ಕಾಸರಗೋಡು: ಕುವೈತ್‌ನಲ್ಲಿ 6 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ತಗುಲಿ ಸಂಭವಿಸಿದ ಘಟನೆಯಲ್ಲಿ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ.
ಚೆರ್ಕಳ ಕುಂಟಡ್ಕ ನಿವಾಸಿ ರಂಜಿತ್ (34) ಮತ್ತು ತ್ರಿಕರಿಪುರ ಎಳಂಬಚ್ಚಿ ನಿವಾಸಿ ಕೇಳು ಪೊನ್ಮಲೇರಿ (55) ಮೃತಪಟ್ಟವರು. ಈ ಸಂಬಂಧ ಜಿಲ್ಲಾ ಪೊಲೀಸ್ ಮಾಹಿತಿ ಕೇಂದ್ರಕ್ಕೆ ಮಾಹಿತಿ ಬಂದಿದೆ.
ರಂಜಿತ್ ಅವರು ಕುಂಟಡ್ಕದ ರವೀಂದ್ರನ್-ರಮಣಿ ದಂಪತಿ ಪುತ್ರ. 10 ವರ್ಷಗಳಿಂದ ಕುವೈತ್‌ನಲ್ಲಿ ನೌಕರಿಯಲ್ಲಿದ್ದರು. ಕಳೆದ ವರ್ಷ ಅವರ ಮನೆಯ ಪ್ರವೇಶೋತ್ಸವ ನಡೆದಿತ್ತು. ಕೇಳು ಅವರೂ 10 ವರ್ಷಗಳಿಂದ ಕುವೈತ್‌ನ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಗಂಭೀರ ಗಾಯ: ಅಗ್ನಿ ದುರಂತದ ವೇಳೆ ರಕ್ಷಣೆಗಾಗಿ ಕಟ್ಟದಿಂದ ಕೆಳಕ್ಕೆ ಧುಮುಕಿದ ಜಿಲ್ಲೆಯ ನಿವಾಸಿಯೊಬ್ಬರಿಗೆ ಸೊಂಟದಿಂದ ಕೆಳಗಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ತ್ರಿಕರಿಪುರದ ಒಳವರ ನಿವಾಸಿ ಟಿ.ವಿ.ನಲಿನಾಕ್ಷನ್ (58) ಗಾಯಗೊಂಡವರು. ಅವರು ಬೆಂಕಿ ತಗುಲಿದ ಮೂರನೇ ಅಂತಸ್ತಿನ ಕಿಟಿಕಿಯೊಂದರಿಂದ ಧುಮುಕಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಗೆ ಬೆಂಕಿ
ಕಾಸರಗೋಡು: ನೆಲ್ಲಿಕುಂಜೆಯ ಎನ್.ಎಂ.ಮುಹಮ್ಮದಾಲಿ ಎಂಬುವರ ಮನೆಗೆ ಗುರುವಾರ ಬೆಂಕಿತಗುಲಿ ಹಾನಿಯಾಗಿದೆ. ಅಡುಗೆ ಕೋಣೆ ಸುಟ್ಟುಹೋಗಿದೆ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿನಂದಿಸಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ ಇದಕ್ಕೆ ಕಾರಣ ಎಂದು ಶಂಕಿಸಲಾಗಿದೆ. ₹ 1 ಲಕ್ಷ ನಷ್ಟ ಅಂದಾಜಿಸಲಾಗಿದೆ.
ಬಾವಿಯಲ್ಲಿ ಶವ ಪತ್ತೆ
ಕಾಸರಗೋಡು: ಕಾಲಿಚ್ಚಾಪೊದಿ ಕಣ್ಣಿಪ್ಪಾರ ನಿವಾಸಿ ಬಾಲಕೃಷ್ಣನ್ ಎಂಬುವರ ಪತ್ನಿ ಸೀನಾ (48) ಅವರ ಮೃತದೇಹ ಮನೆ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ.
ಮನೆಗೆ ಕನ್ನ
ಕಾಸರಗೋಡು: ಕಾಞಂಗಾಡು ಟಿ.ಬಿ.ರಸ್ತೆಯ ಪಿ.ವಿ.ರಾಬಿಯಾ ಎಂಬುವರ ಮನೆಗೆ ನುಗ್ಗಿದ ಕಳ್ಳರು 12 ಪವನ್ ಬಂಗಾರದ ಆಭರಣ, ₹ 9 ಸಾವಿರ ಕಳವು ಮಾಡಿದ್ದಾರೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೆ.
ಮದ್ಯ ಸಹಿತ ಬಂಧನ
ಕಾಸರಗೋಡು: ಚಿಗುರುಪಾದೆಯಲ್ಲಿ 7 ಲೀ. ಮದ್ಯ ಸಹಿತ ಮೀಯಪದವು ಕೊಳಬಯಲು ನಿವಾಸಿ ಜಾನ್ ಡಿಸೋಜಾ (46) ಎಂಬಾತನನ್ನು ಕುಂಬಳೆ ಅಬಕಾರಿ ದಳ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.