ಉಳ್ಳಾಲ (ದಕ್ಷಿಣ ಕನ್ನಡ) : ಸೋಮೇಶ್ವರ ಕಡಲ ಕಿನಾರೆಗೆ ವಿಹಾರಕ್ಕೆ ತೆರಳಿದ್ದ ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಬ್ಬರು ಶನಿವಾರ ಸಮುದ್ರಪಾಲಾಗಿದ್ದಾರೆ. ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಅವರಿಗಾಗಿ ಸ್ಥಳೀಯ ಈಜುಗಾರರು ಹುಡುಕಾಟ ಆರಂಭಿಸಿದ್ದಾರೆ.
ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಅವರ ಮಗ ಯೆಶ್ವಿತ್ (18) ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಅವರ ಮಗ ಯುವರಾಜ್ (18) ಸಮುದ್ರಪಾಲಾದವರು. ಅವರು ಸೋಮೇಶ್ವರ ಪರಿಜ್ಞಾನ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಶನಿವಾರ ಮಧ್ಯಾಹ್ನ ತರಗತಿಗಳು ಮುಗಿದ ಬಳಿಕ ಅವರು ವಿಹಾರಕ್ಕೆ ಸೋಮೇಶ್ವರ ಕಿನಾರೆಗೆ ತೆರಳಿದ್ದರು. ಒಬ್ಬ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಸಿಲುಕಿದ್ದ. ಆತನನ್ನು ರಕ್ಷಿಸಲು ಇನ್ನೊಬ್ಬ ವಿದ್ಯಾರ್ಥಿ ಧಾವಿಸಿದ್ದ. ಬಳಿಕ ಇಬ್ಬರೂ ನಾಪತ್ತೆಯಾಗಿದ್ದಾರೆ’ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಮುನ್ನೆಚ್ಚರಿಕೆ ಪಾಲಿಸದ ಪ್ರವಾಸಿಗರು:
‘ಸೋಮೇಶ್ವರದ ಬಳಿ ಈಗಾಗಲೇ ಹಲವು ಮಂದಿ ಸಮುದ್ರಪಾಲಾಗಿದ್ದಾರೆ. ಈ ಕುರಿತು ಇಲ್ಲಿನ ಬಂಡೆಗಳಲ್ಲಿ ಹಾಗೂ ನಾಮಫಲಕಗಳಲ್ಲಿ ಮುನ್ನೆಚ್ಚರಿಕೆ ಸಂದೇಶ ನೀಡಲಾಗಿದೆ. ಆದರೂ ಇಲ್ಲಿಗೆ ವಿಹಾರಕ್ಕೆಂದು ಬರುವವರು ಇದನ್ನು ಲೆಕ್ಕಿಸದೇ ನೀರಿಗೆ ಇಳಿಯುತ್ತಾರೆ’ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಠಾಣಾಧಿಕಾರಿ ಎಚ್.ಎನ್ ಬಾಲಕೃಷ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.