ADVERTISEMENT

ಉಜಿರೆ: ಪ್ರಯಾಸದ ಹೆದ್ದಾರಿ ಪ್ರಯಾಣ

ಆರ್.ಎನ್.ಪೂವಣಿ
Published 10 ಆಗಸ್ಟ್ 2024, 6:53 IST
Last Updated 10 ಆಗಸ್ಟ್ 2024, 6:53 IST
<div class="paragraphs"><p>ಉಜಿರೆ ಬಳಿ ಕಾಶಿಬೆಟ್ಟು ಎಂಬಲ್ಲಿ ಉಂಟಾಗಿದ್ದ ವಾಹನ ದಟ್ಟಣೆ</p></div>

ಉಜಿರೆ ಬಳಿ ಕಾಶಿಬೆಟ್ಟು ಎಂಬಲ್ಲಿ ಉಂಟಾಗಿದ್ದ ವಾಹನ ದಟ್ಟಣೆ

   

-ಪ್ರಜಾವಾಣಿ ಚಿತ್ರ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಯಾತ್ರಾ ಸ್ಥಳಗಳಾದ ಧರ್ಮಸ್ಥಳ, ಸೌತಡ್ಕ, ಸುರ್ಯ ಕ್ಷೇತ್ರ, ಚಾರಣ ಕೇಂದ್ರ ಜಮಲಾಬಾದ್ (ಗಡಾಯಿಕಲ್ಲು), ಜಲಪಾತಗಳ ವೀಕ್ಷಣೆಗಾಗಿ ಬರುವ ಪ್ರವಾಸಿಗರು ಹೆದ್ದಾರಿ ಅವ್ಯವಸ್ಥೆಯಿಂದಾಗಿ ಪ್ರಯಾಸ ಪಡುವಂತಾಗಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ 73ರ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ನಡೆಯುತ್ತಿರುವ ವಿಸ್ತರಣೆ ಕಾಮಗಾರಿಗಾಗಿ ರಸ್ತೆಯನ್ನು ಅಲ್ಲಲ್ಲಿ ಅಗೆಯಲಾಗಿದೆ. ಇತ್ತೀಚೆಗೆ ಸುರಿದಿರುವ ಮಳೆಯಿಂದಾಗಿ ಹೆದ್ದಾರಿ ಕೆಸರು ಗದ್ದೆಯಂತಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಸುಮಾರು ₹ 714 ಕೋಟಿ ಅನುದಾನದಲ್ಲಿ ಪುಂಜಾಲಕಟ್ಟೆ– ಚಾರ್ಮಾಡಿವರೆಗಿನ ದ್ವಿಪಥ ರಸ್ತೆ ಕಾಮಗಾರಿಗಾಗಿ ಇದ್ದ ರಸ್ತೆ ತೆರವುಗೊಳಿಸಿ, ಮಣ್ಣಿನ ರಸ್ತೆ ನಿರ್ಮಿಸಿದ್ದಾರೆ. ಭಾರಿ ಮಳೆಯಿಂದಾಗಿ ಈ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಮಳೆ ನೀರು ಹರಿದು ಹೋಗಿ ರಸ್ತೆ, ಚರಂಡಿಗೆ ವ್ಯತ್ಯಾಸ ಇಲ್ಲದಂಥ ಸ್ಥಿತಿ ಉಂಟಾಗಿದೆ.

ಉಜಿರೆ ಪೇಟೆಯ ಶಾಲೆಯಿಂದ ಬೆನಕ ಆಸ್ಪತ್ರೆವರೆಗೆ ರಸ್ತೆಯಲ್ಲೇ ಮಳೆ ನೀರು ಹರಿದು ವಾಹನ ದಟ್ಟಣೆ ಉಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡ ಘಟನೆಗಳೂ ಇವೆ.

ಗುರುವಾಯನಕೆರೆ, ಉಜಿರೆ ಬಳಿಯ ಕಾಶಿಬೆಟ್ಟು, ಟಿ.ಬಿ.ಕ್ರಾಸ್, ಅನುಗ್ರಹ ಶಾಲೆಯ ವಠಾರ, ಮುಂಡಾಜೆ ಗ್ರಾಮದ ಸೀಟು, ಸೋಮಂತಡ್ಕದಲ್ಲಿ ಸಂಚಾರ ಮಾಡಲು ಪರದಾಡುವಂತಾಗಿದೆ. ಸೀಟು ಬಳಿ ಕಾಮಗಾರಿ ವಹಿಸಿಕೊಂಡವರ ಬೃಹತ್ ಯಂತ್ರಗಳು ಕೆಸರಿನಲ್ಲಿ ಮುಳುಗಿ ತುಕ್ಕು ಹಿಡಿಯುತ್ತಿವೆ. ಗುತ್ತಿಗೆದಾರ, ನೌಕರರೂ ಕಾಣಿಸುತ್ತಿಲ್ಲ.

ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಬಂದು ನಿರ್ದೇಶನ ನೀಡಿದರೂ ಫಲ ನೀಡಿಲ್ಲ. ರಸ್ತೆಯಲ್ಲಿ ನಡೆದಾಡಲೂ ಆಗದಂಥ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.