ADVERTISEMENT

ಕನ್ನಡ ಸಾಹಿತ್ಯ ಬೆಳೆಯದಿದ್ದರೆ ಭಾಷೆ ಬೆಳೆಯದು: ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 13:58 IST
Last Updated 21 ಸೆಪ್ಟೆಂಬರ್ 2024, 13:58 IST
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸಾಹಿತಿ ನಾ.ಮೊಗಸಾಲೆ ದಂಪತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಭಿನಂದಿಸಿದರು
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸಾಹಿತಿ ನಾ.ಮೊಗಸಾಲೆ ದಂಪತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಭಿನಂದಿಸಿದರು   

ಮೂಡುಬಿದಿರೆ: ಕಾಂತಾವರದಂಥ ಗ್ರಾಮೀಣ ಪ್ರದೇಶದಲ್ಲಿ ದಶಕಗಳ ಹಿಂದೆಯೇ ಸಾಹಿತ್ಯ ಪ್ರಶಸ್ತಿ ನೀಡುವ ಮೂಲಕ ಯುವ ಸಾಹಿತಿಗಳಿಗೆ ನಾ. ಮೊಗಸಾಲೆ ಅವರು ಪ್ರೇರಣೆ ನೀಡಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗದಿದ್ದರೆ ಕನ್ನಡ ಭಾಷೆ ಬೆಳೆಯುವುದಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಇಲ್ಲಿನ ಸಮಾಜಮಂದಿರಲ್ಲಿ ಸಮಾಜ ಮಂದಿರ ಸಭಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮೂಡುಬಿದಿರೆ ತಾಲ್ಲೂಕು ಘಟಕದ ಆಶ್ರಯದಲ್ಲಿ ನಡೆದ ಸಾಹಿತಿ ನಾ.ಮೊಗಸಾಲೆ ಅವರ ಅಭಿನಂದನಾ ಸಮಾರಂಭದಲ್ಲಿ ನಾ.ಮೊಗಸಾಲೆ, ಪ್ರೇಮಾ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

ಹಂಪಿ ವಿವಿಯ ನಿವೃತ್ತ ಕುಲಪತಿ ಬಿ.ಎ.ವಿವೇಕ ರೈ ಅಭಿನಂದನಾ ಭಾಷಣ ಮಾಡಿದರು.

ADVERTISEMENT

ಮಾಜಿ ಸಚಿವ ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಅಭಿನಂದನೆ ಸ್ವೀಕರಿಸಿದ ನಾ.ಮೊಗಸಾಲೆ, ಜನರ ನಡುವೆ ಸಾರ್ಥಕ ಬದುಕು ನಡೆಸಿದ ಸಂತೃಪ್ತಿಯಿದೆ. ನನಗೆ ಸಂಘಟನೆಗಿಂತ ಸಾಹಿತ್ಯವೇ ದೊಡ್ಡದು ಎಂದು ಹೇಳಿದರು.

ಮೊಗಸಾಲೆ ಅವರ ಕುರಿತು ಪತ್ರಕರ್ತ ಹರೀಶ್ ಆದೂರು ರಚಿಸಿದ ಸಾಕ್ಷ್ಯಚಿತ್ರದ ಪೋಸ್ಟ್‌ ಅನ್ನು ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು.

ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಸಾರ್ವಜನಿಕ ಗಣೇಶೋತ್ಸವ ಸಮಿತಿ  ಅಧ್ಯಕ್ಷ ಕೆ.ಶ್ರೀಪತಿ ಭಟ್ ಭಾಗವಹಿಸಿದ್ದರು. ಸದಾನಂದ ನಾರಾವಿ ವಂದಿಸಿದರು. ಉಪನ್ಯಾಸಕ ಯೋಗೀಶ್ ಕೈರೋಡಿ ನಿರೂಪಿಸಿದರು.

ಕೃತಿ ಸಮೀಕ್ಷೆ, ಸನ್ಮಾನ: ಸಾಹಿತಿ ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮೊಗಸಾಲೆಯವರ ಕೃತಿ ಸಮೀಕ್ಷೆಯಲ್ಲಿ ಸಾಹಿತಿ ಬಿ. ಜನಾರ್ದನ ಭಟ್ (ಕಾದಂಬರಿ), ಎಸ್‌ಡಿಎಂ ಕಾಲೇಜಿನ ಸಹ ಪ್ರಾದ್ಯಾಪಕ ರವಿಶಂಕರ ಜಿ.ಕೆ.(ಕಾವ್ಯ), ಪ್ರಾಧ್ಯಾಪಕ ಸುಭಾಷ್ ಪಟ್ಟಾಜೆ (ಸಣ್ಣಕತೆ) ಸಮೀಕ್ಷೆ ನಡೆಸಿದರು.

ಲೇಖಕರಾದ ರವಿಶಂಕರ ಜಿ.ಕೆ, ಅಂಶುಮಾಲಿ, ಸುಭಾಸ್ ಪಟ್ಟಾಜೆ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.