ಮಂಗಳೂರು: ಸಾಗರೋತ್ತರ ರಫ್ತು ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ನಗರದ ಉದ್ಯಮಿಗಳನ್ನು ಶನಿವಾರ ಭೇಟಿ ಮಾಡಿದ ಬೆಲ್ಜಿಯಂನ ಆಂಟ್‌ವೆರ್ಪ್ ಬಂದರು ಕಂಪೆನಿಯ ಪ್ರತಿನಿಧಿಗಳು, ರಫ್ತು ವಹಿವಾಟು ವಿಸ್ತರಣೆಗೆ ತಮ್ಮ ಬಂದರಿನಲ್ಲಿ ಲಭ್ಯವಿರುವ ಉನ್ನತ ದರ್ಜೆಯ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಆಹ್ವಾನ ನೀಡಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ (ಕೆಸಿಸಿಐ) ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಆಂಟ್‌ವೆರ್ಪ್ ಬಂದರಿನ ಭಾರತದ ಪ್ರತಿನಿಧಿ ರಾಜ್ ಖಾಲಿದ್, ’ಬೆಲ್ಜಿಯಂನಲ್ಲಿರುವ ಏಳು ಪ್ರಮುಖ ಬಂದರುಗಳಲ್ಲಿ ಆಂಟ್‌ವೆರ್ಪ್ ಕೂಡ ಒಂದು. ಯುರೋಪಿಯನ್ ಒಕ್ಕೂಟ ಸೇರಿದಂತೆ ಒಟ್ಟು 28 ರಾಷ್ಟ್ರಗಳಿಗೆ ರಫ್ತು ವಹಿವಾಟು ನಡೆಸಲು ಈ ಬಂದರುಗಳೇ ಹೆಬ್ಬಾಗಿಲುಗಳಿದ್ದಂತೆ. ಆಂಟ್‌ವೆರ್ಪ್ ಇತರೆ ಬಂದರುಗಳಿಗಿಂತ ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಸೇವೆ ಒದಗಿಸುತ್ತಿದೆ’ ಎಂದರು.
ಆಂಟ್‌ವೆರ್ಪ್ ವಹಿವಾಟು ವಿಸ್ತರಣೆಗೆ ಪೂರಕವಾಗಿ ದೆಹಲಿಯಲ್ಲಿ ಯುರೋಪಿಯನ್ ಒಕ್ಕೂಟದ ಕಸ್ಟಮ್ಸ್ ತೆರಿಗೆ ಸಹಾಯ ಕೇಂದ್ರ ತೆರೆದಿದೆ. ಜಗತ್ತಿನ ಎಲ್ಲ ಪ್ರಮುಖ ರಾಷ್ಟ್ರಗಳಲ್ಲೂ ಪ್ರತಿನಿಧಿಗಳನ್ನು ಹೊಂದಿದೆ. ಭಾರತದ ಉಕ್ಕು, ರಾಸಾಯನಿಕ, ಗ್ಯಾಸೋಲಿನ್ ಮತ್ತು ಸಾಗರೋತ್ಪನ್ನಗಳ ರಫ್ತುದಾರರಿಗೆ ಈ ಬಂದರು ನೆಚ್ಚಿನ ತಾಣವಾಗುತ್ತಿದೆ ಎಂದು ಹೇಳಿದರು.
ತಮ್ಮ ಬಂದರಿನಲ್ಲಿ ಉಗ್ರಾಣದ ವ್ಯವಸ್ಥೆ ಉನ್ನತ ಗುಣಮಟ್ಟದಿಂದ ಕೂಡಿದೆ. ಬಣ್ಣಗಳು ಮತ್ತು ರಾಸಾಯನಿಕಗಳ ವಿತರಣೆ, ಸಾಗಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬಂದರಿನಿಂದ ರೈಲು ಮತ್ತು ರಸ್ತೆ ಸಂಪರ್ಕ ಕೂಡ ಅತ್ಯುತ್ತಮವಾಗಿದೆ. ಅತಿವೇಗದಲ್ಲಿ ಸರಕುಗಳ ಪೂರೈಕೆಗೆ ಈ ಬಂದರು ಒಳ್ಳೆಯ ಆಯ್ಕೆ. ಕಡಿಮೆ ವೆಚ್ಚದಲ್ಲಿ ರಫ್ತು ನಿರ್ವಹಣೆ ಮಾಡುವುದಕ್ಕೆ ನೆಚ್ಚಿನ ತಾಣ ಎಂದು ವಿವರಿಸಿದರು.
ಕಂಪೆನಿಯ ಮತ್ತೊಬ್ಬ ಪ್ರತಿನಿಧಿ ಮಾಲಿನಿ ದತ್ತ್ ಮಾತನಾಡಿ, ‘ಆಂಟ್‌ವೆರ್ಪ್ ಬಂದರಿನ ಮೂಲಕ ವಾರ್ಷಿಕ 22.30 ಕೋಟಿ ಟನ್‌ಗಳಷ್ಟು ಸರಕುಗಳ ಆಮದು ಮತ್ತು ರಫ್ತು ನಡೆಯುತ್ತಿದೆ. ಈ ಪೈಕಿ 72 ಲಕ್ಷ ಟನ್ ಸರಕು ಭಾರತದ ಮೂಲದ್ದು. ಮಂಗಳೂರಿನಿಂದ ಮೀನು ಸೇರಿದಂತೆ ಸಾಗರೋತ್ಪನ್ನಗಳು, ಕಾಫಿ, ರಾಸಾಯನಿಕಗಳು, ಗೋಡಂಬಿ ಈ ಬಂದರಿನ ಮೂಲಕ ಸಾಗಣೆಯಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಶೈತ್ಯಾಗಾರಗಳು, ಹವಾನಿಯಂತ್ರಿತ ಉಗ್ರಾಣಗಳು ಇರುವ ಆಂಟ್‌ವೆರ್ಪ್‌ನಿಂದ ಜಗತ್ತಿನ 1,400 ಬಂದರುಗಳ ಜೊತೆ ಸಂಪರ್ಕ ಸಾಧಿಸುವ ಅವಕಾಶವಿದೆ. ಪಶ್ಚಿಮ ಜರ್ಮನಿಗೆ ನೇರವಾದ ರೈಲು ಸಂಪರ್ಕವಿದೆ. ಉತ್ತರ ಫ್ರಾನ್ಸ್‌ಗೆ ರೈಲು ಮತ್ತು ಬಾರ್ಜ್ ಮೂಲಕ ಸಂಪರ್ಕವಿದೆ ಎಂದು ತಿಳಿಸಿದರು.
ಕೆಸಿಸಿಐ ಅಧ್ಯಕ್ಷತೆ ವತಿಕಾ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್ ಅತಿಥಿಗಳನ್ನು ಪರಿಚಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.