ADVERTISEMENT

'ಭಾವೈಕ್ಯದ ದೀಪಾವಳಿಗೆ ದಶಕದ ಸಂಭ್ರಮ'

ಅ.31ರಂದು ಕುಣಿತ ಭಜನೆ, ಗೂಡುದೀಪ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:13 IST
Last Updated 19 ಅಕ್ಟೋಬರ್ 2024, 13:13 IST
ಐವನ್ ಡಿಸೋಜ
ಐವನ್ ಡಿಸೋಜ   

ಮಂಗಳೂರು: ಸರ್ವ ಧರ್ಮಗಳ ಭಾವೈಕ್ಯದ ದೀಪಾವಳಿಗೆ ದಶಮಾನೋತ್ಸವದ ಸಂಭ್ರಮ. ಕುಣಿತ ಭಜನೆ, ಗೂಡುದೀಪ, ಚಿತ್ರಕಲಾ ಸ್ಪರ್ಧೆಗಳು ಹಬ್ಬದ ಆಚರಣೆಗೆ ಮೆರುಗು ನೀಡಲಿವೆ.

ಭಾವೈಕ್ಯ ದೀಪಾವಳಿ ಆಚರಣೆಯ ನೇತೃತ್ವ ವಹಿಸಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಅ.31ರಂದು ಮಧ್ಯಾಹ್ನ 3 ಗಂಟೆಯಿಂದ ಕದ್ರಿ ಪಾರ್ಕ್‌ನ ಸುವರ್ಣ ಕಲಾ ಮಂಟಪದಲ್ಲಿ ಚಿತ್ರಕಲೆ, ಗೂಡುದೀಪ, ಕುಣಿತ ಭಜನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ದೀಪಾವಳಿಯ ವಿಶಿಷ್ಟ ಕಲ್ಪನೆಯ ಥೀಮ್‌ನಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ಪ್ರಾಥಮಿಕ (1ರಿಂದ 4ನೇ ತರಗತಿ ಮತ್ತು 5ರಿಂದ 7ನೇ ತರಗತಿ), ಪ್ರೌಢಶಾಲೆ (6ರಿಂದ 10ನೇ ತರಗತಿ), ಪಿಯುಸಿ ಹಾಗೂ ಪದವಿ ಮೇಲ್ಪಟ್ಟ ಎಲ್ಲ ವಯೋಮಾನದವರು ಹೀಗೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಪ್ರಥಮ ₹5,000, ದ್ವಿತೀಯ ₹3,000, ತೃತೀಯ ₹2,000 ಬಹುಮಾನ, ಪ್ರಮಾಣಪತ್ರ ನೀಡಲಾಗುವುದು. ಕುಣಿತ ಭಜನೆ ಸ್ಪರ್ಧೆಯ ಪ್ರತಿ ತಂಡದಲ್ಲಿ 10 ಜನರಿಗಿಂತ ಮೇಲೆ ಇರಬಾರದು, ಪ್ರಥಮ ₹15 ಸಾವಿರ, ದ್ವಿತೀಯ ₹10 ಸಾವಿರ, ತೃತೀಯ ₹5,000, ಭಾಗವಹಿಸಿದ ಎಲ್ಲ ತಂಡಗಳಿಗೆ ತಲಾ ₹1,000 ನೀಡಲಾಗುವುದು ಎಂದು ಹೇಳಿದರು.

ADVERTISEMENT

ಗೂಡುದೀಪ ಸ್ಪರ್ಧೆಯು ಆಧುನಿಕ ಮತ್ತು ಸಾಂಪ್ರದಾಯಿಕ ವಿಭಾಗದಲ್ಲಿ ನಡೆಯಲಿದ್ದು, ಸಂಜೆ 5.30ಕ್ಕೆ ಪ್ರಾರಂಭವಾಗಲಿದೆ. 300ಕ್ಕೂ ಹೆಚ್ಚು ಗೂಡುದೀಪಗಳು ಬರುವ ನಿರೀಕ್ಷೆಯಿದೆ. ಪ್ರಥಮ ₹7,000, ದ್ವಿತೀಯ ₹5,000, ತೃತೀಯ ₹3,000 ಬಹುಮಾನ, ಭಾಗವಹಿಸಿದ ಎಲ್ಲ ತಂಡಗಳಿಗೆ ಗೌರವಧನ, ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಚಿತ್ರಕಲಾ ಸ್ಪರ್ಧೆ ನೋಂದಣಿಗೆ ಪ್ರಗತಿ ಬೇಕಲ್ (9686261829), ಮೀನಾ ಟೆಲ್ಲಿಸ್ (7022436831), ಗೂಡುದೀಪ ಸ್ಪರ್ಧೆ ನೋಂದಣಿಗೆ ಮಹೇಶ್ ಕೋಡಿಕಲ್ (9743597991), ವಿಕಾಸ್ ಶೆಟ್ಟಿ (9916021942), ಮನೀಶ್ ಬೋಳಾರ್, ಕುಣಿತ ಸ್ಪರ್ಧೆ ನೋಂದಣಿಗೆ ಚಂದ್ರಹಾಸ್ ಕುಲಾಲ್ (9964818276) ಅವರನ್ನು ಸಂಪರ್ಕಿಸಬಹುದು. ನೋಂದಣಿಗೆ ಅ.28 ಕೊನೆಯ ದಿನ.

ಸಮಿತಿ ಸಂಚಾಲಕ ಜೆ. ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್, ಭಾಸ್ಕರ್ ರಾವ್, ಚಂದ್ರಹಾಸ್ ಕುಲಾಲ್, ಪ್ರಗತಿ ಬೇಕಲ್, ಮನೀಶ್ ಬೋಳಾರ, ಸಿರಾಜ್ ಬಜಪೆ, ಮನೋರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.