ADVERTISEMENT

ಮಂಗಳೂರು | ಬಿಳಿ ಬೋರ್ಡ್ ವಾಹನಗಳ ಮೇಲೆ ಕ್ರಮಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 13:27 IST
Last Updated 27 ಜೂನ್ 2024, 13:27 IST
ಶಾಲಾ ಮಕ್ಕಳನ್ನು ಸಾಗಿಸುವ ಖಾಸಗಿ ವಾಹನಗಳ ಮೇಲೆ ಕ್ರಮಕೈಗೊಳ್ಳಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ನೇತೃತ್ವದಲ್ಲಿ ಮಂಗಳೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಯಿತು
ಶಾಲಾ ಮಕ್ಕಳನ್ನು ಸಾಗಿಸುವ ಖಾಸಗಿ ವಾಹನಗಳ ಮೇಲೆ ಕ್ರಮಕೈಗೊಳ್ಳಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ನೇತೃತ್ವದಲ್ಲಿ ಮಂಗಳೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಯಿತು   

ಮಂಗಳೂರು: ಶಾಲಾ ಮಕ್ಕಳನ್ನು ಕರೆದೊಯ್ಯುವ ಖಾಸಗಿ (ವೈಟ್ ಬೋರ್ಡ್‌) ವಾಹನಗಳ ಮೇಲೆ ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಸದಸ್ಯರು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ‘ಪ್ರವಾಸಿ ವಾಹನಗಳಿಗೆ ಮಾತ್ರ ಶಾಲಾ ಮಕ್ಕಳನ್ನು ಕರೆದೊಯ್ಯಲು ಅನುಮತಿ ಇದೆ. ಆದರೆ, ಬಿಳಿ ಬೋರ್ಡ್ ವಾಹನಗಳು ನಿಯಮ ಉಲ್ಲಂಘಿಸಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತವೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.

ಬಿಳಿ ಬೋರ್ಡ್ ವಾಹನಗಳು ಯಾವುದೇ ಸುರಕ್ಷತಾ ಮಾನದಂಡ ಅನುಸರಿಸದೆ ಮಕ್ಕಳನ್ನು ಕೊಂಡೊಯ್ಯುತ್ತವೆ. ಚಾಲಕರ ನಿರ್ಲಕ್ಷ್ಯದಿಂದ ಹಲವಾರು ಅಪಘಾತಗಳು ಕೂಡ ಸಂಭವಿಸಿವೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಆರ್‌ಟಿಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಪ್ರಮುಖರಾದ ನವೀನ್ ಎಚ್ಚರಿಸಿದರು.

ADVERTISEMENT

ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ಆನಂದ್ ಮಾತನಾಡಿ, ‘ವಾಹನ ಬಾಡಿಗೆಯನ್ನೇ ಆಧರಿಸಿ ಬದುಕುತ್ತಿರುವ ಯೆಲ್ಲೊ ಬೋರ್ಡ್ ವಾಹನ ಚಾಲಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ನಿತ್ಯದ ತುತ್ತನ್ನು ಬಿಳಿ ಬೋರ್ಡ್‌ ವಾಹನದವರು ಕಿತ್ತುಕೊಳ್ಳುತ್ತಿದ್ದಾರೆ. ಈ ಬಗ್ಗೆ ಆರ್‌ಟಿಒಗೆ ದೂರು ನೀಡಿದರೆ, ಪೊಲೀಸ್ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ, ಪೊಲೀಸರು ಆರ್‌ಟಿಒ ಈ ಬಗ್ಗೆ ತಪಾಸಣೆ ನಡೆಸಬೇಕು ಎನ್ನುತ್ತಾರೆ. ಇದರಿಂದ ನಮಗೆ ಗೊಂದಲವಾಗಿದೆ. ಜಿಲ್ಲಾಧಿಕಾರಿ ಶಾಲಾ ಮುಖ್ಯಸ್ಥರ ಸಭೆ ಕರೆದು ಈ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಅತ್ತಾವರ, ಕಾರ್ಯಾಧ್ಯಕ್ಷ ಲೋಕೇಶ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.