ADVERTISEMENT

ಉಳ್ಳಾಲ‌ | ಈಜುಕೊಳದಲ್ಲಿ ಯುವತಿಯರ ಸಾವು: ರೆಸಾರ್ಟ್‌ ಮಾಲೀಕ ಸೇರಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 4:30 IST
Last Updated 18 ನವೆಂಬರ್ 2024, 4:30 IST
<div class="paragraphs"><p>ರೆಸಾರ್ಟ್‌ ಈಜುಕೊಳದಲ್ಲಿ ಯುವತಿಯರ ಸಾವು </p></div>

ರೆಸಾರ್ಟ್‌ ಈಜುಕೊಳದಲ್ಲಿ ಯುವತಿಯರ ಸಾವು

   

ಉಳ್ಳಾಲ: ಇಲ್ಲಿನ ವಾಸ್ಕೊ ರೆಸಾರ್ಟ್‌ನ ಈಜುಕೊಳದಲ್ಲಿ ಮೂವರು ಯುವತಿಯರು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೆಸಾರ್ಟ್ ಮಾಲೀಕ ಮನೋಹರ್ ವಿ.ಪುತ್ರನ್ ಮತ್ತು ವ್ಯವಸ್ಥಾಪಕ ಭರತ್ ಬಂಧನಕ್ಕೆ ಒಳಗಾದವರು.

ADVERTISEMENT

ನಗರ ಹೊರವಲಯ ಸೋಮೇಶ್ವರದ ಪೆರಿಬೈಲ್ ಬೆಟ್ಟಪ್ಪಾಡಿ ಕ್ರಾಸ್ ನಲ್ಲಿರುವ ರೆಸಾರ್ಟ್ ನಲ್ಲಿ ತಂಗಿದ್ದ ಮೈಸೂರು ವಿಜಯನಗರದ ನವೀನ್ ಕುಮಾರ್ ಅವರ ಪುತ್ರಿ ಕೀರ್ತನಾ ಎನ್ (21), ಕುರುಬರ ಹಳ್ಳಿ 4ನೇ ಕ್ರಾಸ್ ನಿವಾಸಿ ಮಲ್ಲೇಶ್ ಅವರ ಪುತ್ರಿ ನಿಶಿತಾ ಎಂ.ಡಿ (21) ಹಾಗೂ ರಾಮಾನುಜ ರಸ್ತೆ 11ನೇ ಕ್ರಾಸ್ ನಿವಾಸಿ ಎಂ.ಎನ್ ಶ್ರೀನಿವಾಸ್ ಅವರ ಪುತ್ರಿ ಪಾರ್ವತಿ ಎಸ್ (20) ಭಾನುವಾರ ಬೆಳಿಗ್ಗೆ ಸಾವಿಗೀಡಾಗಿದ್ದರು.

ಮೈಸೂರಿನ ಜಿಎಸ್ ಎಸ್ ಎಸ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಅ್ಯಂಡ್‌ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿನಿಯರಾಗಿದ್ದ ಇವರು ಕಳೆದ ಶನಿವಾರ ಇಲ್ಲಿ ಕೊಠಡಿ ಬಾಡಿಗೆಗೆ ಪಡೆದುಕೊಂಡಿದ್ದರು. ಭಾನುವಾರ ಬೆಳಿಗ್ಗೆ ವಿಡಿಯೊ ಮಾಡುವುದಕ್ಕಾಗಿ ಮೊಬೈಲ್ ಫೋನ್‌ನಲ್ಲಿ ಕ್ಯಾಮೆರಾ ಆನ್ ಮಾಡಿಟ್ಟು ನೀರಿಗಿಳಿದ್ದರು. 'ಆಳವಿರುವ ಕಡೆ ತೆರಳಿದ ವೇಳೆ ಈಜು ಬಾರದೆ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದೆ' ಎಂದು ಪೊಲೀಸರು ತಿಳಿಸಿದ್ದರು.

ಸಿಬ್ಬಂದಿಯನ್ನು ನಿಯೋಜಿಸದೆ ಮತ್ತು ನೀರಿನ ಆಳದ ಬಗ್ಗೆ ಮಾಹಿತಿ ಫಲಕ ಅಳವಡಿಸದೆ ಸುರಕ್ಷತಾ ಲೋಪ ಎಸಗಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ತಿಳಿಸಿದ್ದರು. ಮಾಲೀಕ ಮತ್ತು ವ್ಯವಸ್ಥಾಪಕರನ್ನು ಭಾನುವಾರ ಸಂಜೆ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಸೋಮವಾರ ಬೆಳಿಗ್ಗೆ ಬಂಧಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ. ಯುವತಿಯರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.