ಉಳ್ಳಾಲ: ಉಳ್ಳಾಲ: ಉಳ್ಳಾಲದ ಕೋಟೆಪುರ- ಉಳಿಯ ಸಮುದ್ರ ಹಾಗೂ ನದಿ ತೀರದ ಪ್ರದೇಶದಲ್ಲಿದ್ದ 2 ಎಕರೆ ದ್ವೀಪವು ಅಕ್ರಮ ಮರಳುಗಾರಿಕೆಯಿಂದ ಕಣ್ಮರೆ ಯಾಗಿದೆ. ಸದ್ಯ ಎರಡು ತೆಂಗಿನ ಮರ ಗಳು ಮಾತ್ರ ಅಲ್ಲಿ ಉಳಿದಿದೆ. ತಡರಾತ್ರಿ ವ್ಯಾಪಕವಾಗಿ ನಡೆಯುತ್ತಿರುವ ಮರಳುಗಾರಿಕೆಯಿಂದಾಗಿ ನದಿ ತೀರದ ಮನೆಗಳು ಅಪಾಯವನ್ನು ಎದುರಿಸುತ್ತಿವೆ.
ಕೋಟೆಪುರ ಫಿಶ್ ಮಿಲ್ ಸಮುದ್ರ ಮತ್ತು ಉಳ್ಳಾಲ ಉಳಿಯ ನದಿ ಮಧ್ಯಭಾಗದಿಂದ ಎರಡು ಎಕರೆ ವಿಸ್ತೀರ್ಣದ ಈ ದ್ವೀಪ ಕಾನಿಸುತ್ತಿತ್ತು. ಸ್ಥಳೀಯ ಮೀನುಗಾರರು ಮೀನುಗಾರಿಕೆ ಸಂದರ್ಭ ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ, ಇತ್ತೀಚಿನ ಕೆಲ ದಿನಗಳಿಂದ ದ್ವೀಪವೇ ಕಾಣಿಸುತ್ತಿಲ್ಲ.
ಅವ್ಯಾಹತ ಮರಳುಗಾರಿಕೆ ಯಿಂದಾಗಿ ಈ ಸ್ಥಿತಿ ಉಂಟಾಗಿದ್ದು, ಸಮುದ್ರದ ಅಲೆಗಳು ನೇರವಾಗಿ ಇದೀಗ ಉಳಿಯ ನದಿ ತೀರದ ಪ್ರದೇಶಗಳಿಗೆ ಹೊಡೆಯುತ್ತಿವೆ. ನದಿ ತೀರದ ತಡೆಗೋಡೆಗಳು ನೀರಿನ ಹೊಡೆತಕ್ಕೆ ಕೊರೆಯಲು ಆರಂಭವಾಗಿದೆ. ಉಳಿಯ ನಿವಾಸಿಗಳ ಕೃಷಿ, 20ಕ್ಕೂ ಅಧಿಕ ತೆಂಗಿನ ಮರಗಳು ನದಿಪಾಲಾಗಿವೆ. ತಡರಾತ್ರಿ ಸುಮಾರು 20 ದೋಣಿಗಳ ಮೂಲಕ ಮರಳುಗಾರಿಕೆ ನಡೆಸಿ, ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್ ಲಾರಿ, ತ್ರಿಚಕ್ರ ಟೆಂಪೊಗಳು, ಪಿಕಪ್ ಮೂಲಕ ಮರಳು ಸಾಗಾಟ ನಡೆಸಿ ಕೋಟೆಪುರ ಭಾಗದಲ್ಲಿ ದಾಸ್ತಾನು ಮಾಡ ಲಾಗುತ್ತಿದೆ. ರಾತ್ರೋರಾತ್ರಿ ಅಲ್ಲಿಂದ ಇತರ ಪ್ರದೇಶಗಳಿಗೆ ಮರಳು ಸಾಗಿಸಲಾಗುತ್ತಿದೆ.
ನೇತ್ರಾವತಿ ನದಿಯ ಒಡಲಲ್ಲಿ ಮರಳುಗಾರಿಕೆ ನಡೆಸುತ್ತಿರುವವರ ವಿರುದ್ಧ ನೇತ್ರಾವತಿ ನದಿ ಸಂರಕ್ಷಣಾ ಸಮಿತಿಯು ಸ್ಥಳೀಯಾಡಳಿತ, ಭೂ ಮತ್ತು ಗಣಿ ಇಲಾಖೆ, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದೆ. ಸ್ಥಳೀಯ ಪೊಲೀಸ್ ಠಾಣೆ ಮತ್ತು ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅವರು ಸ್ಪಂದಿಸಿಲ್ಲ. ಇದರಿಂದಾಗಿ ರೋಸಿ ಹೋದ ಸ್ಥಳೀಯರು ಮರಳುಗಾರಿಕೆಯಲ್ಲಿ ಭಾಗಿಯಾಗಿರುವ ಹೊರ ರಾಜ್ಯದ ಕಾರ್ಮಿಕರಿಗೆ ತಡೆಯೊಡ್ಡಿ ಅವರು ಮರಳುಗಾರಿಕೆಗೆ ಬಳಸುತ್ತಿದ್ದ ಪರಿಕರಗಳನ್ನು ತಮ್ಮ ವಶಕ್ಕೆ ಪಡೆದು ಕೊಂಡಿದ್ದರು. ಆದರೆ, ಸ್ಥಳೀಯ ಮರಳು ಗಾರಿಕೆ ನಡೆಸುತ್ತಿರುವ ಮಾಲೀಕರೇ ಮೀನುಗಾರರ ಮನೆಯತ್ತ ಬಂದು ಮರಳುಗಾರಿಕೆಯನ್ನು ನಿಲ್ಲಿಸುವ ವಿಶ್ವಾಸ ನೀಡಿ ತಮ್ಮ ಸ್ವತ್ತುಗಳನ್ನು ಕೊಂಡೊಯ್ದಿದ್ದರು. ಆದರೆ, ಇದೀಗ ಮತ್ತೆ ಮರಳುಗಾರಿಕೆ ಆರಂಭಗೊಂಡಿದೆ.
ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಒಂದೆರಡು ದಿನ ಸ್ಥಗಿತಗೊಳಿಸುತ್ತಾರೆ. ಬಳಿಕ ಮತ್ತೆ ಆರಂಭವಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದರೆ ಉಳಿಯ ಪ್ರದೇಶವೂ ನೀರಿನ ಹೊಡೆತಕ್ಕೆ ಸಿಲುಕಲಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.
ಸಂಕಷ್ಟದಲ್ಲಿ ಕುಟುಂಬಗಳು
ಉಳಿಯ ನಿವಾಸಿಗಳಲ್ಲಿ ಬಹುತೇಕರು ಮೀನುಗಾರಿಕೆ ನಡೆಸುತ್ತಿದ್ದು, ನಿರಂತರವಾಗಿ ಮರಳುಗಾರಿಕೆ ನಡೆಯುವುದರಿಂದ ಮೀನುಗಾರಿಕೆಗೆ ತೊಂದರೆ ಆಗಿದೆ. ಮೀನುಗಾರಿಕೆಯನ್ನೇ ಅವಲಂಬಿಸಿದ್ದ ಕುಟುಂಬಗಳು ಇದೀಗ ಆದಾಯವಿಲ್ಲದೆ ಕಂಗೆಟ್ಟಿವೆ. ಈ ಭಾಗದ ಮಹಿಳೆಯರು ಮರುವಾಯಿ ಸಂಗ್ರಹಿಸಿ ಮಾರಾಟ ನಡೆಸುತ್ತಿದ್ದರು. ಈಗ ಅದಕ್ಕೂ ಕುತ್ತುಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.