ಮಂಗಳೂರು: ‘ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸದಸ್ಯ ಸ್ಥಾನದ ಭರ್ತಿಗಾಗಿ ನಡೆಯುವ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಉಡುಪಿ ಜಿಲ್ಲೆಯ ಮುಖಂಡರಿಗೆ ಆದ್ಯತೆ ನೀಡಲಿದ್ದೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಿಂದ ಪಕ್ಷದಿಂದ ಈಗಾಗಲೇ ಇಬ್ಬರು ವಿಧಾನ ಪರಿಷತ್ ಸದಸ್ಯರಾಗಿದ್ದೇವೆ. ಹಾಗಾಗಿ ಈ ಉಪಚುನಾವಣೆಯಲ್ಲಿ ಉಡುಪಿ ಜಿಲ್ಲೆಯವರಿಗೆ ಅವಕಾಶ ನೀಡಬೇಕೆಂಬ ಅಭಿಪ್ರಾಯ ಪಕ್ಷದಲ್ಲಿದೆ. ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಭುಜಂಗ ಶೆಟ್ಟಿ, ಕಾರ್ಕಳದ ಡಿ.ಆರ್. ರಾಜು ಸೇರಿದಂತೆ ಇನ್ನು ಮೂವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ’ ಎಂದರು.
‘ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಶನಿವಾರ ನಗರಕ್ಕೆ ಬರಲಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದೇವೆ. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈಗಾಗಲೇ ತಂತ್ರಗಾರಿಕೆ ರೂಪಿಸಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಖಾಸಗಿ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾದ ಮಾತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗಿಲ್ಲ. ಅವರ ರಾಜೀನಾಮೆ ಕೇಳುವ ಯಾವ ನೈತಿಕತೆಯೂ ಬಿಜೆಪಿ ಅತವಾ ಜೆಡಿಎಸ್‌ನವರಿಗಿಲ್ಲ. ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರ ಜತೆಗಿದೆ’ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ‘ಸಿದ್ದರಾಮಯ್ಯ ಅವರ 45ವರ್ಷಗಳ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಯಾವುದೇ ಕಪ್ಪು ಚುಕ್ಕೆ ಇಲ್ಲ. ಬಿಜೆಪಿ–ಜೆಡಿಎಸ್ ದೋಸ್ತಿಗಳು ಷಡ್ಯಂತ್ರ ಮಾಡಿ ಅವರ ಹೆಸರಿಗೆ ಕಳಂಕ ತರಲು ಯತ್ನಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟದ್ದು ಮೂವರು ಖಾಸಗಿ ವ್ಯಕ್ತಿಗಳೇ ಹೊರತು ಯಾವುದೇ ತನಿಖಾ ಸಂಸ್ಥೆಯಲ್ಲ. ಇಂತಹವರ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳುವುದು ಎಷ್ಟು ಸರಿ? ಬಿಜೆಪಿಯಲ್ಲಿ ಬಹುತೇಕ ನಾಯಕರು ಒಂದಲ್ಲ ಒಂದು ಪ್ರಕರಣದ ಆರೋಪಿಗಳು’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪದ್ಮರಾಜ್ ಆರ್., ಶಾಲೆಟ್ ಪಿಂಟೊ, ಮನೋರಾಜ್, ರಾಜೀವ್
ಜೋಕಿಮ್ ಡಿಸೋಜ, ಸುಹಾನ್ ಆಳ್ವ ಸುಭಾಶ್ಚಂದ್ರ ಶೆಟ್ಟಿ ಕೊಲ್ನಾಡು, ಲಾರೆನ್ಸ್ ಡಿಸೋಜ, ವಿಕಾಸ್ ಶೆಟ್ಟಿ
ಟಿ.ಕೆ.ಸುಧೀರ್, ಶುಭೋದಯ ಆಳ್ವ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.