ಬೆಳ್ತಂಗಡಿ: ‘ವಸಂತ ಬಂಗೇರರಲ್ಲಿ ಹೊರಗೆ ಕಠೋರವಾದ ಹೊದಿಕೆ ಇತ್ತು. ಆದರೆ, ಅವರು ಬಹಳ ಮೃದು ಮನಸ್ಸಿನ ವ್ಯಕ್ತಿಯಾಗಿದ್ದರು. ಅವರ ಮರಣದ ಬಳಿಕವೂ ಅವರಿಗೆ ಇಷ್ಟೊಂದು ಗೌರವ, ಪ್ರೀತಿ ಸಿಗುತ್ತಿದೆಯೆಂದರೆ ಅವರು ಈ ಭಾಗದ ದೇವರಾಜ ಅರಸು ಆಗಿದ್ದಾರೆ’ ಎಂದು ವಿಧಾನ ಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದರು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾಯನಕೆರೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆದ ಬಂಗೇರರಿಗೆ ಸಾವಿರದ ನುಡಿನಮನಗಳು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘
‘ಅಳದಂಗಡಿ ಅರಮನೆಯ ಅರಸರಾ ಡಾ. ಪದ್ಮಪ್ರಸಾದ ಅಜಿಲ ಮಾತನಾಡಿ, ‘ಬಂಗೇರರು ಬೆಳ್ತಂಗಡಿಯ ಆಪತ್ಭಾಂಧವರಾಗಿದ್ದರು. ಎಲ್ಲಾ ಸಮುದಾಯವನ್ನು ಪ್ರೀತಿಯಿಂದ ನೋಡುವ ಜತೆಗೆ ಜೈನ ಸಮುದಾಯದ ಕುರಿತು ಒಳ್ಳೆಯ ಅಭಿಪ್ರಾಯ ಬೆಳೆಸಿಕೊಂಡಿದ್ದರು’ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ‘ ವಸಂತ ಬಂಗೇರರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಸಮಾಜದ ಶಕ್ತಿಯಾಗಿದ್ದರು. ಸಾಮಾನ್ಯ ವ್ಯಕ್ತಿಯ ಹೃದಯದ ನೋವನ್ನು ತಿಳಿದುಕೊಂಡಿದ್ದರು. ಜನರಿಂದ ಜನರಿಗಾಗಿ ಜನರಿಗೋಸ್ಕರ ಜೀವನ ಮೀಸಲಾಗಿರಿಸಿದ ನಾಯಕ’ ಅವರು ಎಂದರು.
ವಸಂತ ಬಂಗೇರರ ಪತ್ನಿ ಸುಜಿತಾ ವಿ. ಬಂಗೇರ, ಅಳಿಯ ಧರ್ಮ ವಿಜೇತ್, ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಮೂರುಗೋಳಿ ಮಸೀದಿಯ ಅತಾವುಲ್ಲಾ ಹಮಾಮಿ ಸಖಾಪಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ವಂದನಾ ಭಂಡಾರಿ ಹಾಗೂ ನಮಿತಾ ಪೂಜಾರಿ ಇದ್ದರು.
ಪ್ರಮುಖರಾದ ನಾಮದೇವ್ ರಾವ್ ಮುಂಡಾಜೆ, ಬಿ.ಎಂ.ಭಟ್, ಅತ್ರಾಡಿ ಅಮೃತ ಶೆಟ್ಟಿ, ಶಿಬಿ ಧರ್ಮಸ್ಥಳ, ಹಾಜಿ ಅಬ್ದುಲ್ ಲತೀಪ್ ಸಾಹೇಬ್, ಮನೋಹರ್ ಕುಮಾರ್ ನುಡಿನಮನ ಸಲ್ಲಿಸಿದರು. ವಸಂತ ಬಂಗೇರರ ಪುತ್ರಿಯರಾದ ಪ್ರಿತಿತಾ ಬಂಗೇರ, ಬಿನುತಾ ಬಂಗೇರ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.