ಉಪ್ಪಿನಂಗಡಿ: ನೇತ್ರಾವತಿ, ಕುಮಾರಧಾರ ನದಿಗಳ ಒಡಲಿಗೆ ಇಲ್ಲಿನ ಶೌಚ, ಮಲಿನ ನೀರು ಸೇರುತ್ತಿದೆ. ಜತೆಗೆ, ಕಸವನ್ನೂ ಎಸೆಯುತ್ತಿರುವುದರಿಂದ ಜೀವಜಲವನ್ನು ಕಲುಷಿತಗೊಳ್ಳುತ್ತಿದೆ.
ವರ್ಷಪೂರ್ತಿ ಹರಿದು ಬಂದು ನದಿಯ ಒಡಲಲ್ಲಿ ಶೇಖರಣೆಯಾಗಿರುವ ಕಶ್ಮಲ ನೀರು, ಕಸ ಮಳೆಗಾಲದಲ್ಲಿ ನದಿ ನೀರಿನೊಂದಿಗೆ ಸೇರಿಕೊಳ್ಳುತ್ತಿದೆ.
ಪೇಟೆಯ ಹೊರಗಿನಿಂದ ಬರುವ ಹಲವರು ಕಾರು, ದ್ವಿಚಕ್ರ ವಾಹನದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮನೆಯ ಕಸ ತುಂಬಿಸಿಕೊಂಡು ನದಿ ಒಡಲಿಗೆ ಎಸೆಯುತ್ತಿದ್ದಾರೆ. ಕೂಟೇಲು ಬಳಿ ಹಾಗೂ ಕುಮಾರಧಾರ ನದಿಯ ಸೇತುವೆ, ನೇತ್ರಾವತಿ ನದಿಯ ಸೇತುವೆಯ ಬಳಿ ಎಸೆದಿರುವ ಕಸ ರಾಶಿ ಬಿದ್ದಿದೆ. ಇಲ್ಲಿನ ಹೆಚ್ಚಿನ ಹೊಟೇಲ್, ವಸತಿ ಸಂಕೀರ್ಣ, ವಾಣಿಜ್ಯ ಮಳಿಗೆಗಳಿಗೆ ಇಂಗು ಗುಂಡಿಗಳೇ ಇಲ್ಲ. ಅವರೆಲ್ಲ ಕಲುಷಿತ ನೀರನ್ನು ನದಿಯತ್ತ ಬಿಡುತ್ತಿದ್ದಾರೆ.
ವಸತಿ ಸಮುಚ್ಛಯ, ವಾಣಿಜ್ಯ ಸಂಕೀರ್ಣ, ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಇಂಗುಗುಂಡಿ ಇದ್ದರೆ ಮಾತ್ರ ಪರವಾನಗಿ ನೀಡಬೇಕು ಎಂಬ ನಿಯಮವಿದ್ದರೂ, ಇಲ್ಲಿನ ಪಂಚಾಯಿತಿ ಈ ನಿಯಮ ಉಲ್ಲಂಘಿಸಿ ಪರವಾನಗಿ ನೀಡಿದೆ. ಗ್ರಾಮ ಪಂಚಾಯಿತಿ ತ್ಯಾಜ್ಯ ಘಟಕದ ಬಳಿಯಿಂದಲೇ ಹರಿಯುವ ಮಲಿನ ನೀರಿಗೆ ಕೆಲವು ಕಡೆ ಶೌಚದ ನೀರೂ ಸೇರಿಕೊಳ್ಳುತ್ತಿದೆ. ಅದು ನೇತ್ರಾವತಿ ನದಿಯ ಒಡಲಲ್ಲಿ ದೊಡ್ಡ ಕೆರೆಯಂಥ ಜಾಗದಲ್ಲಿ ತುಂಬಿ, ದುರ್ನಾತ ಬೀರುತ್ತಿದೆ.
ಅಲೆಮಾರಿಗಳ ಆಶ್ರಯ ತಾಣ: ಮೀನು ಹಿಡಿಯುವವರು ಸೇರಿದಂತೆ ಅಲೆಮಾರಿ ಜನಾಂಗವು ಹೆಚ್ಚಾಗಿ ಇಲ್ಲಿನ ನೇತ್ರಾವತಿ, ಕುಮಾರಧಾರ ನದಿ ತೀರದಲ್ಲೇ ಬೇಸಿಗೆಯ ಸುಮಾರು 4 ತಿಂಗಳು ಆಶ್ರಯ ಪಡೆಯುತ್ತಿವೆ. ಬಟ್ಟೆ ತೊಳೆಯಲು, ಸ್ನಾನ ಸೇರಿದಂತೆ ಎಲ್ಲ ಚಟುವಟಿಕೆಗೆ ಇದೇ ನದಿಯನ್ನು ಆಶ್ರಯಿಸುತ್ತಿದ್ದಾರೆ. ಹಳೆಗೇಟು ಬಳಿಯ ನೇತ್ರಾವತಿ ನದಿ ತೀರದಲ್ಲಿ ಅಲೆಮಾರಿಗಳು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕೆಲಸದವರು ವಾಸ್ತವ್ಯವಿದ್ದಾರೆ.
ನೇತ್ರಾವತಿ ನದಿಯ ಸಮೀಪವಿರುವ ಸಮುದಾಯ ಆರೋಗ್ಯ ಕೇಂದ್ರದ ಆವರಣದ ಹೊರಗೆ ಪ್ಲಾಸ್ಟಿಕ್, ಕಸದ ರಾಶಿಯೇ ಇದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಬಸ್ ನಿಲ್ದಾಣದ ಹಿಂಬಾಗದಲ್ಲಿ ಗ್ರಾಮ ಪಂಚಾಯಿತಿ ತ್ಯಾಜ್ಯ ಘಟಕದ ಬಳಿ ನದಿ ದಂಡೆಯ ಬದಿಯಲ್ಲಿ ಪ್ಲಾಸ್ಟಿಕ್ ಕಸ ರಾಶಿ ಬಿದ್ದಿದ್ದು, ನದಿ ತುಂಬಿ ಹರಿಯಲು ಆರಂಭಿಸಿದಾಗ ಇವುಗಳು ನದಿ ನೀರನ್ನು ಸೇರಿಕೊಳ್ಳುವ ಸಾಧ್ಯತೆ ಬಗ್ಗೆ ದೂರು ವ್ಯಕ್ತವಾಗಿದೆ. ಆ ರೀತಿ ಆಗುವ ಮುನ್ನ ಪಂಚಾಯಿತಿ ತೆರವು ಮಾಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.
‘ಒಳಚರಂಡಿ ಘಟಕ ಯೋಜನೆ ಸಿದ್ಧಪಡಿಸಲಾಗಿದೆ’
ನದಿಗೆ ಮಲಿನ ನೀರು ಬಿಡುವ ಹೋಟೆಲ್, ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣಗಳ ಮಾಲೀಕರ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗಿದೆ. ನದಿಗೆ ಮಲಿನ ನೀರು ಹರಿಸುವುದನ್ನು ತಡೆಗಟ್ಟಲು ತ್ಯಾಜ್ಯ ನೀರು ಸಂಸ್ಕರಣಾ ಘಟಕ, (ಒಳ ಚರಂಡಿ) ನಿರ್ಮಿಸುವ ಬಗ್ಗೆ ಯೋಜನೆ ಸಿದ್ಧಪಡಿಸಲಾಗಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ನಡೆಸಲಾಗುವುದು. ಸಾರ್ವಜನಿಕ ಸ್ಥಳದಲ್ಲಿ, ನದಿಗೆ ಕಸ ಹಾಕುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿದ್ಯಾಲಕ್ಷ್ಮಿ ಪ್ರಭು ತಿಳಿಸಿದರು.
ತ್ಯಾಜ್ಯ ಘಟಕ ಸ್ಥಳಾಂತರ ಸೂಕ್ತ: ರಾಧಾಕೃಷ್ಣ ನಾಯಕ್
ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ತ್ಯಾಜ್ಯ ಘಟಕ ನದಿ ದಡದಲ್ಲಿದ್ದು, ಇದರಿಂದ ಹೊರ ಬರುವ ಮಲಿನ ನೀರು ಮತ್ತು ಕಸ ನದಿಯ ಒಡಲು ಸೇರಿಕೊಳ್ಳುತ್ತಿರುತ್ತದೆ. ಇದನ್ನು ತಡೆಯಲು ಇಲ್ಲಿರುವ ತ್ಯಾಜ್ಯ ಘಟಕವನ್ನು ಜನ ವಸತಿ ಇಲ್ಲದ ಪ್ರದೇಶಕ್ಕೆ ಸ್ಥಳಾಂತರ ಮಾಡುವುದು ಸೂಕ್ತ ಎಂದು ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.