‌ (27) ಬಂಧಿತರು. ಅವರನ್ನು ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳು ವಂಚನೆ ಮೂಲಕ ಪಡೆದ ಸಾಮಗ್ರಿ ಮಾರಾಟದಿಂದ ಗಳಿಸಿದ್ದ ₹11.45 ಲಕ್ಷವನ್ನೂ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್‌ ಅನುಪಮ್ ಅರ್ಗವಾಲ್‌ ತಿಳಿಸಿದ್ದಾರೆ. 

‘ಸುಳ್ಳು ವಿವರ ನೀಡಿದ ಆರೋಪಿಗಳು ‘ಅಮಿತ್‌’ ಎಂಬ ಹೆಸರಿನಲ್ಲಿ, ದುಬಾರಿ ದರದ ಎರಡು ಸೋನಿ ಕ್ಯಾಮೆರಾ ಹಾಗೂ ಇತರ 10 ಸಮಾಗ್ರಿಯನ್ನು ಇಲ್ಲಿನ ಬಿಜೈನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿಯ ವಿಳಾಸಕ್ಕೆ ಸೆ.21ರಂದು ತರಿಸಿಕೊಂಡಿದ್ದರು. ರಾಜ್‌ ಕುಮಾರ್‌ ಮೀನ ಆ ಸಾಮಗ್ರಿಗಳನ್ನು ಪಡೆದುಕೊಂಡು ವಿತರಕ ಸಿಬ್ಬಂದಿಗೆ ಒಟಿಪಿ ನೀಡಿದ್ದ. ಈ ವೇಳೆ ಸುಭಾಷ್ ಗುರ್ಜರ್‌ ಡೆಲಿವರಿ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು ಸೋನಿ ಕ್ಯಾಮೆರಾವಿದ್ದ ಬಾಕ್ಸ್‌ನ ಸ್ಟಿಕ್ಕರ್‌ಗಳನ್ನು ತೆಗೆದು ಬೇರೆ ಸಾಮಗ್ರಿಗಳಿದ್ದ ಬಾಕ್ಸ್‌ಗೆ ಅಂಟಿಸಿದ್ದ.  ರಾಜಕುಮಾರ್‌ ತಪ್ಪು ಒಟಿಪಿ ನೀಡಿ ಸಾಮಗ್ರಿ ವಿತರಣೆ ಪ್ರಕ್ರಿಯೆ ತಕ್ಷಣ ಪೂರ್ಣಗೊಳ್ಳದಂತೆ ಕಾಲಹರಣ ಮಾಡಿದ್ದ. ನಂತರ ಸಾಮಗ್ರಿಗಳನ್ನು ಮರುದಿನ ಸ್ವೀಕರಿಸುವುದಾಗಿ ಡೆಲಿವರಿ ಸಿಬ್ಬಂದಿಗೆ ತಿಳಿಸಿದ್ದ. ನಂತರ ಸೋನಿ ಕ್ಯಾಮೆರಾದ ಆರ್ಡರ್‌  ರದ್ದುಪಡಿಸಿ ಬೇರೆ ಸಾಮಗ್ರಿ ಮಾತ್ರ ಪಡೆದುಕೊಂಡಿದ್ದ. ಅದರ ಮೂಲಕ ಸೋನಿ ಕ್ಯಾಮೆರಾ ಅವರ ಕೈಸೇರಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಅಮೆಜಾನ್‌ನ ವಿತರಣಾ ಪಾಲುದಾರರಾದ ಮಹೀಂದ್ರ ಲಾಜಿಸ್ಟಿಕ್ಸ್‌ನವರು ಬಾಕ್ಸ್‌ಗಳನ್ನು ಪರಿಶೀಲಿಸಿದಾಗ ಸ್ಟಿಕ್ಕರ್‌ಗಳಲ್ಲಿ ವ್ಯತ್ಯಾಸ ಇರುವುದು ಗೊತ್ತಾಗಿತ್ತು. ಅಮೆಜಾನ್ ಸಂಸ್ಥೆಗೆ ಈ ವಿಚಾರ ತಿಳಿಸಿದ್ದರು’ ಎಂದು ತಿಳಿಸಿದ್ದಾರೆ.

‘ಆರೋಪಿಗಳು ಇದೇ ಮಾದರಿಯಲ್ಲಿ ಬೇರೆ ರಾಜ್ಯಗಳಲ್ಲೂ ವಂಚನೆ ಮಾಡಿರುವ ಸಾಧ್ಯತೆ ಇದೆ. ಅವರು ಅಮೆಜಾನ್‌ನಲ್ಲಿ ಸಾಮಗ್ರಿ ಖರೀದಿ ವಿಧಾನವನ್ನು ಆಧರಿಸಿ ಅವರ ಮೇಲೆ ಉರ್ವ ಠಾಣೆಯ ಪೊಲೀಸರು ನಿಗಾ ಇಟ್ಟಿದ್ದರು. ಆರೋಪಿಗಳು ರಾಜ್ಯವನ್ನು ತೊರೆಯಲು ಸಿದ್ಧತೆ ನಡೆಸಿದಾಗ ಬಂಧಿಸಿದ್ದಾರೆ’ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು. 

ರಾಜ್‌ಕುಮಾರ್‌ ಮೀನಾನನ್ನು ತಮಿಳುನಾಡಿನ ಸೇಲಂ ಪೊಲೀಸರು ಬಂಧಿಸಿದ್ದರು. ಅವರಿಂದ ಆತನನ್ನು ವಶಕ್ಕೆ ಪಡೆಯಲಾಗಿದೆ. ಆತನು ವಿಚಾರಣೆ ವೇಳೆ ನೀಡಿದ ಮಾಹಿತಿ ಆಧಾರದಲ್ಲಿ ಸುಭಾಷ್‌ನನ್ನು ಉರ್ವ ಠಾಣೆಯ ಇನ್‌ಸ್ಪೆಕ್ಟರ್ ಭಾರತಿ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಆರೋಪಿಗಳು ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿ ವಂಚನೆ ನಡೆಸಿದ್ದಾರೆ.

ಇದೇ ಮಾದರಿಯ ವಂಚನೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಅಸ್ಸಾಂನ ಜಬಲ್‌ಪುರಿಯಲ್ಲಿ (₹ 20.09 ಲಕ್ಷ ಮೌಲ್ಯದ ಕ್ಯಾಮೆರಾ ಖರೀದಿ), ಒಡಿಶಾದ ಭರತಪುರದಲ್ಲಿ (₹ 20.28 ಲಕ್ಷ ಮೌಲ್ಯದ ಕ್ಯಾಮೆರಾ ಖರೀದಿ), ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ (₹ 10.96 ಲಕ್ಷ ಮೌಲ್ಯದ ಕ್ಯಾಮೆರಾ ಖರೀದಿ), ರಾಜಸ್ಥಾನದ ಮೌಂಟ್ ಅಬುವಿನಲ್ಲಿ (₹ 3.71 ಲಕ್ಷ ಮೌಲ್ಯ), ತೆಲಂಗಾಣದ ಮೈಲಾರದೇವಪಳ್ಳಿಯಲ್ಲಿ (₹14 ಲಕ್ಷ ಮೌಲ್ಯದ ವಂಚನೆ), ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ (₹ 10.35 ಲಕ್ಷ), ತಮಿಳುನಾಡಿನ  ಸೇಲಂನ  ಪಲ್ಲಪಟ್ಟಿಯಲ್ಲಿ (₹ 14.34 ಲಕ್ಷ ಮೌಲ್ಯ ಕ್ಯಾಮೆರಾ ಖರೀದಿ), ಕೇರಳದ ಮರಡ್‌ನಲ್ಲಿ (14.50 ಲಕ್ಷ ಮೌಲ್ಯ), ಲಖನೌನ ಹಜರತ್‌ ನಗರದಲ್ಲಿ  (₹ 6.01 ಲಕ್ಷ ಮೌಲ್ಯದ  ಐಫೋನ್‌ ಖರೀದಿಸಿ ವಂಚನೆ, ಇನ್ನೆರಡು ಸೆಟ್‌ಗಳನ್ನು ಇನ್ನಷ್ಟೇ ಪಡೆಯಬೇಕಿತ್ತು), ತಿರುಚಿಯ ವಿಮಾನನಿಲ್ದಾಣ ಠಾಣೆಯಲ್ಲಿ (₹ 15 ಲಕ್ಷ ಮೌಲ್ಯದ ವಂಚನೆ) ಎಫ್‌ಐಆರ್‌ ದಾಖಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 346 (ಮಾಹಿತಿ ತಿರುಚುವುದು), ಸೆಕ್ಷನ್ 350 (ಸರಕುಗಳ ಮೇಲೆ ನಕಲಿ ಗುರುತು ಅಳವಡಿಸುವುದು), ಸೆಕ್ಷನ್‌ 323 (ವಂಚಿಸುವ ಉದ್ದೇಶದಿಂದ ಸಾಮಗ್ರಿಯನ್ನು ಪಡೆದುಕೊಳ್ಳುವುದು ಅಥವಾ ಮರೆಮಾಚುವುದು), ಸೆಕ್ಷನ್‌ 319 ( ಬೇರೆಯವರ ಸೋಗಿನಲ್ಲಿ ವಂಚನೆ) ಪ್ರಕರಣ ದಾಖಲಾಗಿದೆ.

ಖರೀದಿಸಿದ ಸಾಮಗ್ರಿಯ ಬಾಕ್ಸ್‌ನ ಸ್ಟಿಕ್ಕರ್‌ ಬದಲಿಸುತ್ತಿದ್ದ ಆರೋಪಿಗಳು ಆರೋಪಿಗಳ ವಿರುದ್ಧ 11 ರಾಜ್ಯಗಳಲ್ಲಿ ವಂಚನೆ ಪ್ರಕರಣ ದಾಖಲು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.