ಮಂಗಳೂರು: ಕಾಸರಗೋಡಿನ ಬೇಕಲ ಕಡಲ ಕಿನಾರೆಯಲ್ಲಿ ನಡೆಯಲಿರುವ ಬೇಕಲ ಉತ್ಸವದ ಎರಡನೇ ಆವೃತ್ತಿಯಲ್ಲಿ ಸಂಗೀತ ಮತ್ತು ನೃತ್ಯದ ಕಾರ್ಯಕ್ರಮ ವೈವಿಧ್ಯದೊಂದಿಗೆ ಆಹಾರ–ವಿಹಾರ, ಬೀಚ್ ಚಟುವಟಿಕೆ, ಸಾಹಸ, ಕ್ರೀಡೆಯ ರಂಜನೆ ಇರಲಿದೆ ಎಂದು ಆಯೋಜಕ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್.ಕುಂಞಂಬು ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ 22ರಿಂದ 31ರ ವರೆಗೆ ಬೇಕಲ ಬೀಚ್ ಪಾರ್ಕ್‌ನಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು 22ರಂದು ಸಂಜೆ 5.30ಕ್ಕೆ ಕೇರಳ ವಿಧಾನಸಭೆಯ ಅಧ್ಯಕ್ಷ ಎ.ಎನ್.ಶಂಸೀರ್ ಕಾರ್ಯಕ್ರಮ ಉದ್ಘಾಟಿಸುವರು. ಹೊಸ ವರ್ಷಕ್ಕೆ ಸ್ವಾಗತ ಕೋರುವ ಕಾರ್ಯಕ್ರಮದೊಂದಿಗೆ ಉತ್ಸವ ಕೊನೆಗೊಳ್ಳಲಿದೆ ಎಂದು ವಿವರಿಸಿದರು.
ಮೊದಲ ದಿನ ಮ್ಯೂಸಿಕಲ್ ಬ್ಯಾಂಡ್ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಶಿವಮಣಿ, ಪ್ರಕಾಶ್ ಉಳ್ಳಿಯೇರಿ ಮತ್ತು ಶರತ್ ಫ್ಯೂಷನ್ ಟ್ರಯೊ 2ನೇ ದಿನ ನಡೆಯಲಿದ್ದು ಕೆ.ಎಸ್ ಚಿತ್ರ ಮತ್ತು ಬಳಗದ ‘ಚಿತ್ರವಸಂತಂ’ 3ನೇ ದಿನ ಪ್ರಮುಖ ಕಾರ್ಯಕ್ರಮ. 4ನೇ ದಿನ ಎಂ.ಜಿ.ಶ್ರೀಕುಮಾರ್ ಮತ್ತು ಬಳಗದ ಸಂಗೀತ ಕಾರ್ಯಕ್ರಮ, 5ನೇ ದಿನ ಶೋಭನಾ ಅವರ ’ಡ್ಯಾನ್ಸ್ ನೈಟ್’ ಇರುತ್ತದೆ. 6ನೇ ದಿನ ಪದ್ಮಕುಮಾರ್ ಬಳಗದ ‘ಓಲ್ಡ್ ಈಸ್ ಗೋಲ್ಡ್’ 7ನೇ ದಿನ ‘ಫೋಕ್ ಬ್ಯಾಂಡ್’, 8ನೇ ದಿನ ‘ಮಾಪಿಳ ಪಾಟ್ ನೈಟ್’, 9ನೇ ದಿನ ಗೌರಿ ಲಕ್ಷ್ಮಿ ಅವರ ‘ಮ್ಯೂಸಿಕಲ್ ಬ್ಯಾಂಡ್’ ಮತ್ತು 10ನೇ ದಿನ ರಾಸ ಬೇಗಂ ಅವರ ಗಜಲ್ ಡುವೊ ಇರುತ್ತದೆ ಎಂದು ಕುಂಞಂಬು ತಿಳಿಸಿದರು.
ಮಕ್ಕಳ ಟಿಕೆಟ್‌ಗೆ ₹ 30 ಮತ್ತು ಇತರರ ಟಿಕೆಟ್‌ಗೆ ₹ 100 ಬೆಲೆ ನಿಗದಿ ಮಾಡಲಾಗಿದೆ. ಉತ್ಸವ ನಡೆಯುವ ಎಲ್ಲ ದಿನ ಬೇಕಲ ನಿಲ್ದಾಣದಲ್ಲಿ ಎಗ್‌ಮೋರ್, ವೆಸ್ಟ್ ಕೋಸ್ಟ್ ಮತ್ತು ಪರಶುರಾಮ ರೈಲುಗಳು ಒಂದು ನಿಮಿಷ ನಿಲ್ಲಲಿವೆ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಸೌಲಭ್ಯವೂ ಇದೆ. ವಾಹನ ನಿಲುಗಡೆಗೆ ವಿಶಾಲ ಜಾಗವನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಶಿಜಿನ್ ಪಿ, ಯು.ಎಸ್.ಪ್ರಸಾದ್, ಎಂ.ಎ ಲತೀಫ್ ಮತ್ತು ಮಣಿಕಂಠನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.