ADVERTISEMENT

ಕರಾವಳಿ ಅಭಿವೃದ್ಧಿಗೆ ಉತ್ತೇಜನಕಾರಿ: ಅನಂತೇಶ್‌ ವಿ.ಪ್ರಭು

ಕೇಂದ್ರ ಬಜೆಟ್‌ಗೆ ಕೆಸಿಸಿಐ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 4:21 IST
Last Updated 2 ಫೆಬ್ರುವರಿ 2024, 4:21 IST
ಅನಂತೇಶ ವಿ.ಪ್ರಭು
ಅನಂತೇಶ ವಿ.ಪ್ರಭು   

ಮಂಗಳೂರು: ‘ಕೇಂದ್ರ ಸರ್ಕಾರದ 2024–25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ಕೆಲವು ಕಾರ್ಯಕ್ರಮಗಳಿಂದ ಕರಾವಳಿ ಕರ್ನಾಟಕಕ್ಕೂ ಪ್ರಯೋಜನಗಳಾಗಲಿವೆ. ವಿಕಸಿತ ಭಾರತದ ಯಶೋಗಾಥೆಯಲ್ಲಿ ಕರಾವಳಿ ಕರ್ನಾಟಕವೂ ಭಾಗಿಯಾಗಲಿದೆ’ ಎಂದು ಕೆಸಿಸಿಐ ಅಧ್ಯಕ್ಷ ಅನಂತೇಶ್‌ ವಿ.ಪ್ರಭು ಅಭಿಪ್ರಾಯಪಟ್ಟರು.

‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಅಡಿ ಅಕ್ವಾ ಪಾರ್ಕ್‌ ನಿರ್ಮಿಸುವ ಮೂಲಕ ಜಲ ಕೃಷಿ ಉತ್ಪಾದಕತೆ ಹಚ್ಚಿಸಲು, ರಫ್ತನ್ನು ದ್ವಿಗುಣಗೊಳಿಸಲು ಉತ್ತೇಜನ ನೀಡುವುದರಿಂದ ಕರಾವಳಿಗೂ ಅನುಕೂಲವಾಗಲಿದೆ.’

‘ಲಕ್ಷಾಧಿಪತಿ ದೀದಿ’ ಕಾರ್ಯಕ್ರಮದಿಂದ ಸ್ವಸಹಾಯ ಸಂಘಟಗಳಿಗೆ ಬೆಂಬಲ ಸಿಗಲಿದೆ. ಮಂಗಳೂರಿನ ಜೊತೆ ದೀರ್ಘ ಕಾಲದಿಂದ ನಂಟು ಹೊಂದಿರುವ ‘ಲಕ್ಷದ್ವೀಪ’ದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿರ್ಧಾರವೂ ಸ್ವಾಗತಾರ್ಹ. ನವೋದ್ಯಮಗಳಿಗೆ ಮತ್ತು ಆವಿಷ್ಕಾರಗಳಿಗೆ 50 ವರ್ಷ ಬಡ್ಡಿರಹಿತ ಸಾಲ ನೀಡುವ ಸಲುವಾಗಿ ಬಂಡವಾಳ ಹೂಡಿಕೆ ನೀಡಿರುವುದು ಸ್ವಾಗತಾರ್ಹ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಉತ್ತೇಜನ ನಿಡಲು ಒಟ್ಟು ಆಂತರಿಕ ಉತ್ಪನ್ನದ ಶೇ 3.4ರಷ್ಟು ಮೊತ್ತ ಕಾಯ್ದಿರಿಸಿರುವುದರಿಂದಲೂ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ’.

ADVERTISEMENT

ಚಾವಣಿಯಲ್ಲಿ ಸೌರವಿದ್ಯುತ್‌ ಪರಿಕರ ಅಳವಡಿಕೆ ಹಾಗೂ ಉಚಿತ ವಿದ್ಯುತ್‌ ಪೂರೈಕೆ, ಇ.ವಿ. ಚಾರ್ಜಿಂಗ್‌ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಉತ್ತೇಜನ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮಧ್ಯಮವರ್ಗದ ಜನತೆ ಸ್ವಂತ ವಸತಿ ಹೊಂದುವುದಕ್ಕೆ ಉತ್ತೇಜನ, ಕೃಷಿ ಮತ್ತು ಆಹಾರ ಸಂಸ್ಕರಣೆ ಹಾಗೂ ಕೊಯಿಲೋತ್ತರ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್‌ಗೆ ನೆರವು, ಖಾದ್ಯತೈಲ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುವುದು ಮೊದಲಾದ ಯೋಜನೆಗಳಿಂದ ಕರಾವಳಿಗೂ ಅನುಕೂಲ ಆಗಲಿವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಜೆಟ್‌ ಪ್ರತಿಕ್ರಿಯೆ....

'ಆದಾಯ ತೆರಿಗೆ ರಿಬೇಟ್‌ ಹೆಚ್ಚಿಸಬೇಕಿತ್ತು’ ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಬೇಟ್‌ ಹೆಚ್ಚಳವಾಗಬಹುದು ಸೆಕ್ಯುರಿಟೀಸ್‌ ಟ್ರಾನ್ಸ್ಯಾಕ್ಷನ್‌ ತೆರಿಗೆ (ಎಸ್‌ಟಿಟಿ) ಕಡಿತಗೊಳಿಸಬಹುದು ದೀರ್ಘಾವಧಿ ಬಂಡವಾಳ ಗಳಿಕೆ ಮತ್ತು ಕ್ರಿಪ್ಟೊ ಕರೆನ್ಸಿ ಮೇಲಿನ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ತೆರಿಗೆ ಪಾವತಿದಾರರಿಗೆ ನೆರವಾಗಬುದಾದ ಈ ಪ್ರಸ್ತಾವಗಳನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪರಿಗಣಿಸಿಯೇ ಇಲ್ಲ.  ಈ ಬೇಡಿಕೆಗಳು ಚುನಾವಣೆ ನಂತರದಲ್ಲಿ ಮಂಡನೆ ಆಗುವ ಅಂತಿಮ ಬಜೆಟ್‌ನಲ್ಲಾದರೂ ಈಡೇರಬೇಕೆಂಬುದು ತೆರಿಗೆ ಪಾವತಿದಾರರ ನಿರೀಕ್ಷೆ. ನವೋದ್ಯಮಗಳ ಮೇಲಿನ ಮತ್ತು ಸೊವರಿನ್‌ ಸಂಪತ್ತು ನಿಧಿಗಳ ತೆರಿಗೆ ವಿನಾಯಿತಿಯನ್ನು ಮುಂದುವರಿಸಿದ್ದು ಸ್ವಾಗತಾರ್ಹ ನಡೆ. 2009–10ವರೆಗಿನ ಅವಧಿಗೆ ಸಂಬಂಧಿಸಿದ ₹ 25 ಸಾವಿರವರೆಗೆ ಹಾಗೂ 2014–15ರವರೆಗಿನ ₹10 ಸಾವಿರದವರೆಗಿನ ನೇರ ತೆರಿಗೆ ಬೇಡಿಕೆಗಳನ್ನು ಹಿಂಪಡೆದಿದ್ದರಿಂದ ಸುಮಾರು  1 ಕೋಟಿಗಳಷ್ಟು ಮಂದಿ ತೆರಿಗೆ ಪಾವತಿದಾರರಿಗೆ ಪ್ರಯೋಜನವಾಗಲಿದ್ದು ಈ ನಡೆಯೂ ಸ್ವಾಗತಾರ್ಹ.  ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮಧ್ಯಂತರ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆಗಳನ್ನು ಮಾಡುವ ಸಾಧ್ಯತೆ ಇತ್ತು. ಆದರೆ  ಹಾಗೆ ಮಾಡಿಲ್ಲ. ಸರ್ಕಾರ ಜನಪ್ರಿಯತೆಗಿಂತ ಆರ್ಥಿಕ ಶಿಸ್ತಿಗೆ ಆದ್ಯತೆ ನೀಡಿದೆ. ಸಿ.ಎ. ಪ್ರಸನ್ನ ಶೆಣೈ ಎಂ. (ಐಸಿಎಐ ಮಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷ ಕೆಸಿಸಿಐ ನೇರ ತೆರಿಗೆ ಸಮಿತಿಯ ಅಧ್ಯಕ್ಷ) –0– ‘ಎಲ್ಲ ವರ್ಗದ ಹಿತ ಕಾಯುವ ಬಜೆಟ್’ ಲಕ್ಷ ದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ. ಮಂಗಳೂರು ಸಹಿತ ಕರಾವಳಿಯ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೂ ಇದು ಸಹಕಾರಿ. ಇದರಿಂದ ಅನೇಕ ಉದ್ಯೋಗ ಹಾಗೂ ವ್ಯವಹಾರಗಳು ಸೃಷ್ಟಿಯಾಗಲಿವೆ. ಮತ್ಸ್ಯ ಸಂಪದ ಯೋಜನೆ ಮುಂದುವರಿಸಿದ್ದರಿಂದ ಕರಾವಳಿಯ ಮೀನುಗಾರರಿಗೆ ವರದಾನವಾಗಲಿದೆ.  -ನಳಿನ್‌ ಕುಮಾರ್ ಕಟೀಲ್ ಸಂಸದರು ದ.ಕ. -0- ‘ರಾಜ್ಯದ ಕರಾವಳಿಯ ಅಭಿವೃದ್ಧಿ ಕಡೆಗಣನೆ’ ಕೇಂದ್ರದ ಬಜೆಟ್ ಪ್ರಾದೇಶಿಕತೆಯನ್ನು ಮರೆತಿದೆ. ಕರ್ನಾಟಕ ಮತ್ತು ರಾಜ್ಯದ ಕರಾವಳಿಯ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಯುವಕರು ಅನ್ನದಾತರು ಬಡವರು ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ವರ್ಗಕ್ಕೆ ವಿಶೇಷವಾದ ಘೋಷಣೆ ಮಾಡಿಲ್ಲ.  ಬಜೆಟ್‌ನಲ್ಲಿ ವಿಶೇಷ ಅನಿಸುವಂಥದ್ದು ಏನೂ ಇಲ್ಲ. ಇದು ಮೋದಿ ಸರ್ಕಾರದ ಅಂತಿಮ ಬಜೆಟ್ ಆಗಲಿದೆ. ಬಿ.ರಮಾನಾಥ ರೈ ಕೆಪಿಸಿಸಿ ಉಪಾಧ್ಯಕ್ಷ –0– 'ಪ್ರಗತಿ ಹಿನ್ನಡೆಯ ಸಂಕೇತ' ದೇಶದ ಪ್ರಗತಿ ಹಿನ್ನಡೆ ಕಂಡಿರುವ ಈ ಕಾಲಘಟ್ಟದಲ್ಲಿ ಅವರು ಈ ರೀತಿಯ ಬಜೆಟ್ ಅಲ್ಲದೆ ಬೇರೇನು ಮಂಡಿಸಲು ಸಾಧ್ಯವಿಲ್ಲ. ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳಾಗಿರುವ ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಬಡವರು ಮಧ್ಯಮ ವರ್ಗಕ್ಕೆ ಯಾವುದೇ ಯೋಜನೆ ಘೋಷಿಸಿಲ್ಲ. ದೇಶದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಆದಾಯ ತೆರಿಗೆದಾರರಿಗೆ ಹೇಳುವಂತಹ ಯಾವುದೇ ಘೋಷಣೆಯಿಲ್ಲ.  ಕೆ.ಹರೀಶ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ  -0- ‘ಸೇನೆಗೆ ಬಲ ತುಂಬಿದ ಬಜೆಟ್‌’ ರಕ್ಷಣಾ ಕ್ಷೇತ್ರಕ್ಕೆ ಒದಗಿಸಿದ  ₹ 6.21 ಲಕ್ಷ ಕೋಟಿ ಅನುದಾನ ನಮ್ಮ ಸೇನೆಗೆ ಇನ್ನಷ್ಟು ಬಲ ನೀಡಲಿದೆ. ಗಡಿಯ ರಕ್ಷಣೆ ಹಾಗೂ ಸೇನೆಯ ಸೌಕರ್ಯಗಳ ಆಧುನೀಕರಣಕ್ಕೆ ನೆರವಾಗಲಿದೆ. ಇದು ಹೆಚ್ಚಿನ ಭದ್ರತೆಗೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ. ಉತ್ಪಾದನೆಯ ವಿಷಯದಲ್ಲಿ ದೇಶವನ್ನು ಸ್ವತಂತ್ರಗೊಳಿಸುವ ಗುರಿಯೊಂದಿಗೆ ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲಿದೆ. ಕ್ಯಾ.ಬೃಜೇಶ್‌ ಚೌಟ ಬಿಜೆಪಿ ರಾಜ್ಯ ಸಮಿತಿಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.