ADVERTISEMENT

ಇನೋಳಿ: ಸರ್ಕಾರಿ ಶಾಲೆ ರಸ್ತೆಗೆ ಸ್ಥಳೀಯರ ಸ್ಥಳ ದಾನ

65 ವರ್ಷ ಹಳೆಯ ಸರ್ಕಾರಿ ಶಾಲೆ: ಸಮರ್ಪಕ ರಸ್ತೆ ಇಲ್ಲದೆ ಸಂಕಷ್ಟ

ಸತೀಶ್ ಕೊಣಾಜೆ
Published 11 ಸೆಪ್ಟೆಂಬರ್ 2024, 6:07 IST
Last Updated 11 ಸೆಪ್ಟೆಂಬರ್ 2024, 6:07 IST
ಸ್ಥಳೀಯರ ಸ್ಥಳದಾನದ ಮೂಲಕ ಶಾಲೆಗೆ ರಸ್ತೆ ನಿರ್ಮಾಣವಾಗುತ್ತಿರುವುದು
ಸ್ಥಳೀಯರ ಸ್ಥಳದಾನದ ಮೂಲಕ ಶಾಲೆಗೆ ರಸ್ತೆ ನಿರ್ಮಾಣವಾಗುತ್ತಿರುವುದು   

ಮುಡಿಪು: ಉಳ್ಳಾಲ ತಾಲ್ಲೂಕಿನ ಪಾವೂರು ಗ್ರಾಮದ‌ ಇನೋಳಿ ಪ್ರದೇಶದಲ್ಲಿ ಸುಮಾರು 60 ವರ್ಷಗಳ ಹಿಂದೆ ನಿರ್ಮಾಣಗೊಂಡ ಸರ್ಕಾರಿ ಶಾಲೆಗೆ ಸಂಪರ್ಕ ರಸ್ತೆಯ ಕನಸು ಈಡೇರುವ ಹಂತಕ್ಕೆ ಬಂದಿದೆ.

ಸಮರ್ಪಕ ರಸ್ತೆ ಇಲ್ಲದೆ ಇಲ್ಲಿನ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದರಿಂದ ಶಾಲೆ ಸಮೀಪದ ಹಲವು ಮನೆಯವರು ಜತೆಸೇರಿ ಶಾಲೆಯ‌ ರಸ್ತೆಗಾಗಿ ಸ್ಥಳದಾನ ಮಾಡಿದ್ದಾರೆ.

ಇನೋಳಿಯಲ್ಲಿರುವ ದ.ಕ.ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ 1959ರಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಪೈಕಿ ಹಲವರು ನ್ಯಾಯಾಧೀಶರಾಗಿ, ಅಧ್ಯಾಪಕರಾಗಿ, ವಕೀಲರೂ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.‌ ಆದರೆ‌, ಶಾಲೆಯ‌ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ.

ADVERTISEMENT

ನೇತ್ರಾವತಿ ನದಿಗೆ ಸಮೀಪದಲ್ಲೇ ಇರುವ ಈ ಪ್ರದೇಶದಲ್ಲಿ ಈ ಶಾಲೆ ಇದ್ದು, ಬಸ್ ಇಳಿದು ಶಾಲೆಗೆ ಸುಮಾರು 500 ಮೀಟರ್‌ನಷ್ಟು ದುರ್ಗಮ ಹಾದಿಯಲ್ಲಿ ನಡೆದುಕೊಂಡೇ ಹೋಗಬೇಕು. ಈ ದಾರಿಯನ್ನೇ ವಾಹನ ಓಡಾಡುವಂಥ ರಸ್ತೆಯನ್ನಾಗಿ ಮಾಡುವ ಪ್ರಯತ್ನಕ್ಕೂ ಮುಂದಾಗಿದ್ದರು. ಆದರೆ, ಅದು ಯಶಸ್ವಿಯಾಗಿರಲಿಲ್ಲ.‌ ಇತ್ತೀಚೆಗೆ ಇದೇ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆದಿದ್ದು. ಇಲ್ಲಿಗೆ ಬಂದಿದ್ದ ವಿದ್ಯಾರ್ಥಿ, ಶಿಕ್ಷಕರೂ ಸಮರ್ಪಕ ರಸ್ತೆ ಇಲ್ಲದೆ ತೊಂದರೆ ಎದುರಿಸಿದ್ದರು. ಕಾರ್ಯಕ್ರಮದ ಆಯೋಜಕರೂ ಚಪ್ಪರ, ತಗಡು ಶೀಟು,‌ ಶಾಮಿಯಾನ ಹಾಗೂ ಇತರ ಪರಿಕರಗಳನ್ನು ಹೊತ್ತುಕೊಂಡೇ ಶಾಲೆಗೆ ತಲುಪಿಸಿ ವ್ಯವಸ್ಥೆ ಮಾಡಿದ್ದರು.

ಬಳಿಕ ಶಾಲಾ ಆಡಳಿತ ಮಂಡಳಿ, ಸ್ಥಳೀಯರು ಸೇರಿ ವಾಹನ ಬರುವಷ್ಟು ರಸ್ತೆ ನಿರ್ಮಾಣವಾಗಬೇಕೆಂಬ ಕನಸಿನೊಂದಿಗೆ ಶಾಲೆಯ ಬಲಭಾಗದಲ್ಲಿರುವ ಮನೆಯವರಲ್ಲಿ ವಿನಂತಿಸಿದಾಗ ಏಳೆಂಟು ಮನೆಯವರು ಶಾಲೆಯ ರಸ್ತೆ ನಿರ್ಮಾಣಕ್ಕೆ ಸ್ಥಳದಾನ ಮಾಡಲು ಮುಂದಾಗಿದ್ದಾರೆ. ಇದೀಗ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಗೊಂಡಿದೆ.

ಶಾಲೆಯ ಬಳಿಯ ನಿವಾಸಿಗಳಾದ ಶಬೀರ್, ಲೀಲಾವತಿ, ಅಬೂಬಕ್ಕರ್, ಇಬ್ರಾಹಿಂ ನಡುಗುಡ್ಡೆ, ಇಕ್ಬಾಲ್, ಸಲೀಂ, ಝೋಹರಾ, ಮಹಮ್ಮದ್ ಅವರು ಸ್ಥಳ ನೀಡಿ ರಸ್ತೆ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಐದು, 10 ಸೆಂಟ್ಸ್ ಜಾಗ ಇರುವವರೇ ತಮ್ಮ ಸ್ವಲ್ಪ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಟ್ಟಿದ್ದಾರೆ.

ಸಮರ್ಪಕ ರಸ್ತೆ ಇಲ್ಲದೆ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದರು‌.‌ ಇದೀಗ ಸ್ಥಳೀಯರು ಜಾಗ ನೀಡಿರುವುದರಿಂದ ರಸ್ತೆ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಪಾವೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಹಮ್ಮದ್ ಅನ್ಸಾರ್ ಇನೋಳಿ ತಿಳಿಸಿದರು.

ಪಂಚಾಯಿತಿ ಅನುದಾನದಿಂದ ಸುಮಾರು ₹ 7ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಲಿದೆ. ಗ್ರಾಮಸ್ಥರ ಬೇಡಿಕೆ ಈಡೇರಿದೆ.
ಎಂದು ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಜೀದ್ ಸಾತ್ಕೋ ತಿಳಿಸಿದರು.

ರಸ್ತೆ ನಿರ್ಮಾಣಗೊಳ್ಳಲಿರುವ ಪ್ರದೆಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.