ADVERTISEMENT

ಮಂಗಳೂರು | ಜೈಲಿನಲ್ಲಿ ಇಬ್ಬರು ಕೈದಿಗಳ ಮೇಲೆ ಗುಂಪು ಹಲ್ಲೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:00 IST
Last Updated 2 ಜುಲೈ 2024, 5:00 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಮಂಗಳೂರು: ಕೈದಿಗಳ ಗುಂಪೊಂದು ಈಚೆಗೆ ಜೈಲು ಸೇರಿದ ಇಬ್ಬರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಮಂಗಳೂರು ಜೈಲಿನಲ್ಲಿ ಸೋಮವಾರ ಸಂಜೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. 

20 ದಿನಗಳ ಹಿಂದೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲು ಸೇರಿದ ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ್ ಸಮೀರ್ ಮತ್ತು ಮುಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್ ಅವರ ಮೇಲೆ ಟೋಪಿ ನೌಫಲ್‌ ತಂಡದ 10 ಮಂದಿ ಸಂಜೆ 6.30ರ ವೇಳೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಉಳ್ಳಾಲ ನಿವಾಸಿ ಮುಹಮ್ಮದ್ ಸಮೀರ್ ಮತ್ತು ಬೋಳಿಯಾರ್‌ನ ಮುಹಮ್ಮದ್ ಮನ್ಸೂರ್ ಅವರನ್ನು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. ನೌಫಲ್ ಮತ್ತು ಇತರರು ಬೇರೆ ಬೇರೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಅಡುಗೆ ಮನೆಯಲ್ಲಿ ಬಳಸುವ ಚೂಪಾದ ಸಾಮಗ್ರಿಗಳಿಂದ ಹಲ್ಲೆ ನಡೆಸಲಾಗಿದ್ದು ಮುಹಮ್ಮದ್ ಸಮೀರ್ ಮತ್ತು ಮುಹಮ್ಮದ್ ಮನ್ಸೂರ್ ಅವರ ತಲೆ, ಭುಜ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ. ಅವರನ್ನು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಎರಡೂ ಗುಂಪಿನವರು ಅನೇಕ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಮೊದಲೇ ವೈರತ್ವ ಇತ್ತು. ಇವರೆಲ್ಲರೂ ರೌಡಿ ಶೀಟರ್‌ಗಳಾಗಿದ್ದಾರೆ. ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಜೈಲು ಅಧಿಕಾರಿಗಳ ದೂರಿನ ಪ್ರಕಾರ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದವರಲ್ಲಿ ಮುಹಮ್ಮದ್ ರಿಫತ್‌, ಮುಹಮ್ಮದ್ ರಿಜ್ವಾನ್‌, ಇಬ್ರಾಹಿಂ ಕಲ್ಲೇಲ್‌, ಉಮರ್ ಫಾರೂಕ್ ಇರ್ಫಾನ್‌, ಅಲ್ತಾಫ್‌, ನೌಫಲ್ ಮತ್ತು ಜೈನುದ್ದೀನ್ ಪ್ರಮುಖರು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.