ADVERTISEMENT

ಉಪ್ಪಿನಂಗಡಿಯಲ್ಲಿ ಉತ್ತಮ ದರ್ಜೆಯ ಮಿನಿ ಯುನಿವರ್ಸಿಟಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ

ಸಿದ್ದಿಕ್ ನೀರಾಜೆ
Published 11 ಜೂನ್ 2024, 8:06 IST
Last Updated 11 ಜೂನ್ 2024, 8:06 IST
ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಉಪ್ಪಿನಂಗಡಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶಾಕಿರಣವಾಗಿದೆ. ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವೂ ಇದ್ದು, ಕನ್ನಡ ಎಂ.ಎ., ಎಂ.ಕಾಂ.(ಎಚ್ಆರ್‌ಎಂ, ಫೈನಾನ್ಸ್ ಮ್ಯಾನೇಜ್‌ಮೆಂಟ್‌) ಸ್ನಾತಕೋತ್ತರ ಪದವಿ ಅಧ್ಯಯನಕ್ಕೂ ಅವಕಾಶ ಇದೆ. 11 ವರ್ಷಗಳಿಂದ ನಿರಂತರವಾಗಿ ಇಲ್ಲಿನ ವಿದ್ಯಾರ್ಥಿಗಳು ಶೇ 100 ಫಲಿತಾಂಶ ದಾಖಲಿಸುತ್ತಿದ್ದಾರೆ.

ಶಿಸ್ತಿಗೆ ಹೆಸರಾಗಿರುವ ಕಾಲೇಜಿನಲ್ಲಿ ಕ್ರಿಯಾಶೀಲ ಉಪನ್ಯಾಸಕರ ತಂಡವೂ ಇದ್ದು, ಸ್ನಾತಕೋತ್ತರ ವಿಭಾಗಕ್ಕೆ ಪ್ರತ್ಯೇಕ ಬ್ಲಾಕ್‌ ಇದೆ. ಖಾಸಗಿ ಕಾಲೇಜಿಗೆ ಸವಾಲು ಒಡ್ಡುವ ರೀತಿಯಲ್ಲಿ ಕಾಲೇಜು ಪ್ರಸಿದ್ಧಿಯಾಗುತ್ತಿದ್ದು, ಊರವರ, ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ.

ಗ್ರಾಮೀಣ ವಿದ್ಯಾರ್ಥಿಗಳೇ ಅಧಿಕ: ಕಾಲೇಜಿಗೆ ಪುತ್ತೂರು, ಕಡಬ, ಬಂಟ್ವಾಳ, ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯ ಕಡಬ, ಮಾಣಿ, ಕಲ್ಲಡ್ಕ, ಕಲ್ಲೇರಿ, ಕಳೆಂಜಿಬೈಲ್, ಗೇರುಕಟ್ಟೆ, ಕೋಡಿಂಬಾಡಿ, ಪುತ್ತೂರು, ಗುಂಡ್ಯ, ಶಿಬಾಜೆ, ಅರಸಿನಮಕ್ಕಿ ಪಕ್ಕದ ಜಿಲ್ಲೆಯ ಸಕಲೇಶಪುರ, ಸೋಮವಾರಪೇಟೆ, ಚಿಕ್ಕಮಗಳೂರು, ಮೂಡಿಗೆರೆಯ ವಿದ್ಯಾರ್ಥಿಗಳೂ ತಮ್ಮ ಶೈಕ್ಷಣಿಕ ಸಾಧನೆಗಾಗಿ ಇದೇ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಪದವಿ ತರಗತಿಗಳು: ಕಾಲೇಜಿನಲ್ಲಿ ಬಿ.ಎ. (ಎಚ್ಇಪಿ, ಎಚ್ಇಎಸ್, ಕೆಪಿಎಸ್). ಬಿ.ಕಾಂ., ಬಿಬಿಎ, ಬಿಎಸ್‌ಡಬ್ಲ್ಯು ಇದೆ. ಬಿಎಸ್‌ಸಿ (ಪಿಸಿಎಂ., ಪಿಎಂಸಿ., ಸಿಬಿಝಡ್) ಇರುತ್ತದೆ. 4 ವರ್ಷಗಳಿಂದ ಬಿಸಿಎ ವಿಭಾಗವನ್ನೂ ತೆರೆಯಲಾಗಿದೆ. 2 ವರ್ಷದ ಹಿಂದೆ ಬಿಎಸ್‌ಡಬ್ಲ್ಯುನಲ್ಲಿ ಕಾಲೇಜಿಗೆ ರ್‍ಯಾಂಕ್‌ ಬಂದಿದೆ. ಕಾಲೇಜಿನಲ್ಲಿ 30 ತರಗತಿ ಕೊಠಡಿ ಇದ್ದು, ಸುಮಾರು 20 ತರಗತಿಗಳಲ್ಲಿ ‘ಸ್ಮಾರ್ಟ್‌ ಕ್ಲಾಸ್ ರೂಂ’ ಇದೆ. ವಿಜ್ಞಾನ ವಿಭಾಗಕ್ಕೆ ಸುಸಜ್ಜಿತ ಪ್ರತ್ಯೇಕ ಕಟ್ಟಡವೂ ಇದ್ದು, ಪ್ರತಿ ತರಗತಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

782 ವಿದ್ಯಾರ್ಥಿಗಳೂ: ಕಾಲೇಜಿನ ಪದವಿ ತರಗತಿಯಲ್ಲಿ 615, ಸ್ನಾತಕೋತ್ತರ ಪದವಿ ತರಗತಿಯಲ್ಲಿ 77 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 8 ವಿಭಾಗದಲ್ಲಿ 782 ವಿದ್ಯಾರ್ಥಿಗಳಿದ್ದು, ಕಾಲೇಜಿಗೆ 22 ಉಪನ್ಯಾಸಕರ ಹುದ್ದೆ ಮಂಜೂರಾತಿ ಇದ್ದು, ಈ ಪೈಕಿ 20 ಉಪನ್ಯಾಸಕರು ಇದ್ದಾರೆ. ಉಳಿದಂತೆ 35 ಅತಿಥಿ ಉಪನ್ಯಾಸಕರೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಪಾಠಕ್ಕೂ– ಆಟಕ್ಕೂ ಸೈ: ಕಾಲೇಜು ತಂಡ ಕ್ರೀಡೆಯಲ್ಲೂ ಅಮೋಘ ಸಾಧನೆ ಮಾಡಿದ್ದು, ವಿವಿಧ ಕ್ರೀಡೆಗಳಿಗೆ ಸಂಬಂಧಿಸಿ 32 ತಂಡಗಳು ವಿವಿ. ಮಟ್ಟದಲ್ಲಿ ಭಾಗವಹಿಸುತ್ತಿವೆ. ಕಾಲೇಜಿನಲ್ಲಿ ಪ್ರಥಮ ಬಾರಿಗೆ ಕಳೆದ ವರ್ಷ ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿ ನಡೆದಿದೆ. ಕಾಲೇಜಿನ ಕ್ರೀಡಾಪಟು ರೋಹಿತ್ ಅವರು ಸೀನಿಯರ್ ನ್ಯಾಷನಲ್‌ ಥ್ರೋಬಾಲ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸರ್ಕಾರಿ ಕಾಲೇಜು ವಿಭಾಗದಲ್ಲಿ ಚೆಸ್ ಮತ್ತು ಕಬಡ್ಡಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಾಂಸ್ಕೃತಿಕವಾಗಿಯೂ ಕಾಲೇಜು ತಂಡ ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ನಿರ್ದೇಶಿಸಿ ಅಭಿನಯಿಸಿದ ‘ಅಮಲು’ ಕಿರು ಚಿತ್ರ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ.

ಕಾಡುವ ಕೊರತೆ: ಕಾಲೇಜಿನಲ್ಲಿ ಸಭಾಂಗಣದ ಕೊರತೆ ಇದೆ. ಕಾಲೇಜಿನ ಗ್ರಂಥಾಲಯದಲ್ಲಿ ಸುಮಾರು 20 ಸಾವಿರ ಪುಸ್ತಕಗಳಿದ್ದು, ಸುಸಜ್ಜಿತ ಕಟ್ಟಡ ಮತ್ತು ಗ್ರಂಥಪಾಲಕರು ಇಲ್ಲ. ಕಾಲೇಜಿನ ಒಂದು ಬದಿಯಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು, ನದಿ ಬದಿಯಲ್ಲಿಯೇ ವಿಶಾಲವಾದ ಮೈದಾನ ಇದೆ. ಕಾಲೇಜಿನ ಸುತ್ತ ತಡೆಗೋಡೆ ಇಲ್ಲದ ಕಾರಣ ಮಳೆಗಾಲದಲ್ಲಿ ಪ್ರವಾಹದ ನೀರು ಮೈದಾನಕ್ಕೆ ನುಗ್ಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಾಲೇಜಿಗೆ ಬೇಕಾದ ವ್ಯವಸ್ಥೆ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸುತ್ತಾರೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಶಸ್ತವಾದ ಜಾಗ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತ್ಯಂತ ಪ್ರಶಸ್ತವಾದ ಜಾಗ. ಶೈಕ್ಷಣಿಕ ವಾತಾವರಣವನ್ನು ಹೊಂದಿರುವ ಇಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಆಗುತ್ತಿದ್ದು, ಎಂ.ಎ. ಮತ್ತು ಎಂ.ಕಾಂ. ಪದವಿಗೆ ಬಹಳ ಬೇಗ ಸೀಟುಗಳು ಭರ್ತಿ ಆಗುತ್ತಿವೆ.

–ಸುಬ್ಬಪ್ಪ ಕೈಕಂಬ, ಪ್ರಾಚಾರ್ಯರು

ಕಾಲೇಜಿನ ಬಗ್ಗೆ ಹೆಮ್ಮೆ ಆಗುತ್ತಿದೆ

ಸರ್ಕಾರಿ ಕಾಲೇಜಿನಲ್ಲಿ ಈ ರೀತಿಯ ಸಾಧನೆಯನ್ನು ತೋರಬಹುದು ಎಂದು ಭಾವಿಸಿರಲಿಲ್ಲ. ಇಲ್ಲಿ ಇರುವ ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಮತ್ತು ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವ ಮನೆಗಳಿಂದ ಬರುವವರು. ಕಾಲೇಜಿನ ಉಪನ್ಯಾಸಕರ ಪರಿಶ್ರಮ, ವಿದ್ಯಾರ್ಥಿಗಳ ಆಸಕ್ತಿ ಬಗ್ಗೆ ಖುಷಿ ಆಗುತ್ತಿದೆ. ಈ ಕಾಲೇಜಿನ ಕಾರ್ಯಾಧ್ಯಕ್ಷನಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ.

–ಎನ್.ಚಂದ್ರಹಾಸ ಶೆಟ್ಟಿ, ಕಾರ್ಯಾಧ್ಯಕ್ಷ, ಕಾಲೇಜು ಅಭಿವೃದ್ಧಿ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.