ಉಪ್ಪಿನಂಗಡಿ (ದಕ್ಷಿಣ ಕನ್ನಡ): ‘ನಾಲ್ಕನೇ ಶನಿವಾರ ವೈದ್ಯರೆಲ್ಲ ರಜೆಯಲ್ಲಿದ್ದಾರೆ. ಭಾನುವಾರ ವಾರದ ರಜೆ, ಸೋಮವಾರದ ಕ್ರಿಸ್‌ಮಸ್ ರಜೆ ಮುಗಿದ ಬಳಿಕ ಮಂಗಳವಾರ ಬನ್ನಿ’ ಎಂದು ರೋಗಿಗಳನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಿಂದ ಶನಿವಾರ ವಾಪಸ್ ಕಳುಹಿಸಲಾಗಿದೆ.
ಇಲ್ಲಿನ ಉಪಾಹಾರ ಹಾಗೂ ಪಾನೀಯ ಮಾರಾಟ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತದ ಕಾರ್ಮಿಕರಾದ ಶಮೀಮ್, ರಹೀಂ ಜ್ವರದಿಂದ ಬಳಲುತ್ತಿದ್ದರು. ಶುಕ್ರವಾರ ರಾತ್ರಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಔಷಧಿ ಪಡೆದುಕೊಂಡಿದ್ದರು. ಜ್ವರ ಕಡಿಮೆ ಆಗದೆ ಇದ್ದರೆ ಶನಿವಾರ ಬಂದು ರಕ್ತ ಪರೀಕ್ಷೆ ಮಾಡಿಸಬೇಕೆಂದು ಸೂಚಿಸಲಾಗಿತ್ತು. ಶನಿವಾರವೂ ಜ್ವರ ಕಡಿಮೆ ಆಗಿರಲಿಲ್ಲ. ಹೀಗಾಗಿ ರಕ್ತಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಜ್ವರಪೀಡಿತರು ಶಾಸಕರ ಬಳಿ ಅಳಲು ತೋಡಿಕೊಂಡಿದ್ದಾರೆ.
ರಜೆಯ ನೆಪ ಹೇಳುವಂತಿಲ್ಲ: ಟಿಎಚ್‌ಒ
ಪ್ರಕರಣದ ಬಗ್ಗೆ ಪುತ್ತೂರು ತಾಲ್ಲೂಕು ಆರೋಗ್ಯಾಧಿಕಾರಿ (ಟಿಎಚ್‌ಒ) ಪ್ರತಿಕ್ರಿಯಿಸಿ, ‘ಲ್ಯಾಬ್ ಟೆಕ್ನಿಷಿಯನ್ ಅನಾರೋಗ್ಯದ ಕಾರಣ ನೀಡಿ ರಜೆ ಪಡೆದಿದ್ದಾರೆ. ಆರೋಗ್ಯ ಇಲಾಖೆಗೆ ಎರಡನೇ ಶನಿವಾರ, ನಾಲ್ಕನೇ ಶನಿವಾರ ಎಂದು ರಜೆ ಇರುವುದಿಲ್ಲ. ಹಬ್ಬದ ದಿನಗಳಲ್ಲಿ ಸರ್ಕಾರಿ ರಜೆ ಇದ್ದರೂ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತದೆ. ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಕರ್ತವ್ಯದಲ್ಲಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.