ಮಂಗಳೂರು: ವಿದೇಶದಲ್ಲಿ ಶಿಕ್ಷಣ ಪಡೆದುಕೊಳ್ಳುವವರಿಗೆ ದಾರಿ ತೋರಿಸುವ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿ ಲಭ್ಯ ಇರುವ ನಾನಾ ಬಗೆಯ ಫ್ಲ್ಯಾಟ್‌ಗಳ ಮಾಹಿತಿಗೆ ಅನೇಕ ಮಳಿಗೆಗಳು, ವಾಹನ, ಮನೆ ಖರೀದಿಸಲು ಬಯಸುವವರಿಗೆ ಪೂರಕ ವಿವರ...
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ನಗರದಲ್ಲಿ ಬುಧವಾರ ನಡೆದ ಮೆಗಾ ರೀಟೇಲ್ ಎಕ್ಸ್‌ಪೊ ‘ರೀಟೇಲಥ್ಲಾನ್’ನಲ್ಲಿ ಪಾಲ್ಗೊಂಡಿದ್ದ ಕಂಪನಿಗಳು ಗ್ರಾಹಕರ ‘ಕೊಳ್ಳುವ’ ಆಶಯಕ್ಕೆ ದಾರಿದೀಪವಾದವು.
ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಬ್ಯಾಂಕ್‌ನ ವಲಯ ಮುಖ್ಯಸ್ಥೆ ರೇಣು ಕೆ ನಾಯರ್ ಅವರು ಎಕ್ಸ್‌ಪೊ ಉದ್ಘಾಟಿಸಿದರು.
ಬ್ಯಾಂಕ್‌ಗಳಿಗೆ ಮಾತ್ರವಲ್ಲ, ಎಲ್ಲ ಬಗೆಯ ಉದ್ಯಮಗಳಿಗೂ ಮಂಗಳೂರಿನಲ್ಲಿ ಅನುಕೂಲಕರ ವಾತಾವರಣವಿದೆ. ವಾಸಕ್ಕೂ ಅತ್ಯಂತ ಯೋಗ್ಯವಾಗಿರುವ ಈ ನಗರದತ್ತ ಜನರು ಇತ್ತೀಚೆಗೆ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ರೇಣು ಅಭಿಪ್ರಾಯಪಟ್ಟರು.
ಐಟಿ ಕಂಪನಿಗಳು ಕೂಡ ಮಂಗಳೂರಿನತ್ತ ದಾಪುಗಾಲು ಇಡುತ್ತಿವೆ. ನಗರಕ್ಕೆ ಸಮೀಪದಲ್ಲೇ ವಿಮಾನ ನಿಲ್ದಾಣ ಇರುವುದು, ಕೆಲಸ ಬಿಟ್ಟು ಕಡಿಮೆ ಅವಧಿಯಲ್ಲಿ ಮನೆ ಸೇರಲು ಸಾಧ್ಯವಾಗುವಂಥ ವಾತಾವರಣ, ಸಕಲ ಸೌಲಭ್ಯಗಳು ಸುಲಭವಾಗಿ ಸಿಗುವ ವ್ಯವಸ್ಥೆ, ಕೈಗೆಟಕುವ ದರದಲ್ಲಿ ಫ್ಲ್ಯಾಟ್‌ಗಳು ಲಭ್ಯ ಇರುವುದು, ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಯ ವಾತಾವರಣ ನಿರ್ಮಾಣ ಆಗಿರುವುದು ಮಂಗಳೂರಿನ ವೈಶಿಷ್ಟ್ಯ ಎಂದು ಅವರು ಹೇಳಿದರು.
ಉದ್ಯಮಿ ಗುರುದತ್ ಶೆಣೈ ಅವರಿಗೆ ಸಾಲ ಮಂಜೂರು ಪತ್ರವನ್ನು ಹಸ್ತಾಂತರಿಸಲಾಯಿತು. ಮಂಗಳೂರಿಗೆ ಕಂಪನಿಗಳು ಬರಲು ಮನಸ್ಸು ಮಾಡುತ್ತಿವೆ. ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಬ್ಯಾಂಕುಗಳು ಸಿದ್ಧವಾಗಬೇಕು. ನಿಬಂಧನೆಗಳನ್ನು ಸಡಿಲಿಸಿ ಸಾಲ ಕೊಡಬೇಕು. ಹಾಗೆ ಮಾಡಿದರೆ ಇಲ್ಲಿ ಐಟಿ ಉದ್ಯಮ ಕ್ರಾಂತಿಕಾರಿ ರೀತಿಯಲ್ಲಿ ಬೆಳೆಯುವ ನಿರೀಕ್ಷೆ ಇದೆ ಎಂದು ಗುರುದತ್ ಅಭಿಪ್ರಾಯಪಟ್ಟರು.
ಬ್ಯಾಂಕ್‌ನ ಮಂಗಳೂರು ವಿಭಾಗ ಮುಖ್ಯಸ್ಥ ಮಹೇಶ ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಎಲ್‌ಪಿ ವಿಭಾಗದ ಮುಖ್ಯಸ್ಥೆ ಸುಮಾ ಪವಿತ್ರನ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಮುಕುಂದ್ ಮತ್ತು ಮಂಗಲ್ ದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.