ADVERTISEMENT

ಯೂನಿಯನ್ ಬ್ಯಾಂಕ್‌ನಿಂದ ‘ಯು-ಜೀನಿಯಸ್’ ರಸಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 10:55 IST
Last Updated 12 ಅಕ್ಟೋಬರ್ 2022, 10:55 IST

ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಯು-ಜೀನಿಯಸ್’ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥ ಹಾಗೂ ಉಪ ಪ್ರಧಾನ ವ್ಯವಸ್ಥಾಪಕ ಮಹೇಶ್, ‘ಎಂಟನೇ ತರಗತಿಯಿಂದ ದ್ವಿತೀಯ ಪಿ.ಯು.ವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿಯೊಂದು ವಿದ್ಯಾಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳಿರುವ ಎರಡು ತಂಡಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ’ ಎಂದರು.

‘ನಗರದ ಪಾಂಡೇಶ್ವರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾಂಗಣದಲ್ಲಿ ಇದೇ 18ರಂದು ಪೂರ್ವಭಾವಿ ಸುತ್ತಿನ ಸ್ಪರ್ಧೆ ನಡೆಯಲಿದೆ. ದಕ್ಷಿಣಕನ್ನಡ, ಉಡುಪಿ ಹಾಗೂ ಕೊಯಿಕ್ಕೋಡ್‌ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈಗಾಗಲೇ 500ಕ್ಕೂ ಅಧಿಕ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ’ ಎಂದರು.

ADVERTISEMENT

‘ಪೂರ್ವಭಾವಿ ಸುತ್ತಿನಲ್ಲಿ ಗೆದ್ದವರು ಉಪಾಂತ್ಯ ಹಾಗೂ ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆಯುವ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಗಳಿಗೆ ನಗದು ಬಹುಮಾನ, ಫಲಕ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಮೊದಲ ಸ್ಥಾನ ಪಡೆದ ತಂಡಕ್ಕೆ ₹ 1 ಲಕ್ಷ, 2ನೇ ಸ್ಥಾನ ಪಡೆದ ತಂಡಕ್ಕೆ ₹ 50ಸಾವಿರ ಹಾಗೂ ಮೂರನೇ ಸ್ಥಾನ ಪಡೆದ ತಂಡಕ್ಕೆ ₹ 25 ಸಾವಿರ ನಗದು ಬಹುಮಾನವಿದೆ’ ಎಂದರು.

‘ಆಸಕ್ತ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಪ್ರಾಂಶುಪಾಲರ ಮೂಲಕ ಆನ್‌ಲೈನ್‌ನಲ್ಲಿ ( hr.mangalore@unionbankofindia.bank ಅಥವಾ cb8824pcd@unionbankof india.bank ) ಹೆಸರು ನೋಂದಾಯಿಸಬಹುದು’ ಎಂದರು.
ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಬ್ಯಾಂಕಿನ ಪ್ರಾದೇಶಿಕ ಉಪಮುಖ್ಯಸ್ಥ ಜಯರಾಜ್‌, ಹಿರಿಯ ಮಾರುಕಟ್ಟೆ ವಿಭಾಗದ ಅಧಿಕಾರಿ ನೀರಜ್ ಹಾಗೂ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ತಮಿಳ್‌ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.